ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ಟಾಯ್ಲೆಟ್ ವೀಡಿಯೋ ಪ್ರಕರಣದ ಬಗ್ಗೆ ರಾಜ್ಯದಾದ್ಯಂತ ಸುದ್ದಿ ಯಾಗುವಲ್ಲಿ ದೊಡ್ಡ ಕೊಡುಗೆ ನೀಡಿರುವ ಸಂಘ ಪರಿವಾರ ಹಾಗೂ ಮಾಧ್ಯಮಗಳು ಉಡುಪಿಯ ಆಜುಬಾಜಿನಲ್ಲಿರುವ ಮೂಲ್ಕಿ ಪಕ್ಷಿಕೆರೆ ಘಟನೆ ಬಗ್ಗೆ ತುಟಿಕ್ ಪಿಟಿಕ್ ಅನ್ನದಿರುವುದು ಸಂಘಪರಿವಾರದ ದ್ವಿಮುಖ ಧೋರಣೆಯ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಆರೋಪಿಗಳು ಇತರ ಧರ್ಮಕ್ಕೆ ಸೇರಿದರೆ ಮಾತ್ರವೇ ಅದು ಗಂಭೀರ ಪ್ರಕರಣವೇ..? ಅದೇ ರೀತಿಯ ಪ್ರಕರಣ ಸ್ವ ಸಮುದಾಯದ ಆರೋಪಿಗಳು, ಅದರಲ್ಲೂ ತಮ್ಮದೇ ಸಂಘಟನೆಯ ಕಾರ್ಯಕರ್ತರು ನಡೆಸಿದರೆ ಅದು ಗಂಭೀರ ಪ್ರಕರಣವಲ್ಲವೇ..? ಅನ್ನುವ ಚರ್ಚೆ ಇದೀಗ ಎದ್ದಿದೆ.
ಉಡುಪಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲವು ವಿದ್ಯಾರ್ಥಿನಿಯರು ಅದೇ ಕಾಲೇಜಿನ ಹಿಂದೂ ಸ್ನೇಹಿತೆಯರ ಟಾಯ್ಲೆಟ್ ವೀಡಿಯೋ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಅದಕ್ಕೆ ಉಪ್ಪು ಖಾರ ಸೇರಿಸಿ ದೊಡ್ಡ ಸುದ್ಧಿಯಾಗುವಂತೆ ಸಂಘಪರಿವಾರ ಕಸರತ್ತು ನಡೆಸಿತ್ತು. ಬಿಜೆಪಿ ಶಾಸಕರು ಈ ಬಗ್ಗೆ ಗಂಭೀರ ಸ್ಟೇಟ್ ಮೇಂಟ್ ನೀಡಿದರು. ಕೇಂದ್ರ ಮಹಿಳಾ ಆಯೋಗ ದೌಡೆತ್ತಿ ಬಂದಿತ್ತು. ಕಾಲೇಜು ಕ್ಯಾಂಪಸ್ ನೊಳಗಡೆ ಮುಗಿದಿದ್ದ ಪ್ರಕರಣವನ್ನು ಬಿಜೆಪಿ, ಪರಿವಾರದ ಸಂಘಟನೆ ದೊಡ್ಡ ಇಶ್ಯೂ ಮಾಡಿತ್ತು ಅನ್ನುವುದು ಇದೀಗ ಬೆಳಕಿಗೆ ಬಂದ ಸತ್ಯಗಳು.
ನಿನ್ನೆಯಷ್ಟೇ ಮೂಲ್ಕಿ ಸಮೀಪದ ಪಕ್ಷಿಕೆರೆ ಎಂಬಲ್ಲಿ ಹಿಂದೂ ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತ ಸುಮಂತ ಪೂಜಾರಿ ಎಂಬಾತ ತನ್ನ ನೆರೆಮನೆಯ ಶೌಚಾಲಯದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬರ ಸ್ನಾನಗೃಹದ ವಿಡಿಯೋಗಳನ್ನು ಕದ್ದು ಮುಚ್ಚಿ ಮಾಡುತ್ತಿದ್ದ ಎನ್ನಲಾಗಿದ್ದು, ಈ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು ಸ್ಥಳೀಯರು ಸೇರಿ ಸುಮಂತ್ ನನ್ನು ಹಿಡಿದು ಥಳಿಸಿದ್ದು, ಮೂಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿ ಸುಮಂತ್ ನನ್ನು ಒಪ್ಪಿಸಿದ್ದರು ಹಾಗೂ ಪೊಲೀಸರು ಮಹಿಳೆಯ ಸ್ನಾನ ಮಾಡುವ ವಿಡಿಯೋ ಮಾಡಿದ್ದ ಮೊಬೈಲ್ ನನ್ನು ವಶಕ್ಕೆ ಪಡೆದಿದ್ದರು.
ಆನಂತರ ನಡೆದಿದ್ದೇ ಬೇರೆ. ಹಿಂದೂ ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತ ನಾದುದರಿಂದ ಎಂಟ್ರಿಯಾದ ಸ್ಥಳೀಯ ಸಂಘ ಪರಿವಾರದ ನಾಯಕರು ಪೊಲೀಸರಿಗೆ ಒತ್ತಡ ಹಾಕಿ ಜಾಮೀನು ನೀಡಬಹುದಾದ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇವತ್ತು ವಿಡಿಯೋ ಮಾಡಿದವರು ನಾಳೆ ಇನ್ನೇನೊ ಮಾಡಲ್ಲ ಅನ್ನುವುದಕ್ಕೆ ಏನು ಗ್ಯಾರಂಟಿ.! ಬಿಜೆಪಿ ಶಾಸಕರು ಸೇರಿದಂತೆ ಸಂಘಪರಿವಾರದ ಮುಖಂಡರು ಪಕ್ಷಿಕೆರೆ,ವಿಟ್ಲ ಘಟನೆ ಬಗ್ಗೆ ಮಾತನಾಡುತ್ತಿಲ್ಲ. ತಮ್ಮ ಕಾರ್ಯಕರ್ತರನ್ನು ತಾವೇ ಸೇಫ್ ಮಾಡುತ್ತಿದ್ದಾರೆ. ಇದೆಂತಹ ದೊಂಬರಾಟ ಪರಿವಾರದ್ದು..?