ಮೂಲರಪಟ್ನ ಹೊಸ ಸೇತುವೆ ತಳ ಬಾಗದಲ್ಲೇ ಅಕ್ರಮ ಮರಳುಗಾರಿಕೆ!

ಕರಾವಳಿ

ಗಣಿ ಅಧಿಕಾರಿಗಳ ದಾಳಿ ಸಾವಿರಾರು ಮೆಟ್ರಿಕ್ ಟನ್ ಮರಳು ಜಪ್ತಿ

ಬಡಗಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರಟೀಲ್ ಬೆಟ್ಟು, ಗುಡಾಲಪಡ್ಪುವಿನ ನದಿ ಬದಿ ಸುಮಾರು 8 ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾದ 2130 ಮೆಟ್ರಿಕ್ ಟನ್ ಮರಳನ್ನು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ಅಕ್ರಮವಾಗಿ ಮರಳು ದಾಸ್ತಾನಿರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಬಡಗಬೆಳ್ಳೂರು ವ್ಯಾಪ್ತಿಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮರಳು ಜಪ್ತಿ ಮಾಡಿರುತ್ತಾರೆ.

ಗಂಜಿಮಠ-ಸೊರ್ನಾಡು-ಬಂಟ್ವಾಳ ರಾಜ ರಸ್ತೆಯ ಮೂಲರಪಟ್ನ ಎಂಬಲ್ಲಿ ಹಳೇ ಸೇತುವೆ ಬಳಿ ಅಕ್ರಮವಾಗಿ ಮರಳುಗಾರಿಕೆ ನಡೆಸಿದ ಪರಿಣಾಮ 2018 ರಲ್ಲಿ ಸೇತುವೆಯೇ ಮುರಿದು ಬಿದ್ದಿತ್ತು. ಇದೀಗ ಹೊಸ ಸೇತುವೆ ಬಳಿಯಲ್ಲೂ ಅಕ್ರಮವಾಗಿ ಮರಳು ತೆಗೆಯುತ್ತಿದ್ದರು. ನದಿಪಾತ್ರಕ್ಕೆ ಹತ್ತಿರದ ಒಳಪ್ರದೇಶ ಸರ್ವೇ ನಂಬ್ರ 172 ರಲ್ಲಿ 7 ಕಡೆ ರಾಶಿ ಹಾಕಲಾಗಿದ್ದ 1467 ಮೆಟ್ರಿಕ್ ಟನ್ ಹಾಗೂ ಸರ್ವೇ ನಂಬರ್ 72 ರಲ್ಲಿ ಒಂದು ಕಡೆ ಸಂಗ್ರಹಿಸಿಡಲಾಗಿದ್ದ 663 ಮೆಟ್ರಿಕ್ ಟನ್ ಅಕ್ರಮ ಮರಳು ಜಪ್ತಿ ಮಾಡಲಾಗಿದೆ ಎಂದು ಗಿರೀಶ್ ಮೋಹನ್ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಗಣಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಕೆ.ಎಂ ನಾಗಭೂಷಣ್, ಗಿರೀಶ್ ಮೋಹನ್, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ರೂಪಶ್ರೀ, ಗ್ರಾಮ ಕರಣಿಕ ನಾಗರಾಜ, ಸ್ಥಳೀಯ ನಿವಾಸಿ ಶಶಿಕಿರಣ್ ಉಪಸ್ಥಿತರಿದ್ದರು.