ಮಂಗಳೂರು ಕಮೀಷನರ್ ಕುಲದೀಪ್ ಕುಮಾರ್ ಜೈನ್ ಡಿಡೀರ್ ವರ್ಗಾವಣೆ: ಅಸಲಿ ಹಕೀಕತ್ತು.!

ಕರಾವಳಿ

ಬಿಜೆಪಿಯ ಆ ಎಡವಟ್ಟು ದಕ್ಷ ಅಧಿಕಾರಿಗೆ ಉರುಳಾಯಿತು.!

ಮಂಗಳೂರು ಕಮೀಷನರ್ ಕುಲದೀಪ್ ಕುಮಾರ್ ಜೈನ್ ರಾತ್ರೋರಾತ್ರಿ ವರ್ಗಾವಣೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಸುದ್ದಿ ಮಾಡಿರುವುದಂತೂ ಸತ್ಯ. ಸಾಮಾಜಿಕ ಕಾರ್ಯಕರ್ತರು, ವಿವಿಧ ಕ್ಷೇತ್ರಗಳ ಗಣ್ಯರು ಕಮೀಷನರ್ ವರ್ಗಾವಣೆ ಬಗ್ಗೆ ರಾಜ್ಯ ಸರ್ಕಾರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಟೀಕಿಸುತ್ತಿದ್ದಾರೆ. ಕೆಲವರಂತೂ ಗಂಧಗಾಳಿ ಗೊತ್ತಿಲ್ಲದವರಂತೆ ವಿವಿಧ ವಾಯ್ಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕಮೀಷನರ್ ವರ್ಗಾವಣೆ ಹಿಂದೆ ಇರುವ ಕಾರಣಗಳ ಬಗ್ಗೆ ತಿಳಿಸುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅಸಲಿಗೆ ಮಂಗಳೂರು ಕಮೀಷನರ್ ವರ್ಗಾವಣೆ ಹಿಂದಿನ ರಹಸ್ಯವೇ ಬೇರೆ.!

ಮಂಗಳೂರು ಕಮೀಷನರ್ ಕುಲದೀಪ್ ಕುಮಾರ್ ಜೈನ್ ದಕ್ಷರು, ಪ್ರಾಮಾಣಿಕರು,ನಿಷ್ಠಾವಂತರು. ಜಿಲ್ಲೆಯಲ್ಲಿ ಕೇವಲ ಆರು ತಿಂಗಳಲ್ಲಿ ತನ್ನ ಇಮೇಜಿನ ಮೂಲಕ ಸಿಂಗಂ ಆಗಿ ಗುರುತಿಸಿಕೊಂಡವರು. ಡ್ರಗ್ಸ್ ಮಾಫಿಯಾದ ವಿರುದ್ಧ ಸೆಟೆದು ನಿಂತು ಡ್ರಗ್ಸ್ ದಂಧೆಕೋರರ ಬುಡಕ್ಕೆ ಕೊಳ್ಳಿ ಇಟ್ಟರು.ಅಕ್ರಮ ಮರಳು ಮಾಫಿಯಾ, ಕ್ಲಬ್ ದಂಧೆ, ಜೂಜಾಟ,ಮಸಾಜ್ ಮಾಫಿಯಾ,ಮಟ್ಕಾ ದಂಧೆ ಸೇರಿದಂತೆ ಅನೇಕ ದೋ ನಂಬರ್ ದಂಧೆಕೋರರಿಗೆ ಬಿಸಿ ಮುಟ್ಟಿಸಿ ಮಂಗಳೂರು ನಗರಕ್ಕೆ ಕಾಲಿಡದಂತೆ ಮಾಡಿದ ಕೀರ್ತಿ ಕುಲದೀಪ್ ಕುಮಾರ್ ಜೈನ್ ಅವರಿಗೆ ಸಲ್ಲುತ್ತದೆ.

ಅದೇನೇ ಇದ್ದರೂ ಸರಕಾರ ಎರಡು ದಿನಗಳ ಹಿಂದೆಯಷ್ಟೇ ಮಂಗಳೂರು ಕಮೀಷನರ್ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿತ್ತು. ಹೊಸ ಸರಕಾರ ಬಂದಾಗ ಹಳಬರನ್ನು ಬದಲಾಯಿಸುವುದು ಸಹಜ ಪ್ರಕ್ರಿಯೆ. ಆದರೆ ದಕ್ಷ, ಪ್ರಾಮಾಣಿಕರಾಗಿದ್ದ ಮಂಗಳೂರು ಕಮೀಷನರ್ ಡಿಡೀರ್ ವರ್ಗಾವಣೆ ಜನತೆಯಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.

ಕುಲದೀಪ್ ಕುಮಾರ್ ಜೈನ್ ಅವರು ಮಂಗಳೂರು ಕಮೀಷನರ್ ಆಗಿದ್ದ ಶಶಿಕುಮಾರ್ ವರ್ಗಾವಣೆ ಆದ ಬಳಿಕ ನಿಯುಕ್ತಿಗೊಂಡ ಎಸ್.ಪಿ ಗ್ರೇಡಿನ ಅಧಿಕಾರಿಯಾಗಿದ್ದರು. ಬೆಂಗಳೂರಿನ ಟ್ರಾಫಿಕ್ ಡಿಸಿಪಿಯಾಗಿದ್ದವರನ್ನು ಏಕಾಏಕಿ ಮಂಗಳೂರು ಕಮೀಷನರ್ ಆಗಿ ಅಂದಿನ ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿತ್ತು. ಇದು ಹಲವು ಹಿರಿಯ ಅಧಿಕಾರಿಗಳನ್ನು ಹುಬ್ಬೇರಿಸುವಂತೆ ಮಾಡಿತ್ತು.

ಮಂಗಳೂರು ಕಮೀಷನರ್ ಆಗಿದ್ದ ಶಶಿಕುಮಾರ್ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಇಲ್ಲಿ ಸೇವೆ ಸಲ್ಲಿಸಿದ್ದರು. ಮೊದಲಿಗೆ ದಕ್ಷ ಅಧಿಕಾರಿ ಎಂಬ ಇಮೇಜ್ ಇದ್ದರೂ ನಂತರ ಭ್ರಷ್ಟಾಚಾರ, ಆಡಳಿತಾತ್ಮಕ ವಿಚಾರಗಳಲ್ಲಿ ದ್ವಂದ್ವ ನಿಲುವಿನಿಂದಾಗಿ,ಎಡಿಜಿಪಿ ಅಲೋಕ್ ಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಭ್ರಷ್ಟಾಚಾರದ ಕೂಗು ವಿಪರೀತವಾದಾಗ ಖುದ್ದು ಎಡಿಜಿಪಿ ಮಂಗಳೂರಿಗೆ ಆಗಮಿಸಿ ಸಾರ್ವಜನಿಕ ಜನಾಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದ್ದರು. ಆದಾದ ನಂತರ ಶಶಿಕುಮಾರ್ ಅವರನ್ನು ರೈಲ್ವೇ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ಬಂದವರೇ ಕುಲದೀಪ್ ಕುಮಾರ್ ಜೈನ್.ಎಸ್.ಪಿ ಗ್ರೇಡಿನ ಅಧಿಕಾರಿ.

ಮಂಗಳೂರು ಕಮೀಷನರ್ ಹುದ್ದೆಯು ಡಿಐಜಿ ಅಥವಾ ಐಜಿ ಗ್ರೇಡಿನ ಅಧಿಕಾರಿಗಳಿಗೆ ಮಾತ್ರ ಸೀಮಿತ. ಅಂದಿನ ಬಿಜೆಪಿ ಸರ್ಕಾರ ಕಾನೂನು ಜ್ಞಾನದ ಕೊರತೆ ಇಂದಲೋ.. ಏನೋ ಡಿಐಜಿ, ಐಜಿ ಗ್ರೇಡಿನ ಅಧಿಕಾರಿ ಅಲ್ಲದ ಕೇವಲ ಎಸ್ಪಿ ಗ್ರೇಡಿನ ಕುಲದೀಪ್ ಕುಮಾರ್ ಜೈನ್ ಅವರನ್ನು ಮಂಗಳೂರು ಕಮೀಷನರ್ ಆಗಿ ನೇಮಿಸಿತ್ತು. ಆಗ ಅವರಿಗೆ ಇದ್ದಿದ್ದು ಬರೇ ಎರಡು ವರ್ಷಗಳ ಅನುಭವ ಅಷ್ಟೇ. ಬಿಜೆಪಿ ಸರ್ಕಾರ ಅನೇಕ ಕಡೆಗಳಲ್ಲಿ ಇಂತಹ ಎಡವಟ್ಟುಗಳನ್ನೇ ಮಾಡಿಕೊಂಡಿದೆ. ಬಿಜೆಪಿ ಸರಕಾರದ ಎಡವಟ್ಟನ್ನು ಮರೆಮಾಚಲು ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಏನೂ ಅರಿಯದವರಂತೆ ಕಮೀಷನರ್ ಡಿಡೀರ್ ವರ್ಗಾವಣೆ ಬಗ್ಗೆ ಧ್ವನಿ ಎತ್ತಿದ್ದಾರೆ.ಆದರೆ ಇದು ಕಾನೂನು ಮೀರಿ ನೇಮಿಸಿದ ಹುದ್ದೆ ಎಂಬ ತಿಳುವಳಿಕೆ ಇದ್ದರೂ,ಉನ್ನತ ಸ್ಥಾನದಲ್ಲಿರುವವರು ಜನತೆಯ ಮುಂದೆ ತಪ್ಪು ಮಾಹಿತಿ ನೀಡುತ್ತಿರುವುದು ಶೋಭೆ ತರುವಂತದ್ದಲ್ಲ.

ಡಿಐಜಿ ಅಥವಾ ಐಜಿ ಗ್ರೇಡಿನ ಅಧಿಕಾರಿಗಳನ್ನು ಮಹತ್ವದ ಕಮೀಷನರ್ ಹುದ್ದೆಗೆ ನೇಮಕ ಮಾಡಿಕೊಳ್ಳದಿದ್ದರೆ ಕಾನೂನಾತ್ಮಕವಾಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮಂಗಳೂರು ಅತೀ ಸೂಕ್ಷ್ಮ ಪ್ರದೇಶ.ಒಂದು ವೇಳೆ ಕೋಮುಗಲಭೆ, ದಂಗೆಯಂತಹ ಭೀಕರ ಸಮಸ್ಯೆಗಳು ಎದುರಾದರೆ,ತುರ್ತು ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಕೆಲವು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಎಸ್ಪಿ ಗ್ರೇಡಿನ ಅಧಿಕಾರಿಗಳಿಗೆ ಕಮೀಷನರ್ ವ್ಯಾಪ್ತಿಯಲ್ಲಿರುವುದಿಲ್ಲ. ಮಾತ್ರವಲ್ಲ ಪೋಲೀಸ್ ಇಲಾಖೆಗೆ ಸರಕಾರದಿಂದ ನೀಡಲ್ಪಡುವ ಸವಲತ್ತುಗಳಿಗೆ ಕಾನೂನಾತ್ಮಕವಾಗಿ ಸಮಸ್ಯೆ ತಲೆದೋರುತ್ತದೆ. ಇದನ್ನೆಲ್ಲ ಮನಗಂಡು ಈಗಿನ ರಾಜ್ಯ ಸರ್ಕಾರ ಬಿಜೆಪಿ ಎಡವಟ್ಟು ಮಾಡಿಕೊಂಡು ನೇಮಕ ಮಾಡಿಕೊಂಡ ಹುದ್ದೆಗಳನ್ನು ತೆರವುಗೊಳಿಸಿದೆ.

ಇನ್ನು ಕುಲದೀಪ್ ಕುಮಾರ್ ಜೈನ್ ಚುನಾವಣೆ ಸಂದರ್ಭದಲ್ಲಿ ನಡೆದ ವರ್ಗಾವಣೆಯಾಗಿದ್ದರಿಂದ ಅವರು ಚುನಾವಣೆಯ ನಂತರ ವರ್ಗಾವಣೆ ಆಗಬೇಕಿತ್ತು. ಆದರೆ ದಕ್ಷ, ಸರಳತೆ, ಖಡಕ್ ಆಫೀಸರ್ ಅನ್ನುವ ಹಿರಿಮೆಯಿಂದಾಗಿ ಆ ಸ್ಥಾನದಲ್ಲಿ ಉಳಿದುಕೊಂಡಿದ್ದರು.

ಹಿಂದಿನ ಬಿಜೆಪಿ ಸರ್ಕಾರ ಕಾನೂನು ಮೀರಿ ಜೈನ್ ಅವರನ್ನು ಕಮೀಷನರ್ ಹುದ್ದೆಗೆ ನೇಮಿಸಿಕೊಂಡಿತ್ತು. ಇಂತಹ ಸತ್ಯ ತಿಳಿಯದ ಕೆಲವು ಸಾಮಾಜಿಕ ಕಾರ್ಯಕರ್ತರು,ವಾಟ್ಸ್ ಅಪ್ ವೀರರು ಅಸಲಿ ವಿಚಾರ ತಿಳಿಸದೆ ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ಸೃಷ್ಟಿಸುತ್ತಿದ್ದಾರೆ.

ಕುಲದೀಪ್ ಕುಮಾರ್ ಜೈನ್ ಕಾರ್ಯವೈಖರಿಯಿಂದ ಮಾಫಿಯಾ ಮಂದಿ ಸಿಡಿದು ನಿಂತಿರುವುದು ನಿಜ. ಮಾಫಿಯಾ ಬೆಂಬಲಿಸುವ ಕೆಲ ರಾಜಕಾರಣಿಗಳು ಕಮೀಷನರ್ ವರ್ಗಾವಣೆಗೆ ತೆರೆಮರೆಯ ಕಸರತ್ತು ನಡೆಸುತ್ತಾ ಬಂದಿರುವುದು ಸತ್ಯ. ಆದರೆ ಬಿಜೆಪಿ ಮಾಡಿದ ಎಡವಟ್ಟೊಂದು ಇಂದು ದಕ್ಷ, ಪ್ರಾಮಾಣಿಕ ಅಧಿಕಾರಿ ಡಿಡೀರ್ ವರ್ಗಾವಣೆ ಗೊಳ್ಳಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಡಿಐಜಿ ಸ್ಥಾನಕ್ಕೆ ಭಡ್ತಿ ಪಡೆದು ಕುಲದೀಪ್ ಕುಮಾರ್ ಜೈನ್ ಮಂಗಳೂರು ಕಮೀಷನರ್ ಆಗಿ ಬರಲಿ ಎಂಬುದೇ ಇಲ್ಲಿನ ನಾಗರೀಕರ ಆಶಯ.ಕುಲದೀಪ್ ಕುಮಾರ್ ಜೈನ್ ಐಪಿಎಸ್ ರವರಿಗೆ ಶುಭವಾಗಲಿ ಎಂದು ಹಾರೈಸೋಣ.