ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ಅಂಗಸಂಸ್ಥೆಯಾದ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

ಕರಾವಳಿ

ಜಿಲ್ಲೆಯ 70 ಸರ್ಕಾರಿ ಹಾಗೂ ಅನುದಾನಿತ ಕಾಲೇಜಿನ 586 ವಿದ್ಯಾರ್ಥಿನಿಯರಿಗೆ 47.64 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್ ಇದರ ಅಂಗಸಂಸ್ಥೆಯಾದ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯ 70 ಸರ್ಕಾರಿ ಹಾಗೂ ಅನುದಾನಿತ ಕಾಲೇಜಿನ ಸುಮಾರು 586 ವಿದ್ಯಾರ್ಥಿನಿಯರಿಗೆ ಸುಮಾರು 47.64 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಗುರುವಾರದಂದು ಮಂಗಳೂರು ನಗರದ ಪುರಭವನದಲ್ಲಿ ನಡೆಯಿತು. ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ಮಕ್ಕಳು ವಿದ್ಯಾವಂತರಾಗಿ ಹೆತ್ತವರನ್ನು ಪಾಲನೆ, ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಈ ವಿದ್ಯಾರ್ಥಿವೇತನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಂಗಳೂರು ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಮಾತನಾಡಿ ಇಂದು ವಿದ್ಯಾರ್ಥಿವೇತನ ಪಡೆದು ಉನ್ನತ ಹುದ್ದೆಗೆ ಹೋಗಿ ಮುಂದೆ ನೀವು ಇತರರಿಗೆ ಸಹಾಯ ಹಸ್ತ ನೀಡುವಂತವರಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತನ್ನು ಹೇಳಿದರು.

ಶ್ರೀಮತಿ. ಮಮತ ಗಟ್ಟಿಯವರು ಮಾತನಾಡಿ ಇತರೆ ಸಂಸ್ಥೆಗಳು ಸಿ ಎಸ್ ಆರ್ ನಿಧಿಯನ್ನು ಬೇರೆ ಬೇರೆ ಕಾರ್ಯಕ್ರಮಗಳಿಗೆ ಮೀಸಲಿಟ್ಟರೆ ಮಲಬಾರ್ ನವರು ಮಾನವನಿಗೆ ಮುಖ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ಶಿಕ್ಷಣ, ಆಹಾರ, ವಸತಿ, ನೀರು ಮತ್ತು ಆರೋಗ್ಯ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ವನ್ನು ಕೊಟ್ಟು ತಮ್ಮ ಸಿ ಎಸ್ ಆರ್ ನಿಧಿಯನ್ನು ಸದ್ಬಳಕೆ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಸ್ಕಾಲರ್ ಪಿಪ್ ಮಾಸ್ಟರ್ ಎಂದೇ ಪ್ರಖ್ಯಾತರಾದ ನಾರಾಯಣ ನಾಯಕ್ ಮತ್ತು ಸೈಬರ್ ಭದ್ರತಾ ತಜ್ಞರಾದ ಡಾ ಅನಂತ್ ಪ್ರಭು ರವರು ವಿದ್ಯಾರ್ಥಿನಿಯರಿಗೆ ಪ್ರೇರಣಾ ಮಾತುಗಳಿಂದ ಹುರಿತುಂಬಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ ಕೊಟ್ಯಾನ್, ಮಂಗಳೂರು ಉತ್ತರದ ಶಾಸಕರಾದ ಡಿ. ವೇದವ್ಯಾಸ ಕಾಮತ್, ಉಪ ವಿಬಾಗಾಧಿಕಾರಿಯಾದ ಮೀನಾಕ್ಷಿ ಆರ್ಯ, ಕರ್ನಾಟಕ ಗೇರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಮಮತ ಗಟ್ಟಿ, ದ ಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ ಎನ್, ಸೈಬರ್ ಭದ್ರತಾ ತಜ್ಞ ಡಾ. ಅನಂತ್ ಪ್ರಭು ಜಿ, ನಿವೃತ್ತ ಶಿಕ್ಷಕ ಶ್ರೀ. ನಾರಾಯಣ ನಾಯಕ್, ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿರ್ದೇಶಕರು ಶ್ರೀ. ವಿ. ಕರುಣಾಕರನ್, ಉಡುಪಿ ಶಾಖಾ ಮುಖ್ಯಸ್ಥರು ಶ್ರೀ. ವಿಜಯ್ ಕುಮಾರ ಡಿ. ಮಂಗಳೂರು ಶಾಖಾ ಮುಖ್ಯಸ್ಥರು ಹಫೀಜ್ ರೆಹಮಾನ್ ಅಡ್ಯಾರ್, ಮಾರ್ಕೇಟಿಂಗ್ ಮ್ಯಾನೇಜರ್ ಪರ್ಹಾನ್ ಶೇಖ್, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.