ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ವಂಚನೆ ಪ್ರಕರಣ; ಮೀನು ವ್ಯಾಪಾರಿಗೆ ಮೋಸ

ಕರಾವಳಿ

ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಲ್ಲಿ ಎಂಎಲ್ಎ ಟಿಕೇಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಹಿಂದೂ ಪೈರ್ ಬ್ರಾಂಡ್ ಚೈತ್ರಾ ಕುಂದಾಪುರ ವಿರುದ್ಧ ಒಂದೊಂದೇ ವಂಚನೆ ಪ್ರಕರಣಗಳು ದಾಖಲಾಗುತ್ತಿದೆ.ಇದೀಗ ಕೋಟ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣವೊಂದು ದಾಖಲಾಗಿದೆ.

ಸುದಿನ್ ಎಂಬವರು ಮೀನು ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿದ್ದು,, 2015 ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿತ್ತು. ತಾನು ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿದ್ದು, ಹಲವು ಮಂತ್ರಿ ಮಹೋದಯರ ಹಾಗೂ ಶಾಸಕರ ನಿಕಟ ಸಂಪರ್ಕದಲ್ಲಿರುವುದಾಗಿ ತಿಳಿಸಿ, ಉಡುಪಿ ಹಾಗೂ ಕೋಟದಲ್ಲಿ ಸುದಿನ್ ಅವರಿಗೆ ಬಟ್ಟೆ ಅಂಗಡಿಯನ್ನು ಹಾಕಿಸಿಕೊಡುವುದಾಗಿ ತಿಳಿಸಿದ್ದಳು. ಬಳಿಕ ಚೈತ್ರಾ ಕುಂದಾಪುರ ಪದೇ ಪದೇ ಕರೆ ಮಾಡಿ ಸುದಿನ್ ಅವರಿಂದ 2018 ರಿಂದ 2022ರ ವರೆಗೆ ಸುಮಾರು ಐದು ಲಕ್ಷ ರೂ. ಪಡೆದಿರುತ್ತಾಳೆ.

ಸುಮಾರು 3 ಲಕ್ಷ ಹಣವನ್ನು ಸುದೀನ್ ರವರು ತನ್ನ ಖಾತೆ ಹೊಂದಿದ್ದ ವಿಜಯವಾಡ ಶಾಖೆಯ ಕೋಟಕ್ ಮಹಿಂದ್ರ ಬ್ಯಾಂಕ್ ಹಾಗೂ ಕರ್ಣಾಟಕ ಬ್ಯಾಂಕ್ ಕುಂದಾಪುರ ಸಾಸ್ತಾನ ಶಾಖೆಯ ಖಾತೆಯಿಂದ ಚೈತ್ರಾಳ ಖಾತೆಗೆ ವರ್ಗಾಯಿಸಿದ್ದರು. ಇನ್ನುಳಿದ ಮೊತ್ತವನ್ನು ನಗದಾಗಿ 2023ರ ತನಕ ಆಕೆಗೆ ನೀಡಿದ್ದರು.ಆದರೆ ಕೊನೆಗೆ ಬಟ್ಟೆ ಅಂಗಡಿ ಮಾಡಿಕೊಡದೆ ತಪ್ಪಿಸಿಕೊಳ್ಳುವುದನ್ನು ಅರಿತ ಸುದಿನ್ ತಾನು ನೀಡಿದ ಹಣ ವಾಪಾಸು ನೀಡುವಂತೆ ಕೇಳಿಕೊಂಡು ಇವಳ ಬೆನ್ನು ಬಿದ್ದರು.

ಆಗ ಚೈತ್ರಾಳು ಸುದಿನ್ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣವನ್ನು ದಾಖಲಿಸುವುದಾಗಿ ಹಾಗೂ ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆಯನ್ನು ಹಾಕಿದ್ದಳು.
ಈ ಕುರಿತು ಬಿಜೆಪಿ ಕಾರ್ಯಕರ್ತ ಸುಧೀನ್​ ಎಂಬುವರು ಕುಂದಾಪುರ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಚೈತ್ರಾಳ ವಿರುದ್ದ ಎಫ್ಐಆರ್​ ದಾಖಲಿಸಿದ್ದಾರೆ. ಸುಧೀನ್ ಬಿಜೆಪಿ ಕಾರ್ಯಕರ್ತನಾಗಿದ್ದು,ಅವರು ಬಟ್ಟೆ ಅಂಗಡಿ ಉದ್ಯಮ ನಡೆಸಲು ನಿರ್ಧರಿಸಿದ್ದರು. ಈ ವೇಳೆ ಚೈತ್ರಾ ಹಣ ಪಡೆದು ವಂಚಿಸಿದ್ದಾಳೆ ಎಂದು ದೂರು ನೀಡಲಾಗಿದೆ.

ಉಧ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿದ ಪ್ರಕರಣದಲ್ಲಿ ಎಂಟು ಆರೋಪಿಗಳ ಪೈಕಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಂಬರ್ 3 ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಜಾಲಾಡುತ್ತಿದ್ದಾರೆ.
ವಂಚನೆ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿ ಚೈತ್ರಾ ಕುಂದಾಪುರ ಹೆಸರು ಸೇರಿಕೊಂಡಿದೆ. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಮತ್ತಿತರರು ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.