ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ 3,000 ಕ್ಕೂ ಮಿಕ್ಕ ಜೆಡಿಎಸ್ ಕಾರ್ಯಕರ್ತರು ರಾಜೀನಾಮೆ ಸಿದ್ದತೆ.!

ರಾಜ್ಯ

ಬುಧವಾರ ಸಂಜೆ ಎನ್‌ಆರ್‌ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಎನ್‌ಎಸ್‌ ಫಂಕ್ಷನ್‌ ಹಾಲ್‌ನಲ್ಲಿ ಸಭೆ ನಡೆದು ಆ ಬಳಿಕ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ನಾವು ಈ ರಾಜೀನಾಮೆ ಪ್ರಕ್ರಿಯೆಯನ್ನು ಮೈಸೂರಿನಿಂದ ಪ್ರಾರಂಭಿಸುತ್ತಿದ್ದೇವೆ ಎಂದು ಅಬ್ದುಲ್ ಖಾದರ್ ಶಾಹಿದ್ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮೈಸೂರಿನ 3,000 ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ರಾಜ್ಯದಾದ್ಯಂತ 30 ಸಾವಿರಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಜೆಡಿಎಸ್ ಜಾತ್ಯತೀತ ಪಕ್ಷವಾಗಿದೆ. ನಮಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರ ಮೇಲೆ ಅಪಾರ ಗೌರವವಿದೆ. ಆದರೆ, ಪಕ್ಷದ ಎಲ್ಲಾ ನಾಯಕರನ್ನು ಸಂಪರ್ಕಿಸದೆ ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿದ್ದಾರೆ. ಇದು ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ. ಇದು ಪಕ್ಷ ವಿರೋಧಿ ಚಟುವಟಿಕೆ ಎಂಬುದಾಗಿ ನಾವು ಭಾವಿಸಿದ್ದೇವೆ’ ಎಂದು ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದೆ ಅವರಿಬ್ಬರನ್ನೂ ಪಕ್ಷದಿಂದ ಕೈಬಿಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷರನ್ನು ಒತ್ತಾಯಿಸಿದ್ದೆವು. ಸೆಪ್ಟೆಂಬರ್ 27ರ ವರೆಗೆ ಕಾಲಾವಕಾಶ ನೀಡಿದ್ದೆವು. ಸಿಎಂ ಇಬ್ರಾಹಿಂ ಅವರು ಮೌನವಾಗಿರುವುದರಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಅಬ್ದುಲ್ ಖಾದರ್ ಶಾಹಿದ್ ತಿಳಿಸಿದ್ದಾರೆ.ಮುಸ್ಲಿಮರು ಮತ್ತು ದಲಿತರ ವಿರುದ್ಧ ಬಿಜೆಪಿ ಮುಖಂಡರು ಪ್ರತಿ ದಿನವೂ ದ್ವೇಷದ ಮಾತುಗಳನ್ನು ಆಡುತ್ತಾರೆ. ಇಂತಹ ಸಮಯದಲ್ಲಿ ನಾವು ಮುಂದುವರಿಯಲು ಸಾಧ್ಯವಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ನಾವು ರಾಜೀನಾಮೆ ನೀಡುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ