ದ.ಕ ಎಂ.ಪಿ ಟಿಕೆಟ್: ‘ಆಕೆ’ ಒಪ್ಪಿದರೆ ಕಾಂಗ್ರೆಸ್ ಟಿಕೆಟ್ ಫಿಕ್ಸ್.! ಯಾರೀಕೆ.?

ಕರಾವಳಿ

ಕಾಂಗ್ರೆಸ್ ಘಟಾನುಘಟಿಗಳನ್ನು ಹಿಂದೆ ಸರಿಯುವಂತೆ ಮಾಡಿದ ‘ಗೌಡ ಅರಸಿ.!’

ಇನ್ನೇನೂ ಕೆಲವೇ ತಿಂಗಳಲ್ಲಿ ಲೋಕ ಸಮರದ ಅಖಾಡ ಸಿದ್ಧವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಲೋಕ ಸಮರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸತತ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿರುವ ಬಿಜೆಪಿ ಜಿಲ್ಲೆಯಲ್ಲಿ ಗೆಲುವಿನ ಪ್ರಬಲ ದಾವೆದಾರಿಕೆ ಹೊಂದಿದೆ. ಆದರೆ ಶತಾಯಗತಾಯ ಈ ಬಾರಿ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಲೋಕ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಇದು ಎಷ್ಟು ವರ್ಕ್ ಔಟ್ ಆಗಲಿದೆ ಅನ್ನುವುದು ಚುನಾವಣಾ ನಂತರವಷ್ಟೇ ತಿಳಿಯಬಹುದು.

ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಸಚಿವ ಮಧು ಬಂಗಾರಪ್ಪರವರನ್ನು ಉಸ್ತುವಾರಿಯಾಗಿ ನೇಮಿಸಿದೆ. ಜಿಲ್ಲೆಯಲ್ಲಿ ಸರಣಿ ಸಭೆ ಮೂಲಕ ನಾಲ್ಕೈದು ಹೆಸರುಗಳನ್ನು ಹೈಕಮಾಂಡ್ ಗೆ ರವಾನಿಸಲಿದ್ದಾರೆ. ಆದರೆ ಕಾಂಗ್ರೆಸ್ ಕ್ಯಾಂಪಿನಲ್ಲಿ ಜಿಲ್ಲೆಯ ಯಾವೊಬ್ಬ ನಾಯಕನೂ ಚುನಾವಣಾ ಸ್ಪರ್ಧೆಗೆ ಅಷ್ಟೇನೂ ಆಸಕ್ತಿ ತೋರುವಂತೆ ಕಾಣುತ್ತಿಲ್ಲ. ವಿಧಾನಸಭಾ ಚುನಾವಣೆಗೆ ಒಂದೊಂದು ಕ್ಷೇತ್ರಕ್ಕೂ ಹತ್ತಾರು ಆಕಾಂಕ್ಷಿಗಳ ದಂಡೇ ಇದ್ದರೂ, ಲೋಕಸಭಾ ಚುನಾವಣೆಯಲ್ಲಿ ನಾನು ಆಕಾಂಕ್ಷಿ ಎಂದು ಧೈರ್ಯದಿಂದ ಹೇಳಬಲ್ಲ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಗೆಲುವಿನ ಸಾಧ್ಯಾಸಾಧ್ಯತೆ ಹೆಚ್ಚಿರುವ ಕೆಲವು ಅಭ್ಯರ್ಥಿಗಳನ್ನು ಹೈಕಮಾಂಡ್ ನಾಯಕರೇ ಚುನಾವಣೆಗೆ ಸ್ಪರ್ಧಿಸುವಂತೆ ಮನವೊಲಿಸುವ ಕಾರ್ಯವೂ ನಡೆಯುತ್ತಿದೆ.

ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವಿನ ಸಾಧ್ಯತೆ ತೀರಾ ಕಮ್ಮಿ ಇರುವುದರಿಂದ ಯಾವೊಬ್ಬ ನಾಯಕನೂ ತನಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮುಂದೆ ದುಂಬಾಲು ಬೀಳುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಇಂತಹ ಅಭ್ಯರ್ಥಿ ಗೆ ಟಿಕೆಟ್ ನೀಡಿದರೆ ಫಲಿತಾಂಶ ಹೇಗಿರಬಹುದು ಅನ್ನುವ ಭಾಗಾಕಾರ, ಗುಣಾಕಾರ ಲೆಕ್ಕದಲ್ಲಿ ಮಗ್ನವಾಗಿದೆ.

ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್ ಇದೀಗ ಮಗ್ನವಾಗಿರುದರಿಂದ ಮೂರು-ನಾಲ್ಕು ಹೆಸರುಗಳು ಸಹಜವಾಗಿ ಹೈಕಮಾಂಡ್ ಮಟ್ಟದಲ್ಲಿ ಓಡಾಡುತ್ತಿದೆ. ಮೊದಲಿಗೆ ಪ್ರಬಲವಾಗಿ ಕೇಳಿ ಬರುತ್ತಿರುವುದು ಮಾಜಿ ಸಚಿವರಾದ ರಮಾನಾಥ ರೈ ಯವರ ಹೆಸರು. ಆದರೆ ಸ್ವತಃ ರೈ ಅವರು ಜಿಲ್ಲಾಧ್ಯಕ್ಷ ಹುದ್ದೆಗೆ ಹೆಚ್ಚಿನ ಆಸಕ್ತಿ ತೋರಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ದೊಡ್ಡ ಮನಸ್ಸು ಮಾಡುತ್ತಿಲ್ಲ ಎಂಬ ಮಾತು ಕಾಂಗ್ರೆಸ್ ವಲಯದಿಂದ ಕೇಳಿ ಬರುತ್ತಿದೆ. ಉಸ್ತುವಾರಿ ಸಚಿವರಾಗಿ, ಪ್ರಬಲ ಜಾತ್ಯತೀತ ನಾಯಕನಾಗಿರುವ, ಬಿಜೆಪಿಗೆ ಕೌಂಟರ್ ನೀಡುತ್ತಿರುವ ಏಕೈಕ ನಾಯಕನಿದ್ದರೆ ಅದು ರಮಾನಾಥ ರೈ ಯವರು ಮಾತ್ರ. ರೈ ಯವರು ಕೇವಲ ವಿಧಾನಸಭಾ ಚುನಾವಣೆಗೆ ಮಾತ್ರ ಸ್ಪರ್ಧಿಸಿದ್ದರು. ಆದರೆ ಈವರೆಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ನಿಂದ ರಮಾನಾಥ ರೈ ಯವರನ್ನು ಕಣಕ್ಕಿಳಿಸಿದರೆ ಏನಾಗಬಹುದು ಅನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಇದರ ಮಧ್ಯೆ ಈ ಬಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಿ ಅನ್ನುವ ಸದ್ದು ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷದ ಕೆಲವು ರಾಜ್ಯ ನಾಯಕರು ಸ್ಪೀಕರ್ ಯುಟಿ ಖಾದರ್ ಲೋಕಸಭೆಯಲ್ಲಿ ಸ್ಪರ್ಧಿಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಉಳ್ಳಾಲ ಕ್ಷೇತ್ರದಲ್ಲಿ ಹಿಂದೂ-ಮುಸ್ಲಿಂ ಮತಬ್ಯಾಂಕ್ ಭದ್ರಪಡಿಸಿರುವ ಖಾದರ್ ಎಂ.ಪಿ ಚುನಾವಣೆಗೆ ನಿಂತರೆ ಗೆಲ್ಲಬಹುದು ಅನ್ನುವ ಒಂದು ಅಭಿಪ್ರಾಯವಿದೆ. ಆದರೆ ಖಾದರ್ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ ಅನ್ನುವ ಸುದ್ದಿ ಇದೆ.

ಇನ್ನು ಪ್ರಬಲ ಸಮುದಾಯವಾಗಿರುವ ಬಿಲ್ಲವರಿಗೆ ಈ ಬಾರಿ ಟಿಕೆಟ್ ನೀಡಿ ಅನ್ನುವ ಕೂಗು ಇದೆ. ಬಿಕೆ ಹರಿಪ್ರಸಾದ್, ಪದ್ಮರಾಜ್ ಹೆಸರು ಆ ಸಮುದಾಯದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ. ಬಿಕೆ ದ.ಕ ಜಿಲ್ಲೆಯನ್ನು ಆಯ್ಕೆಮಾಡುವುದು ಡೌಟ್. ಸೇಫರ್ ಜಿಲ್ಲೆಯತ್ತ ಕಣ್ಣು ಹಾಯಿಸುತ್ತಿದ್ದಾರೆ ಅನ್ನುವ ಮಾತಿದೆ. ಇನ್ನು ಪದ್ಮರಾಜ್ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಚುರುಕಿನ, ಯುವ ನಾಯಕರಾಗಿರುವ ಪದ್ಮರಾಜ್ ಗೆ ಟಿಕೆಟ್ ದೊರೆತರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಅನ್ನುವ ಮಾತುಗಳು ಕಾಂಗ್ರೆಸ್ ಕಾರ್ಯಕರ್ತರೆಡೆಯಿಂದ ಕೇಳಿ ಬರುತ್ತಿದೆ.

ಇದರ ಮಧ್ಯೆ ರಾಜ್ಯ ಕಾಂಗ್ರೆಸ್ ನಾಯಕರು ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿ ಬಿಜೆಪಿಗೆ ಟಾಂಗ್ ನೀಡಲು ಮುಂದಾಗಿದ್ದು, ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದೆ. ಈ ಬಗ್ಗೆ ಬಿಜೆಪಿ ಹಾಲಿ ಸಂಸದರಿಂದ ಮುನಿಸಿಕೊಂಡಿರುವ, ಬಿಜೆಪಿ ಬಗ್ಗೆ ದೂರ ಉಳಿಯುವ ನಿರ್ಧಾರ ಮಾಡಿರುವ ನಾಯಕರನ್ನೆಲ್ಲ ಸಂಪರ್ಕಿಸಿ ಈ ಬಾರಿ ಕಾಂಗ್ರೆಸ್ ಗೆಲುವಿಗೆ ಪರೋಕ್ಷ ಸಹಕಾರ ನೀಡುವಂತೆ ಕಾಂಗ್ರೆಸ್ ಪಕ್ಷದೊಳಗಡೆ ಒಂದು ಟೀಮ್ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದು, ಬಿಜೆಪಿ ಗೆಲುವಿಗೆ ಕಾರಣವಾಗುತ್ತಿದ್ದ ಗೌಡ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ನಿಂದ ಟಿಕೆಟ್ ನೀಡಿದರೆ ಗೆಲುವು ಸುಲಭ ಅನ್ನುವ ಆಂತರಿಕ ಸರ್ವೇಯೊಂದು ಬಂದಿದ್ದು ಕಾಂಗ್ರೆಸ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಪುತ್ತೂರು, ಸುಳ್ಯ, ಬೆಳ್ತಂಗಡಿ ಈ ಭಾಗದ ಗೌಡ ಸಮುದಾಯ ಬಿಜೆಪಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದು, ಈ ಮತಗಳು ಒಡೆದು ಹೋದರೆ ಮಾತ್ರ ಕಾಂಗ್ರೆಸ್ ಗೆಲುವು ಸುಲಭ. ಆ ನಿಟ್ಟಿನಲ್ಲಿ ಸುಳ್ಯ ಭಾಗದ ಪ್ರಭಾವಿ ಗೌಡ ಮನೆತನಕ್ಕೆ ಸೇರಿದ, ಶಿಕ್ಷಣ ಸಂಸ್ಥೆಯ ಮೂಲಕ ಹೆಸರುವಾಸಿಯಾಗಿರುವ ಕುಟುಂಬವೊಂದರ ಸದಸ್ಯೆಗೆ ಈ ಬಾರಿ ಮಂಗಳೂರು ಲೋಕಸಭಾ ಟಿಕೆಟ್ ನೀಡಲು ರಾಜ್ಯದ ಕಾಂಗ್ರೆಸ್ ಪ್ರಮುಖ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುಟುಂಬವನ್ನು ಸಂಪರ್ಕಿಸಿ ಒಪ್ಪಿಸುವ ಕೆಲಸ ನಡೆಯುತ್ತಿದ್ದು, ಇದು ಸಕ್ಸಸ್ ಆದರೆ ಈ ಬಾರಿ ಅಚ್ಚರಿಯ ಅಭ್ಯರ್ಥಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಇದು ವರ್ಕ್ ಔಟ್ ಆದರೆ ಬಿಜೆಪಿಗೆ ದೊಡ್ಡ ಪ್ರತಿಸ್ಪರ್ಧಿ ಕಾಂಗ್ರೆಸ್ ನಿಂದ ದೊರೆಯಲಿದೆ.