ಕಾಂಗ್ರೆಸ್‌ ಮುಖಂಡನ ಹತ್ಯೆ: ಆರೋಪಿಗಳ ಕಾಲಿಗೆ ಗುಂಡೇಟು

ರಾಜ್ಯ

ಕೋಲಾರದಲ್ಲಿ ನಡೆದ ಕಾಂಗ್ರೆಸ್‌ ನಾಯಕ ಎಮ್‌ ಶ್ರೀನಿವಾಸ್‌ ಅವರ ಹತ್ಯೆ ಆರೋಪಿಗಳ ಪೈಕಿ ಮೂವರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಅವರು ನಿನ್ನೆ ಶ್ರೀನಿವಾಸಪುರದ ಹೊರವಲಯದಲ್ಲಿ ಹೊಸದಾಗಿ ಕಟ್ಟಿಸುತ್ತಿದ್ದ ಬಾರ್‌ ಒಂದರ ಕೆಲಸ ನೋಡಲೆಂದು ಹೋಗಿದ್ದ ಸಂದರ್ಭದಲ್ಲಿ ಅವರಿಗೆ ಆರು ಜನ ಅಪರಿಚಿತ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿದ್ದರು. ನಂತರ ಅವರನ್ನು ಆರ್‌ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ್‌ ಮರಣ ಹೊಂದಿದ್ದರು.

ಬಾರ್‌ ಕೆಲಸದ ಪ್ರಗತಿ ನೋಡಿಕೊಂಡು ತೋಟದ ಮನೆಗೆ ಬಂದಿದ್ದೆವು. ಅಲ್ಲಿಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ʼಅಂಕಲ್‌ ಚೆನ್ನಾಗಿದ್ದೀರಾʼ ಎಂದು ಶೇಕ್‌ ಹ್ಯಾಂಡ್‌ ಕೊಡುವ ನೆಪದಲ್ಲಿ ಅವರ ಮೇಲೆ ತಲ್ವಾರುಗಳಿಂದ ಹಲ್ಲೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವೇಣುಗೋಪಾಲ್‌, ಮನೀಂದ್ರ ಮತ್ತು ಸಂತೋಷ್‌ ಎನ್ನುವಾತನನ್ನು ಬಂಧಿಸಲಾಗಿದೆ. ಬಂಧಿಸಿ ಕರೆ ತರುವ ವೇಳೆ ಪೊಲೀಸ್‌ ಸಿಬ್ಬಂದಿ ಮಂಜುನಾಥ್‌ ಹಾಗೂ ನಾಗೇಶ್‌ ಎನ್ನುವವರ ಮೇಲೆ ಹಲ್ಲೆಗೆ ಯತ್ನಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ವೆಂಕಟೇಶ್‌ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಪೊಲೀಸರು ಮತ್ತು ಆರೋಪಿಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರ ಶೋದಕಾರ್ಯ ಮುಂದುವರೆದಿದೆ.