ರಾಜ್ಯದಲ್ಲಿ ಈಗಾಗಲೇ ಫಲಾನುಭವಿಗಳಿಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತಿದ್ದು ಶ್ರೀಘ್ರದಲ್ಲಿ ಈ ಯೋಜನೆ ಸಿ ಗ್ರೇಡ್ ನ ಬಡ ದೇವಸ್ಥಾನಗಳಿಗೂ ವಿಸ್ತರಣೆಯಾಗಲಿದೆ ಎಂದು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಪಡೆಯುತ್ತಿರುವ 34,700 ದೇಗುಲಗಳಿಗೆ ಇದರ ಪ್ರಯೋಜನ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ‘ಸಿ’ ಗ್ರೇಡ್ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ಪೂರೈಸಲು ರಾಜ್ಯ ಸರಕಾರ ಮುಂದಾಗಿದೆ.
ಇಲಾಖೆಯ ವ್ಯಾಪ್ತಿಯಲ್ಲಿ’ಎ’ ಗ್ರೇಡ್‌ನ 175, ‘ಬಿ’ ಗ್ರೇಡ್‌ನ 330 ಮತ್ತು ‘ಸಿ’ ಗ್ರೇಡ್‌ನ 34,700 ದೇವಸ್ಥಾನಗಳಿವೆ. ವಾರ್ಷಿಕ 25 ಲಕ್ಷ ರೂಪಾಯಿಗೂ ಅಧಿಕ ವರಮಾನವುಳ್ಳ ದೇವಸ್ಥಾನಗಳಿಗೆ ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಥಳೀಯ ಹಂತದಲ್ಲೇ ಅವಕಾಶಗಳಿವೆ. ಆದರೆ, 1 ರಿಂದ 5 ಲಕ್ಷ ರೂ. ಒಳಗೆ ಆದಾಯ ಪಡೆಯುವ ‘ಸಿ’ ಗ್ರೇಡ್ ದೇಗುಲಗಳಿಗೆ ಮಾತ್ರ ಯಾವುದೇ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತಗೊಂಡಿದೆ.
ಮಾಸಿಕ ವಿದ್ಯುತ್, ನೀರಿನ ವೆಚ್ಚ ಭರಿಸಲೂ ‘ಸಿ’ ಗ್ರೇಡ್ ದೇಗುಲಗಳು ಪರದಾಡುವ ಸನ್ನಿವೇಶ ಇದೆ. ಈಗ ‘ಗೃಹಜ್ಯೋತಿ’ ಯೋಜನೆ ವಿಸ್ತರಣೆಯಾದಲ್ಲಿಈ ದೇವಸ್ಥಾನಗಳಿಗೆ ಅನುಕೂಲವಾಗಲಿದೆ. ಜತೆಗೆ ಇಂತಹ ದೇವಸ್ಥಾನಗಳಲ್ಲಿಉಚಿತ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ಐದು ‘ಗ್ಯಾರಂಟಿ’ ಯೋಜನೆಗಳಲ್ಲಿಪ್ರಮುಖವಾದ ‘ಗೃಹಜ್ಯೋತಿ’ ಯೋಜನೆ ಅಡಿಯಲ್ಲಿಮಾಸಿಕ 200 ಯೂನಿಟ್‌ವರೆಗೆ ಗೃಹಬಳಕೆ ಉದ್ದೇಶಕ್ಕೆ ಉಚಿತವಾಗಿ ಪೂರೈಸಲಾಗುತ್ತಿದೆ.
ರಾಜ್ಯದಲ್ಲಿಈ ಹಿಂದಿನ ಸರಕಾರಗಳು ‘ಎ’ ಗ್ರೇಡ್ ದೇವಸ್ಥಾನಗಳ ಆದಾಯದ ಶೇ.20ರಷ್ಟು ಪಾಲನ್ನು ‘ಸಿ’ ಗ್ರೇಡ್ ದೇಗುಲಗಳ ಅಭಿವೃದ್ಧಿಗೆ ನೀಡಬೇಕೆಂಬ ಯೋಜನೆಯನ್ನು ರೂಪಿಸಿದ್ದವು. ಆದರೆ, ಅದು ಜಾರಿಗೆ ಬರಲೇ ಇಲ್ಲ. ” ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇಗುಲಗಳಿಗೆ ಉಚಿತ ವಿದ್ಯುತ್, ನೀರಿನ ಸೌಕರ್ಯ ಒದಗಿಸಿದರೆ ಬಹಳ ಅನುಕೂಲವಾಗಲಿದೆ.
ರಾಜ್ಯದ ‘ಸಿ’ ಗ್ರೇಡ್ ದೇವಸ್ಥಾನಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.