ಚಾಕೋಲೇಟ್ ಅಂದರೆ ಎಲ್ಲರಿಗೂ ತುಂಬಾ ಇಷ್ಟ.ಮಕ್ಕಳಂತೂ ಚಾಕೋಲೇಟ್ ಕಂಡರೆ ಬೇಕೇ ಬೇಕು ಎಂದು ಹಠ ಹಿಡಿಯುತ್ತಾರೆ. ಇದೀಗ ಚಾಕೋಲೆಟ್ ಬಗ್ಗೆ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಚಾಕೋಲೇಟ್ ಉತ್ಪನ್ನಗಳಲ್ಲಿ ಮೂರನೇ ಒಂದು ಭಾಗದಷ್ಟು ಸೀಸ್ ಮತ್ತು ಕ್ಯಾಡ್ಮಿಯಂ ಅಂಶ ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಸಾರ್ವಜನಿಕ ಗ್ರಾಹಕ ಪರವಾಗಿ ಕೆಲಸ ಮಾಡುವ ಸಂಸ್ಥೆಯಾದ ಕನ್ಸ್ಯೂಮರ್ ರಿಪೋರ್ಟ್ಸ್ ಮಾಡಿದ ಪರೀಕ್ಷೆಯಲ್ಲಿ ಈ ಭಯಾನಕ ಅಂಶ ಬೆಳಕಿಗೆ ಬಂದಿದ್ದು, ತಮ್ಮ ಉತ್ಪನ್ನಗಳಲ್ಲಿ ಈ ಭಾರೀ ಲೋಹಗಳ ಪ್ರಮಾಣವನ್ನು ಕಡಿಮೆ ಮಾಡಲು ಅಮೆರಿಕದ ಬಹುದೊಡ್ಡ ಚಾಕೋಲೇಟ್ ತಯಾರಿಕ ಕಂಪನಿ ಹೆರ್ಷೆಗೆ ಕರೆ ಕೊಟ್ಟಿದೆ.
ಡಾರ್ಕ್ ಚಾಕೋಲೇಟ್ಸ್ ಬಾರ್ಸ್, ಮಿಲ್ಕ್ ಚಾಕೋಲೇಟ್ ಬಾರ್ಸ್, ಕೋಕೋ ಪೌಡರ್, ಚಾಕೋಲೇಟ್ ಚಿಪ್ಸ್ ಮತ್ತು ಮಿಕ್ಸಸ್ ಫಾರ್ ಹಾಟ್ ಕೊಕಾ, ಬ್ರೌನೀಸ್ ಮತ್ತು ಚಾಕೋಲೇಟ್ ಕೇಕ್ ಒಳಗೊಂಡಂತೆ 7 ವರ್ಗಗಳಲ್ಲಿ ಸುಮಾರು 48 ಉತ್ಪನ್ನಗಳನ್ನು ಕನ್ಸ್ಯೂಮರ್ ರಿಪೋರ್ಟ್ಸ್ ಸಂಸ್ಥೆ ಪರೀಕ್ಷೆ ಮಾಡಿದೆ. ಇದರಲ್ಲಿ 16 ಉತ್ಪನ್ನಗಳಲ್ಲಿ ಸೀಸ, ಕ್ಯಾಡ್ಮಿಯಂ ಅಥವಾ ಎರಡರ ಸಂಭಾವ್ಯ ಹಾನಿಕಾರಕ ಮಟ್ಟಗಳನ್ನು ಪತ್ತೆಹಚ್ಚಲಾಗಿದೆ. ವಾಲ್ಮಾರ್ಟ್ ಕಂಪನಿಯ ಚಾಕೋಲೇಟ್ ಬಾರ್ ಮತ್ತು ಹಾಟ್ ಚಾಕೋಲೇಟ್ ಮಿಕ್ಸ್, ಹರ್ಷೆ ಮತ್ತು ದ್ರೋಸ್ತೆ ಕಂಪನಿಯ ಕೋಕಾ ಪೌಡರ್, ಟಾರ್ಗೆಟ್ ಕಂಪನಿ ಸೆಮಿ ಸ್ವೀಟ್ ಚಾಕೋಲೇಟ್ ಚಿಪ್ಸ್ ಮತ್ತು ಟ್ರೇಡರ್ ಜೋ, ನೆಸ್ಲೇ ಮತ್ತು ಸ್ಟಾರ್ಬಕ್ಸ್ ಕಂಪನಿಗಳ ಹಾಟ್ ಚಾಕೋಲೇಟ್ ಮಿಕ್ಸಸ್ಗಳಲ್ಲಿ ಭಾರೀ ಪ್ರಮಾಣ ಸೀಸ ಮತ್ತು ಕ್ಯಾಡ್ಮಿಯಂ ಒಳಗೊಂಡಿದೆ. ಮಿಲ್ಕ್ ಚಾಕೋಲೇಟ್ ಬಾರ್‌ಗಳಲ್ಲಿ ಕೆಲವೇ ಪ್ರಮಾಣ ಕೋಕಾ ಸಾಲಿಡ್ಗಳು ಪತ್ತೆಯಾಗಿದ್ದು, ಅತ್ಯಧಿಕ ಲೋಹದ ಅಂಶ ಪತ್ತೆಯಾದ ಒಂದೇ ಒಂದು ವರ್ಗ ಇದಾಗಿದೆ.

ಅಂದಹಾಗೆ ಸೀಸ ಮತ್ತು ಕ್ಯಾಡ್ಮಿಯಂಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ನರಮಂಡಲದ ಸಮಸ್ಯೆಗಳು, ಪ್ರತಿರಕ್ಷಣಾ ವ್ಯವಸ್ಥೆಯ ನಿಗ್ರಹ ಮತ್ತು ಮೂತ್ರಪಿಂಡದ ಹಾನಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಅಪಾಯಗಳು ವಿಶೇಷವಾಗಿ ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿಗೆ ಹೆಚ್ಚಿರಲಿದೆ. ಈ ಪರೀಕ್ಷೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಕನ್ಸ್ಯೂಮರ್ ರಿಪೋರ್ಟ್ಸ್ ಸಂಸ್ಥೆಯ ಹಿಂದಿನ ವರದಿಯನ್ನು ಅನುಸರಿಸುತ್ತದೆ. ಕಳೆದ ವರ್ಷ ಇದು ಪರೀಕ್ಷಿಸಿದ 28 ಡಾರ್ಕ್ ಚಾಕೊಲೇಟ್ ಬಾರ್‌ಗಳಲ್ಲಿ 23ರಲ್ಲಿ ಅಧಿಕ ಸೀಸ ಅಥವಾ ಕ್ಯಾಡ್ಮಿಯಂ ಪತ್ತೆಹಚ್ಚಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಹೆರ್ಷೆ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಸ್ಟೀವ್ ವಾಸ್ಕೌಲಿ, ತಮ್ಮ ಉತ್ಪನ್ನಗಳಲ್ಲಿ ಸೀಸ ಮತ್ತು ಕ್ಯಾಡ್ಮಿಯಂ ಮಟ್ಟ ಕಡಿಮೆ ಮಾಡಲು ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೇ ಸಂಪೂರ್ಣವಾಗಿ ತೆಗೆದುಹಾಕುತ್ತೇವೆ ಎಂದಿದ್ದಾರೆ.