ಪಂಚರಾಜ್ಯ ಚುನಾವಣೆಗಳ ಪೈಕಿ 119 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತೆಲಂಗಾಣದಲ್ಲಿ ನವೆಂಬರ್ 30 ರಂದು ಒಂದೇ ಭಾರಿಗೆ ಮತದಾನ ನಡೆಯಲಿದೆ. ಚುನಾವಣೆ ಕುರಿತು ‘ಲೋಕಪೋಲ್ ಸಮೀಕ್ಷೆ’ ಬಹಿರಂಗವಾಗಿದೆ. ಬಾರಿ ಆಡಳಿತ ಪಕ್ಷದ ವಿರುದ್ಧ ಮತದಾರರ ಪ್ರಭುಗಳು ‘ಕೈ’ ನಾಯಕರ ಕೈಗೆ ಅಧಿಕಾರ ನೀಡಲಿದ್ದಾರೆ ಎಂಬ ಅಂಶ ಹೊರಬಿದ್ದಿದೆ. ಕಳೆದ ವಾರ ಪ್ರಕಟಗೊಂಡಿದ್ದ ಸಮೀಕ್ಷೆಯಲ್ಲಿ ಸಹ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಇದೀಗ ನವೆಂಬರ್ 22ರಿಂದ ನವೆಂಬರ್ 29 ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು ಕ್ಷೇತ್ರಗಳಲ್ಲಿ ಲೀಲಾಜಾಲವಾಗಿ 72 ರಿಂದ 74 ಸೀಟುಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಮಾಹಿತಿ ನೀಡಿದೆ.
ಆಡಳಿತ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿ (BRS)ಯು ಈ ಬಾರಿ ಅಧಿಕಾರ ಕಳೆದುಕೊಂಡು ಭಾರೀ ಅಂತರದಲ್ಲಿ ಸೋಲು ಕಾಣಲಿದೆ. ಕಾಂಗ್ರೆಸ್ ವಿರುದ್ಧ ಬಿಆರ್‌ಎಸ್ ಪಕ್ಷ ಕೇವಲ 33 ರಿಂದ 35 ಸ್ಥಾನಗಳನ್ನು ಪಡೆದು ಹಿನಾಯ ಸೋಲು ಅನುಭವಿಸುವ ಸಾಧ್ಯತೆಗಳು ಇವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಕಾಂಗ್ರೆಸ್ ಪಕ್ಷ ಕರ್ನಾಟಕದ ಮಾದರಿ ಅನುಸರಿಸಿ, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಲ್ಲಿ ಕಾಂಗ್ರೆಸ್ ಪಾತ್ರವನ್ನು ಸಮಾವೇಶಗಳಲ್ಲಿ ವಿವರಿಸುವ ಮೂಲಕ ಭಾವನಾತ್ಮಕವಾಗಿ ಮತದಾರರನ್ನು ಸೆಳೆದಿತ್ತು. ಇದೀಗ ಚುನಾವಣೆ ಪೂರ್ವ ಸಮೀಕ್ಷೆ ನೋಡಿದರೆ, ಕಾಂಗ್ರೆಸ್‌ನ ರಾಜಕೀಯ ತಂತ್ರಗಳು ತೆಲಂಗಾಣದಲ್ಲಿ ಕೈ ಹಿಡಿಯಲಿವೆ ಎನ್ನಲಾಗುತ್ತಿದೆ.