ಲೈಂಗಿಕ ತಜ್ಞರು, ಸ್ಕ್ಯಾನಿಂಗ್ ಸೆಂಟರ್ ಮೇಲೆ ಕಣ್ಗಾವಲು
ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ನೀಡುವ ವ್ಯಕ್ತಿ ಮತ್ತು ಸಂಸ್ಥೆಗಳು ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ದಂತ ವೈದ್ಯಕೀಯ, ಆಯುಷ್, ಹೋಮಿಯೋಪತಿ, ಫಿಸಿಯೋಥೆರಪಿ, ನ್ಯಾಚುರೋಪತಿ ಸೇರಿದಂತೆ ವೈದ್ಯಕೀಯ ಸೇವೆ ನೀಡುವ ಪ್ರತಿಯೊಂದು ಕ್ಲಿನಿಕ್, ಆಸ್ಪತ್ರೆ ಮತ್ತು ವ್ಯಕ್ತಿಗಳು, ಪ್ರಯೋಗಾಲಯ, ಪರೀಕ್ಷಾ ಕೇಂದ್ರಗಳು, ಅಲ್ಟ್ರಾ ಸೌಂಡ್ ಸಂಸ್ಥೆಗಳು ಕಡ್ಡಾಯವಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯಿದೆ (ಕೆಪಿಎಂಇಎ) ಯಡಿ ನೋಂದಣಿ ಮಾಡಬೇಕಿದೆ. ನೋಂದಣಿ ಆಗದೆ ಕಾರ್ಯನಿರ್ವಹಿಸುವ ಕ್ಲಿನಿಕ್, ಆಸ್ಪತ್ರೆ ಮುಚ್ಚುವ ಎಚ್ಚರಿಕೆ ನೀಡಲಾಗಿದೆ.
ಮಂಗಳೂರಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಮೆಡಿಕಲ್ ಕ್ಲಿನಿಕ್ ಗಳು ಮೆಡಿಕಲ್ ಕಾನೂನಿನ ಯಾವುದೇ ನೀತಿ ನಿಯಮಗಳನ್ನು ಪಾಲಿಸದೆ, ಆಯುರ್ವೇದಿಕ್ ಲೈಸೆನ್ಸ್ ಪಡೆದು ಇಂಗ್ಲಿಷ್ ಮದ್ದು ವಿತರಿಸುವ ಅನೇಕ ಕ್ಲಿನಿಕ್ ಗಳಿವೆ.

ಇನ್ನು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಹೆಸರಿನಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುವ ಕೇಂದ್ರಗಳನ್ನು ಮುಚ್ಚಿಸಲು ಕಾರ್ಯಾಚರಣೆ ನಡೆಸಲಾಗುವುದು. ಲೈಂಗಿಕ ಸಮಸ್ಯೆಗಳ ಚಿಕಿತ್ಸೆಯು ಆರೋಗ್ಯ ವ್ಯವಸ್ಥೆಯಡಿ ಬರುತ್ತದೆ. ಲೈಂಗಿಕ ಸಮಸ್ಯೆಗಳನ್ನು ಪರಿಹರಿಸುವ ಅಥವಾ ಚಿಕಿತ್ಸೆ ನೀಡುವ ಕೇಂದ್ರಗಳು ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿಗೊಳ್ಳಬೇಕಿದ್ದು, ಚಿಕಿತ್ಸೆ ನೀಡುವ ವೈದ್ಯರು ಅರ್ಹತೆ ಹೊಂದಿದವರಾಗಿರಬೇಕು ಹಾಗೂ ಅನಧಿಕೃತವಾಗಿ ಲೈಂಗಿಕ ಚಿಕಿತ್ಸೆ ಕೊಡುವವರಿಗೆ ಅವಕಾಶವಿಲ್ಲ.
ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳು ಕಡ್ಡಾಯವಾಗಿ ಆರೋಗ್ಯ ಇಲಾಖೆಯಿಂದ ಲೈಸೆನ್ಸ್ ಪಡೆದಿರಬೇಕು. ಸ್ಕ್ಯಾನಿಂಗ್ ಸೆಂಟರ್ ಗಳು ಹೊಸ ಯಂತ್ರ ಖರೀದಿಸಲು ಮತ್ತು ಹಳೆ ಯಂತ್ರ ಬದಲಾಯಿಸಲು ಇಲಾಖೆಯ ಅನುಮತಿ ಪಡೆದಿರಬೇಕು ಎಂದು ಜಿಲ್ಲಾ ಪ್ರಭಾರ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ. ಜನನ ಪೂರ್ವ ಲಿಂಗ ಪತ್ತೆಗೆ ಸ್ಕ್ಯಾನಿಂಗ್ ಸೆಂಟರ್ ಗೆ ಅವಕಾಶವಿಲ್ಲ. ಭ್ರೂಣ ಲಿಂಗ ಪತ್ತೆ ನಡೆಸಿದರೆ ಅಂತಹ ಸೆಂಟರ್ ಮೇಲೆ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.