ಉಳ್ಳಾಲ: ‘ಗುಜರಿ’ ನಗರಸಭೆ.! ತಟ್ಟಿ ಹೋಟೆಲಲ್ಲಿ ಚಹಾ ಕುಡಿಯುವ ಇಲ್ಲಿನ ಶಾಸಕರಿಗೆ ಗುಜರಿ ವಾಹನ ಕಾಣಿಸಲಿಲ್ಲವೇ?

ಕರಾವಳಿ

ಪಂಚ ಗ್ಯಾರಂಟಿ ಮೂಲಕ ದೇಶದಾದ್ಯಂತ ಸುದ್ದಿ ಮಾಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಜೊತೆ ಜೊತೆಗೆ ಜನರ ಸಂಕಷ್ಟ ಅರಿಯಲು ಸಿಎಂ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದರು. ಭೇಟಿ ಮಾಡಲು ಬಂದ ಸಾರ್ವಜನಿಕರು ಸಂಕಷ್ಟ ಅನುಭವಿಸಬಾರದೆಂದು ಸ್ಥಳದಲ್ಲೇ ಊಟ ಮಾಡಿ ಇನ್ನಷ್ಟು ಸಮಯವನ್ನು ಜನಸಾಮಾನ್ಯರಿಗೆ ಮೀಸಲಿಟ್ಟಿದ್ದರು. ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿ ಕಂಡಿತ್ತು.

ಸಾವಿರಾರು ಜನರು ಸಿಎಂ ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಎಷ್ಟೋ ವರ್ಷಗಳಿಂದ ಸರಕಾರಿ ಕಚೇರಿಗೆ ಅಲೆದಾಡಿ ಸುಸ್ತಾದವರು ಸ್ಥಳದಲ್ಲೇ ಸಮಸ್ಯೆಯನ್ನು ಪರಿಹರಿಸಿಕೊಂಡರು.

ಸಿಎಂ ಕಾರ್ಯವೈಖರಿ ಬಗ್ಗೆ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಸಿಎಂ ಕಚೇರಿಯ ಸ್ಪಂದನೆಯೊಂದು ಇದೀಗ ದೊಡ್ಡ ಸುದ್ಧಿಗೆ ಕಾರಣವಾಗಿದೆ. ರಾಜ್ಯದ ನಂ 1 ಸಚಿವರೆಂದು ಕಳೆದ ಬಾರಿ ಬೀಗಿದ್ದ, ಈ ಬಾರಿಯ ಸ್ಪೀಕರ್ ಯುಟಿ ಖಾದರ್ ಪ್ರತಿನಿಧಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ನಗರಸಭೆಯ ಕಸದ ವಾಹನವೊಂದರ ಅಪಾಯಕಾರಿ ಪರಿಸ್ಥಿತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಎಂ ಸಿದ್ದರಾಮಯ್ಯನವರ ಕಚೇರಿಯ ಸಕಾಲಿಕ ಸ್ಪಂದನೆ ಗಮನ ಸೆಳೆದಿದೆ.

ಕಸ ಸಂಗ್ರಹಕ್ಕೆಂದು ಬಂದಿದ್ದ ವಾಹನವೊಂದರ ಚಾಲಕ, ವಾಹನ ಚಲಾಯಿಸಲು ವಾಹನದ ಒಳಗಡೆ ಹೋಗಬೇಕಾದರೆ ವಾಹನದ ಬಾಗಿಲನ್ನು ತೆರೆದು ಹೋಗುವ ಬದಲು, ಕಿಟಕಿಯ ಮೂಲಕ ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಆ ರೀತಿ ಹೋಗಲು ಪರದಾಡುತ್ತಿರುವ ದೃಶ್ಯವನ್ನು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ(WPI) ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಅಬ್ದುಸ್ಸಲಾಂ ಸಿ ಎಚ್ ಎಂಬುವವರು ಸೆರೆ ಹಿಡಿದು, ಉಳ್ಳಾಲ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಬಹಿರಂಗಗೊಳಿಸಿದ್ದಾರೆ.

ನವೆಂಬರ್ 29 ರಂದು ಉಳ್ಳಾಲ ನಗರಸಭೆ ವಾರ್ಡ್ ಸಂಖ್ಯೆ 15 ಹಿದಾಯತ್ ನಗರದ ಕಲ್ಲಾಪು ಪರಿಸರದಲ್ಲಿ ಕಸ ಸಂಗ್ರಹಕ್ಕೆ ಬಂದಿದ್ದ ವಾಹನದ ದಯನೀಯ ಪರಿಸ್ಥಿತಿ ಕಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಉಳ್ಳಾಲ ನಗರಸಭೆ ಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಸ್ಪೀಕರ್ ಕ್ಷೇತ್ರದಲ್ಲಿಯೇ ಇಂತಹ ಪರಿಸ್ಥಿತಿಯಾದರೆ ಇದಕ್ಕೆ ಏನೆನ್ನಬೇಕು? ಕ್ಷೇತ್ರದಲ್ಲಿ ಯಾವುದೇ ಭಾಗದಲ್ಲಿ ತಟ್ಟಿ ಹೋಟೆಲ್ ಕಂಡಾಗ ಅಲ್ಲಿ ಇಳಿದು ಚಹಾ ಕುಡಿದು ಸೋಷಿಯಲ್ ಮೀಡಿಯಾಗಳಲ್ಲಿ ಸರಳತೆ ಮೆರೆಯುವ ಇಲ್ಲಿನ ಶಾಸಕರಿಗೆ ಕ್ಷೇತ್ರದ ಹೃದಯಭಾಗದಲ್ಲೇ ಇಂತಹ ದಯನೀಯ ಪರಿಸ್ಥಿತಿ ಇದ್ದರೂ ಕಾಣಲಿಲ್ಲವೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಒಂದು ಉತ್ತಮ ದರ್ಜೆಯ ವಾಹನ ಖರೀದಿಸುವ ಅನುದಾನ ಶಾಸಕ, ನಗರಸಭೆಗೆ ಇಲ್ಲವಾಯಿತೇ ಅನ್ನುವ ಪ್ರಶ್ನೆ ಇದೀಗ ಎದ್ದಿದೆ.

ಕಸಸಂಗ್ರಹದ ಗುಜರಿ ವಾಹನ ಅಪ್ಪಿ ತಪ್ಪಿ ಎಡವಟ್ಟು ಸಂಭವಿಸಿ ಇಲ್ಲಿನ ಪೌರ ಕಾರ್ಮಿಕರ ಜೀವಕ್ಕೆ ಅಪಾಯ ಸಂಭವಿಸಿದರೆ ಯಾರು ಹೊಣೆ? ಅವರ ಜೀವಕ್ಕೆ ಬೆಲೆ ಇಲ್ಲವೇ? ಪೌರ ಕಾರ್ಮಿಕರೆಂದರೆ ಗುಜರಿಗಳೇ? ಸ್ಥಳೀಯ ಶಾಸಕ ಹಾಗೂ ನಗರಸಭೆಯ ಉಂಡಾಡಿಗುಂಡ ಅಧಿಕಾರಿಗಳು ಉತ್ತರ ನೀಡಬೇಕಾಗಿದೆ.

ಉಳ್ಳಾಲ ನಗರಸಭೆಯ ಬೇಜವಬ್ದಾರಿತನದ ಬಗ್ಗೆ ಉಳ್ಳಾಲ ನಗರಸಭೆಯ ಆಯುಕ್ತೆ ವಾಣಿ ಆಳ್ವಾ, “ದುರಸ್ತಿಯಲ್ಲಿರುವ ಕಸದ ವಾಹನದ ವಿಡಿಯೋ ವೈರಲ್ ಆದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಉಳ್ಳಾಲ ನಗರಸಭೆಯ ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು 2016-17ರಲ್ಲಿ ಸ್ವಚ್ಛ ಭಾರತ್ ಮಿಷನ್‌ನಡಿ ಖರೀದಿಸಲಾಗಿದ್ದು, ಈಗಾಗಲೇ 7 ವರ್ಷ ಹಳೆಯದಾಗಿದೆ. ಉಳ್ಳಾಲದ ಉಪ್ಪಿನ ವಾತಾವರಣಕ್ಕೆ ವಾಹನಗಳು ತುಕ್ಕು ಹಿಡಿಯಲು ಆರಂಭವಾಗಿದ್ದು, ರಿಪೇರಿ ಮಾಡಲು ಅಸಾಧ್ಯವಾಗಿರುತ್ತದೆ. ಆದರೂ ಸಹ ಪ್ರತಿ ನಿತ್ಯ ಗಾಡಿಗಳನ್ನು ತುರ್ತು ನೆಲೆಯಲ್ಲಿ ರಿಪೇರಿ ಮಾಡಿಕೊಂಡು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ 16,546 ಮನೆಗಳಿಂದ ಹಾಗೂ 3212 ವಾಣಿಜ್ಯ ಕಟ್ಟಡಗಳಿಂದ, ಪ್ರತಿ ನಿತ್ಯ ಘನತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ಒಂದು ವೇಳೆ ನಾವು ವಾಹನಗಳನ್ನು ಕಳುಹಿಸದೇ ಇದ್ದರೆ ಕಸವನ್ನೆಲ್ಲ ಜನರು ರಸ್ತೆಗೆ ಚೆಲ್ಲುತ್ತಾರೆ. ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ನಗರಸಭೆಯಲ್ಲಿ ವಿವಿಧ ಯೋಜನೆಗಳಡಿ ಬಾಕಿ ಉಳಿದಿದ್ದ ಮೊತ್ತಕ್ಕೆ 5 ಹೊಸ ಅಟೋ ಟಿಪ್ಪರ್ ವಾಹನಗಳು ಹಾಗೂ 1 ಕಾಂಪ್ಯಾಕ್ಟರ್ ವಾಹನವನ್ನು ಖರೀದಿಸಲು ಹೊಸ ಕ್ರಿಯಾಯೋಜನೆಯನ್ನು ತಯಾರಿಸಿ ಆಡಳಿತಾಧಿಕಾರಿಯವರಿಂದ 2023ರ ಸೆ.30ರಂದು ಅನುಮೋದನೆ ಪಡೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ. ಹೊಸ ವಾಹನಗಳನ್ನು ಖರೀದಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಶಾಸಕ ಯು ಟಿ ಖಾದರ್ ಅವರ ಗಮನಕ್ಕೂ ತರಲಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಮೇಡಂ ರವರೇ ಇಷ್ಟೆಲ್ಲಾ ಮಾಹಿತಿ ಇದ್ದೂ, ವಾಹನ ಗುಜರಿ ಎಂದು ತಿಳಿದಿದ್ದರೂ ಮತ್ತೆ ಅದೇ ವಾಹನದಲ್ಲಿ ಕಸ ಸಂಗ್ರಹ ಮಾಡುತ್ತಿರುವುದು ತಮ್ಮ ಆಡಳಿತದ ಬೇಜವಬ್ದಾರಿತನವಲ್ಲವೇ? ಹೊಸ ವಾಹನ ಬರುವವರೆಗೂ ಪರ್ಯಾಯ ಮಾರ್ಗ ಕಂಡು ಹಿಡಿದು ಕ್ರಮ ಕೈಗೊಳ್ಳಬಹುದಿತ್ತಲ್ವೇ? ಕ್ಷೇತ್ರದ ಶಾಸಕರು, ಸ್ಪೀಕರ್ ಹುದ್ದೆ ಯಲ್ಲಿ ಇರುವುದರಿಂದ ಯಾವುದೇ ಅನುದಾನ ಪಡೆಯಲು ಇಷ್ಟು ಸಮಯ ಕಾಯಬೇಕೇ?