ಕಾಂಗ್ರೆಸ್ ಮುಸ್ಲಿಂ ಮುಖಂಡರು ‘ಹಕ್ಕು’ ಕೇಳಲು ಯಾಕೆ ಹಿಂಜರಿಯುತ್ತಿದ್ದಾರೆ.? ಬಿಟ್ಟಿ.. ಬೇಡ, ಸಂವಿಧಾನ ಬದ್ದವಾದ ಹಕ್ಕನ್ನು ಜಾರಿ ಮಾಡಿ.
ಚುನಾವಣೆ ಹತ್ತಿರ ಬರುವಾಗ ಪ್ರತ್ಯಕ್ಷರಾಗುವ ಮುಸ್ಲಿಂ ಮುಖಂಡರು ಚುನಾವಣೆ ಮುಗಿದ ನಂತರ ಯಾವ ಬಿಲದಲ್ಲಿ ಅಡಗಿಕೂತಿದ್ದಾರೆ ಅನ್ನುವ ಸಂಶಯ ಸಮುದಾಯದ ಜನರಲ್ಲಿ ಕಾಡುವುದಂತೂ ಸತ್ಯ. ಇದಕ್ಕೂ ಕಾರಣವಿದೆ. ಚುನಾವಣೆ ಸಮಯದಲ್ಲಿ ಬಿಜೆಪಿ ಎಂಬ ಗುಮ್ಮ ನನ್ನು ತೋರಿಸಿ, ಬಿಜೆಪಿ ಬಂದರೆ ಹಾಗಾಗುತ್ತದೆ? ಹೀಗಾಗುತ್ತದೆ? ಎಂದೆಲ್ಲಾ ಸಮುದಾಯದ ಮತದಾರರನ್ನು ಬ್ರೈನ್ ವಾಶ್ ಮಾಡುವ ಕೆಲವು ಕಾಂಗಿ ಮುಸ್ಲಿಂ ಮುಖಂಡರು ಕಾಂಗ್ರೆಸ್ ಸರಕಾರವೇ ಅಸ್ತಿತ್ವದಲ್ಲಿರುವಾಗ ತಮ್ಮ ಹಕ್ಕು ಕೇಳಲು ಹಿಂದೇಟು ಹಾಕುತ್ತಿರುವುದು ಯಾತಕ್ಕಾಗಿ ಎಂಬ ಮಾತುಗಳು ಇದೀಗ ಎಲ್ಲೆಡೆ ಕೇಳಿಬರುತ್ತಿದೆ.

ಓರ್ವ ಅನ್ಯ ಸಮುದಾಯಕ್ಕೆ ಸೇರಿದ ರಾಜಕಾರಣಿ ಯಾವುದೇ ಪಕ್ಷದಲ್ಲಿದ್ದರೂ ತಮ್ಮ ಸಮುದಾಯದ ಪ್ರಶ್ನೆ ಬಂದಾಗ ಯಾವುದೇ ಹಿಂಜರಿಕೆ ಇಲ್ಲದೆ, ಹಕ್ಕುಗಳಿಗಾಗಿ ಪಕ್ಷದ ವಿರುದ್ಧವೇ ಮಾತನಾಡಲು ಆ ರಾಜಕಾರಣಿಗೆ ಸಾಧ್ಯವಾಗುತ್ತದೆ. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ತಮ್ಮ ಪ್ರಾರ್ಥನಾ ಮಂದಿರಗಳಿಗೆ ಹಾನಿಯಾಗುತ್ತದೆ, ಸ್ಥಳಾಂತರಿಸಬೇಕು ಎಂಬ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೇ ಅತ್ತ ಕಾಲಿಡದಂತೆ ಆ ಸಮುದಾಯದವರು ಮಾಡುತ್ತಾರೆ. ಆದರೆ ಅಂತಹ ಕೆಫಾಸಿಟಿ ಮುಸ್ಲಿಂ ಸಮುದಾಯದ ರಾಜಕಾರಣಿಗಳಿಗೆ ಇದೆಯೇ.? ನಾಯಕರ ಹಿಂಬಾಲಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆಯೇ ಹೊರತು ಸ್ವಂತ ಇಮೇಜ್ ಬೆಳೆಸಿಕೊಳ್ಳದಿರುವುದು ಇದಕ್ಕೆಲ್ಲ ಕಾರಣ. ಇನ್ನು ಒಕ್ಕಲಿಗರು ತಮ್ಮ ಹಕ್ಕಿಗಾಗಿ ಪಕ್ಷದ ನಿಲುವಿನ ವಿರುದ್ಧವೇ ಸಹಿ ಮಾಡಿ ತಮ್ಮ ಸಮುದಾಯ ಪ್ರೇಮ ತೋರಿಸುತ್ತಾರೆ. ಲಿಂಗಾಯತರು ಪಕ್ಷ ಭೇದ ಮರೆತು ಸಮಾಜಕ್ಕಾಗಿ ಎದ್ದು ನಿಲ್ಲುತ್ತಾರೆ. ಆದರೆ ಮುಸ್ಲಿಮರು ತಮ್ಮ ಸಮುದಾಯಕ್ಕೆ ಅನ್ಯಾಯವಾದಾಗ ಇತರ ಸಮುದಾಯದವರಂತೆ ಒಗ್ಗಟ್ಟಾಗುವ ಬದಲು ಛಿದ್ರ ಛಿದ್ರರಾಗುತ್ತಾರೆ. ಇತರ ಸಮುದಾಯಗಳಿಗೂ, ಮುಸ್ಲಿಮರಿಗೂ ಇರುವ ವ್ಯತ್ಯಾಸ.
ಕಳೆದ ಚುನಾವಣೆಯಲ್ಲಿ ಶೇಕಡಾ 90 ರಷ್ಟು ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆಂಬಲಿಸಿತ್ತು. ಆದರೆ ಅಧಿಕಾರ ಸಿಕ್ಕಿದ್ದು ಬರೀ ಇಬ್ಬರಿಗೆ ಮಾತ್ರ. ಇತರ ಸಮುದಾಯಗಳ ಗಣನೀಯ ಮತ ಕಾಂಗ್ರೆಸ್ ಪಕ್ಷಕ್ಕೆ ಬೀಳದಿದ್ದರೂ ಅಧಿಕಾರದಲ್ಲಿ ಸಿಂಹಪಾಲು ಪಡೆಯುತ್ತಾರೆ. ಕಾಂಗ್ರೆಸ್ ಪರ ಮುಸ್ಲಿಮರು ಒಗ್ಗಟ್ಟಾಗಿ ನಿಂತಿರುವಾಗ ತಮ್ಮ ಹಕ್ಕು ಪಡೆಯಲು ಒಗ್ಗಟ್ಟು ಪ್ರದರ್ಶಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಹಿಜಾಬ್ ವಿವಾದ ಉದ್ಭವಿಸಿತ್ತು. ಮುಸ್ಲಿಂ ವಿದ್ಯಾರ್ಥಿನಿಯರು ಬೀದಿಗೆ ಬಂದಿದ್ದರು. ಆ ವಿವಾದ ಇತ್ಯರ್ಥ ಪಡಿಸಲು ಮುಸ್ಲಿಂ ಸಮುದಾಯಕ್ಕೆ ಅವಕಾಶವಿದೆ. ಆದರೆ ಈಗ ಯಾರೂ ಮಾತನಾಡುತ್ತಿಲ್ಲ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ, ಹುಬ್ಬಳ್ಳಿ ಇನ್ನಿತರ ಕಡೆಯ ಕೋಮುಗಲಭೆ ಪ್ರಕರಣದಲ್ಲಿ ಹಲವಾರು ಅಮಾಯಕ ಮುಸ್ಲಿಮರನ್ನು ಬಿಜೆಪಿ ಸರಕಾರ ಜೈಲಿಗೆ ಅಟ್ಟಿತ್ತು. ನಿರಪರಾಧಿ ಮುಸ್ಲಿಮರ ಕೇಸುಗಳನ್ನು ವಾಪಾಸು ಪಡೆಯಲು ಕಾಂಗ್ರೆಸ್ ಮುಸ್ಲಿಂ ಮುಖಂಡರು ಯಾರೂ ಇದೀಗ ಮಾತನಾಡುತ್ತಿಲ್ಲ. ಮೀಸಲಾತಿ ರದ್ದತಿ ಸಮುದಾಯದ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಯಾರೂ ಮುಂದಾಗುತ್ತಿಲ್ಲ. ಆದರೆ ಡಿಕೆಶಿ ವಿರುದ್ಧದ ಕೇಸುಗಳನ್ನೆಲ್ಲಾ ಈ ಸರ್ಕಾರ ರದ್ದುಪಡಿಸಿದೆ. ರಾಷ್ಟ್ರಮಟ್ಟದಲ್ಲಿ ವಿಪಿ ಸಿಂಗ್ ಜಾರಿಗೊಳಿಸಲು ಮುಂದಾದ ಮಂಡಲ್ ವರದಿ ಬಗ್ಗೆಯೂ ಆ ನಂತರ ಯಾವುದೇ ಸುದ್ದಿಯಿಲ್ಲ. ಮುಸ್ಲಿಂ ಸಮುದಾಯ ಕಣ್ಣು ಮುಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಕಷ್ಟೇ ಸೀಮಿತವೇ ತಮ್ಮ ಹಕ್ಕು ಕೇಳುವ ಯಾವುದೇ ಅಧಿಕಾರ ಇಲ್ಲವೇ. ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಗುಮ್ಮ ನನ್ನು ತೋರಿಸಲಾಗುತ್ತದೆ. ಮುಸ್ಲಿಂ ಸಮುದಾಯದ ಮತ ಕಬಳಿಸುವ ತಂತ್ರ ಕಾಂಗ್ರೆಸ್ ಗೆ ಚೆನ್ನಾಗಿ ಅರಿತಿರುವುದರಿಂದ ಮುಸ್ಲಿಮರ ಹಕ್ಕು ಬಗ್ಗೆ ಮೌನ ತಾಳುತ್ತದೆ.

ಮಾರ್ಚ್ 25, 2023ರಂದು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಪುನರ್‌ವರ್ಗೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಜೊತೆಗೆ ಒಕ್ಕಲಿಗರಿಗೆ ಇದ್ದ ಮೀಸಲಾತಿಯನ್ನು ಶೇ.4ರಿಂದ ಶೇ.6ಕ್ಕೆ ಮತ್ತು ವೀರಶೈವ ಲಿಂಗಾಯತರಿಗೆ ಶೇ.5ರಿಂದ ಶೇ.7ಕ್ಕೆ ಏರಿಕೆ ಮಾಡಲಾಗಿದೆ. ಮುಸ್ಲಿಮರಿಗೆ 2ಬಿ ಅಡಿಯಲ್ಲಿದ್ದ ಮೀಸಲಾತಿಯನ್ನು ರದ್ದುಮಾಡಲಾಗಿದೆ. ಸಮಾನತೆಯ ಆಶಯದನ್ವಯ, ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ವರ್ಗಗಳಿಗೆ ಸ್ಥಾನಮಾನ ಕಲ್ಪಿಸಲು ದೇಶದಲ್ಲಿ ಮೀಸಲಾತಿಯ ಕಲ್ಪನೆ ಜಾರಿಗೆ ಬಂದಿದ್ದು, 1955ರ ಕಾಕಾ ಕಾಲೆಲ್‌ಕರ್ ಕಮಿಷನ್ ಮತ್ತು 1979ರ ಮಂಡಲ್ ಕಮಿಷನ್ ಅನ್ವಯ ಮೀಸಲಾತಿಗೆ ಜಾರಿಗೆ ಬಂದಿತ್ತು. ಆರಂಭದಲ್ಲಿ ಮುಸ್ಲಿಂ ಮೀಸಲಾತಿ ಇಲ್ಲದಿದ್ದರೂ, ಮುಸ್ಲಿಮರು ಸಮಾಜದ ಮುಖ್ಯಭೂಮಿಕೆಗೆ ಬಾರದೇ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದನ್ನು ಮನಗಂಡು ಅವರಿಗೆ ಪ್ರತ್ಯೇಕ ಮೀಸಲಾತಿ ನೀಡುವ ಪರಿಪಾಠ ಜಾರಿಗೆ ಬಂದಿತು. 1977ರಲ್ಲಿ ದೇವರಾಜ್ ಅರಸು ರವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 16 ಜಾತಿಗಳಿಗೆ ಮೀಸಲಾತಿಯನ್ನು ನೀಡಲಾಗಿತ್ತು. ಅನಂತರ ಎಚ್.ಡಿ.ದೇವೇಗೌಡ ರವರು ಮುಖ್ಯಮಂತ್ರಿಯಾಗಿದ್ದಾಗ ಅಂದರೆ 1995ರಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಅದರಂತೆ ಮುಸ್ಲಿಮರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಿ, ಒಬಿಸಿ ಅಡಿಯಲ್ಲಿ 2ಬಿ ಉಪ ವರ್ಗವಾಗಿ ಪರಿಗಣಿಸಿ ಶೇ.4ರಷ್ಟು ಮೀಸಲಾತಿಯನ್ನು ನೀಡಲಾಯಿತು.
ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ನೂರು ವರ್ಷಗಳಷ್ಟು ಹಳೆಯದು. ಮೈಸೂರು ಸಂಸ್ಥಾನ 1919ರಲ್ಲಿ ಮಿಲ್ಲರ್ ವರದಿಯನ್ನು ಅನುಷ್ಠಾನಕ್ಕೆ ತಂದ ನಂತರ ಮುಸ್ಲಿಮರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಪರಿಗಣಿಸಲಾಗಿತ್ತು. ಆ ನಂತರದಲ್ಲಿ ನಾಗನಗೌಡ ಸಮಿತಿ (1966), ವಜೀರ್ ಸಮಿತಿ (1966), ಹಾವನೂರು ಆಯೋಗ (1975), ವೆಂಕಟಸ್ವಾಮಿ ಆಯೋಗ (1986), ಒ.ಚಿನ್ನಪ್ಪ ರೆಡ್ಡಿ ಆಯೋಗ (1990) ಮುಸ್ಲಿಮರು ಸಮಾಜದಲ್ಲಿ ಹಿಂದೆ ಇರುವುದನ್ನು ಗುರುತಿಸಿತ್ತು. ಸಾಚಾರ್ ವರದಿಯಲ್ಲೂ ಕೂಡ ಮುಸ್ಲಿಮರು ಹಿಂದುಳಿದಿರುವುದನ್ನು ಗುರುತಿಸಲಾಗಿತ್ತು ಮತ್ತು ಕೆಲವು ಹಿಂದುಳಿದ ವರ್ಗಕ್ಕಿಂತಲೂ ಅವರು ಹಿಂದುಳಿದಿದ್ದಾರೆ ಎಂದು ಹೇಳಲಾಗಿತ್ತು.
ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ಇಲ್ಲಿ ಮಾತ್ರವಲ್ಲ. ತೆಲಂಗಾಣ ಆಂಧ್ರ, ತಮಿಳುನಾಡು ಕೇರಳದಲ್ಲಿಯೂ ಮುಸ್ಲಿಮರಿಗೆ ಮೀಸಲಾತಿ ಇದೆ. ಕೇರಳದಲ್ಲಿ ಅತ್ಯಧಿಕ ಶೇ.12ರಷ್ಟು ಮೀಸಲಾತಿ ಇದ್ದರೆ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಶೇ.4ರಷ್ಟು ಮೀಸಲಾತಿ ಇದೆ. ತಮಿಳುನಾಡಿನಲ್ಲಿ ಶೇ.3.5ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ವಿವಿಧ ಸಮಿತಿಗಳ ಅಧ್ಯಯನ ಮತ್ತು ಶಿಫಾರಸುಗಳ ಆಧಾರದ ಮೇಲೆ ಈ ಮೀಸಲಾತಿಯನ್ನು ನೀಡಲಾಗಿದೆ.
ಈ ಹಿಂದೆ ಮುಸ್ಲಿಂ ಸಮುದಾಯಕ್ಕೆ 2ಬಿ ಅಡಿಯಲ್ಲಿ ಮೀಸಲಾತಿ ಇದ್ದಾಗ, ಶಿಕ್ಷಣ ಸಂಸ್ಥೆಗಳಲ್ಲಿ 12 ಲಕ್ಷ ಮಿತಿ ಒಳಗೆ ಇದ್ದ ಕುಟುಂಬಗಳಿಗೆ ಶೇ.4ರಷ್ಟು ಮೀಸಲಾತಿ ಸಿಗುತ್ತಿತ್ತು. ಉಳಿದವರಿಗೆ ಸಾಮಾನ್ಯ ಕೋಟಾದಲ್ಲಿ ಅವಕಾಶ ಇತ್ತು. ಜೊತೆಗೆ ಸರ್ಕಾರಿ ಕೆಲಸ, ನಿಗಮ ಮಂಡಳಿ ಅಡಿಯಲ್ಲಿ ಶೇ.4ರಷ್ಟು ಮೀಸಲಾತಿ ಇರುತ್ತಿತ್ತು. ಇದರಿಂದ ಬಡ ಮುಸ್ಲಿಂ ವರ್ಗಕ್ಕೆ ಪ್ರಯೋಜನವಾಗಿತ್ತು. ಹೊಸ ವರ್ಗೀಕರಣದಿಂದ ಇಡಬ್ಲ್ಯೂಎಸ್ ಅಡಿಯಲ್ಲಿ ಮುಸ್ಲಿಮರು ಬಂದಿದ್ದು, ಇದರಲ್ಲಿ ಹಿಂದೂ ಬ್ರಾಹ್ಮಣ, ಜೈನ್ ಮುಂತಾದ ಸಮುದಾಯಗಳಿದ್ದು ಶೇ.10ರಷ್ಟು ಮೀಸಲಾತಿ ಇರಲಿದೆ. ಆದರೆ ಇದು ಸಾಮಾಜಿಕ ಸ್ತರವನ್ನು ನೋಡದೆ, ಕೇವಲ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಇದೆ. ಇಡಬ್ಲ್ಯೂಎಸ್‌ನಲ್ಲಿ ಮುಸ್ಲಿಮರನ್ನು ಸೇರಿಸುವುದರಿಂದ, ಅಲ್ಲಿ ನಿರ್ದಿಷ್ಟವಾಗಿ ಮೀಸಲಾತಿ ಸಿಗುತ್ತದೆಯೇ ಇಲ್ಲವೇ ಎಂಬುದು ಖಚಿತವಿಲ್ಲ. ಇದರೊಂದಿಗೆ ಹಿಂದುಳಿದ ಮುಸ್ಲಿಮರಿಗೆ ಖಚಿತವಾಗಿ ದೊರಕುತ್ತಿದ್ದ ಶೇ.4ರ ಮೀಸಲಾತಿ ಇಲ್ಲವಾಗಿರುವುದು ಆತಂಕ ತಂದಿದೆ.

ಇದೀಗ ರಾಜ್ಯಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ಕಾಂತರಾಜು ವರದಿ ಬಗ್ಗೆ ಕಪೋಲಕಲ್ಪಿತ ಕಥೆ ಕಟ್ಟಿ ಮೂಲ ವರದಿ ಕಾಣೆಯಾಗಿದೆ ಎಂದೆಲ್ಲಾ ಹೇಳಿ ಕಸದ ಬುಟ್ಟಿಗೆ ಎಸೆಯುವ ತಯಾರಿ ನಡೆಯುತ್ತಿದೆ. ಒಂದು ವೇಳೆ ಕಾಂತರಾಜು ವರದಿ ಜಾರಿಯಾದರೆ ಮುಸ್ಲಿಮರು ಸೇರಿದಂತೆ ಅಲ್ಫಸಂಖ್ಯಾತ, ಹಿಂದುಳಿದ ವರ್ಗ ತಮ್ಮ ಅರ್ಹ ಹಕ್ಕು ಕೇಳಬಹುದು ಎಂಬ ಹೆದರಿಕೆಯಿಂದ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿರುವ ಬಹುತೇಕ ಶಾಸಕರು ಕೂಡ ಈ ವರದಿ ಜಾರಿಯಾಗದಂತೆ ನಡೆಸುವ ಎಲ್ಲಾ ಪ್ಲ್ಯಾನ್ ಮಾಡುತ್ತಿದೆ. ಅಲ್ಪಸಂಖ್ಯಾತರ ನಿರ್ಣಾಯಕ ಮತಗಳಿಂದ ಗೆದ್ದವರು ಇದೀಗ ಸಮುದಾಯದ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಮುಸ್ಲಿಂ ಸಮುದಾಯ ಸ್ವಾಭಿಮಾನ ಪ್ರದರ್ಶಿಸಿದರೆ ಮಾತ್ರ ಉಳಿಗಾಲ. ಇಲ್ಲವಾದರೆ ಯಾವುದೇ ಸರಕಾರ ಬಂದರೂ ಕಾಲ ಕಸದಂತೆ ಅನ್ನುವುದು ಅಷ್ಟೇ ಸತ್ಯ. ಒಕ್ಕಲಿಗರು, ಲಿಂಗಾಯತರಂತೆ, ಮುಸ್ಲಿಮರು ಯಾಕೆ ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ ಅನ್ನುವುದೇ ಸದ್ಯದ ಪ್ರಶ್ನೆ.! ಮುಸ್ಲಿಂ ಅಲ್ಪ ಸಂಖ್ಯಾತರು ನಿಮ್ಮಿಂದ ಬಿಟ್ಟಿ ಹಕ್ಕು ಕೇಳ್ತಾ ಇಲ್ಲ. ಸಂವಿಧಾನ ಬದ್ದ ಅವರ ಹಕ್ಕನ್ನು ಜಾರಿ ಮಾಡಿ.