ಬಂಟ್ವಾಳ, ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ; ಸುಳ್ಯ, ಬಂಟ್ವಾಳದಲ್ಲಿ ಬಿಜೆಪಿ ಕಚೇರಿಗೆ ಬೀಗ.!

ಕರಾವಳಿ

ಕಲ್ಲಡ್ಕ ಭಟ್ಟ್ – ರಾಜೇಶ್ ನಾಯ್ಕ್ ಮಧ್ಯೆ ಫೈಟ್

ಮಹತ್ವದ ಬೆಳವಣಿಗೆಯೊಂದರಲ್ಲಿ ಶಿಸ್ತಿನ ಪಕ್ಷ ಎಂದೇ ಕರೆಯಿಸಿಕೊಂಡಿದ್ದ ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೇರಿದ್ದು, ಬಂಟ್ವಾಳದಲ್ಲಿ ಶಾಸಕ ಮತ್ತು ಪರಿವಾರದ ನಾಯಕರ ಮಧ್ಯೆ ಮೆಗಾ ಫೈಟ್ ಆರಂಭಗೊಂಡಿದೆ.

ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಪದಾಧಿಕಾರಿಗಳ ಸಭೆ ನಡೆಸಿ ರಾಮ್ ದಾಸ್ ಬಂಟ್ವಾಳ ಹೆಸರನ್ನು ಅಂತಿಮಗೊಳಿಸಿ ಜಿಲ್ಲಾಧ್ಯಕ್ಷರಿಗೆ ಕಳುಹಿಸಲಾಗಿತ್ತು. ಆದರೆ ಜಿಲ್ಲಾಧ್ಯಕ್ಷರು ರಾಜ್ಯ ಪ್ರಮುಖರಿಗೆ ಕಳುಹಿಸಿದ ಪಟ್ಟಿಯಲ್ಲಿ ರಾಂ ದಾಸ್ ಹೆಸರು ಮಾಯವಾಗಿ ಕಲ್ಲಡ್ಕ ಭಟ್ಟರ ಗರಡಿಯಲ್ಲಿ ಪಳಗಿದ ಚೆನ್ನಪ್ಪ ಕೋಟ್ಯಾನ್ ಹೆಸರು ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಇದರಿಂದ ಆಕ್ರೋಶಿತರಾಗಿರುವ ಶಾಸಕ ರಾಜೇಶ್ ನಾಯ್ಕ್ ಬಣದ ಗುಂಪು ರಾತ್ರೋರಾತ್ರಿ ಸಭೆ ನಡೆಸಿ ಅಧ್ಯಕ್ಷ ಹುದ್ದೆ ವಿಚಾರದಲ್ಲಿ ಶಾಸಕರಿಗೆ ಅವಮಾನವಾಗಿದೆ. ಎರಡು ಬಾರಿ ಶಾಸಕರಾಗಿ, ಪಕ್ಷ ಸಂಘಟನೆ ಮಾಡುತ್ತಿರುವ ರಾಜೇಶ್ ನಾಯ್ಕ್ ರನ್ನು ಮೂಲೆಗುಂಪು ಮಾಡುವ ಹುನ್ನಾರವಿದು. ಶಾಸಕರ ವೈಯುಕ್ತಿಕ ಖರ್ಚಿನಲ್ಲಿ ನಡೆಯುತ್ತಿದ್ದ ಬಂಟ್ವಾಳ ಬಿಜೆಪಿ ಕಚೇರಿಗೆ ಶಾಸಕ ನಾಯ್ಕ್ ಬೀಗ ಜಡಿದಿದ್ದಾರೆ. ಒಟ್ಟಾರೆ ಬಂಟ್ವಾಳದಲ್ಲಿ ಬಿಜೆಪಿ ಬಣಗಳ ನಡುವೆ ಮೆಗಾ ಫೈಟ್ ಆರಂಭಗೊಂಡಿದ್ದು, ಇದು ಯಾವ ಹಂತಕ್ಕೆ ಮುಟ್ಟುತ್ತದೋ ಅನ್ನುವುದನ್ನು ಕಾದುನೋಡಬೇಕಿದೆ.

ಇನ್ನು ಸುಳ್ಯ ಬಿಜೆಪಿಯಲ್ಲೂ ಇದೇ ರೀತಿಯ ಪರಿಸ್ಥಿತಿ ಮುಂದುವರಿದಿದ್ದು, ಕೋರ್ ಕಮಿಟಿ ಶಿಫಾರಸು ಮಾಡಿದ ಹೆಸರನ್ನು ಪರಿಗಣಿಸದೆ ಬೇರೆ ಅಧ್ಯಕ್ಷರನ್ನು ನೇಮಕ ಮಾಡಿರುವ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ. ಕೋರ್ ಕಮಿಟಿ ಕಳುಹಿಸಿದ ವಿನಯ ಮುಳುಗಾಡು ಬದಲಿಗೆ ವೆಂಕಟ್ ವಳಲಂಬೆಯನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.