ರಾಯಲ್ಟಿ ಕಡಿಮೆಗೊಳಿಸಿ, ನಿಯಮಬದ್ಧ ಕಲ್ಲು ಗಣಿಗಾರಿಕೆಗೆ ಅವಕಾಶ, ವಾರದೊಳಗೆ ಜಿಲ್ಲೆಯ ಕೆಂಪು ಕಲ್ಲು ಉತ್ಪಾದಕರೊಂದಿಗೆ ಸಭೆ ನಡೆಸಿ: ಉಸ್ತುವಾರಿ ಸಚಿವರ ಸೂಚನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆ ಸ್ಥಗಿತಗೊಂಡು ಎರಡು ತಿಂಗಳೇ ಕಳೆದಿದೆ. ಮನೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಕೆಂಪು ಕಲ್ಲು ಲಭ್ಯತೆಯ ಕೊರತೆಯಿಂದ ಅರ್ಧದಲ್ಲೇ ನಿಂತಿದೆ. ಕೆಲಸವಿಲ್ಲದೆ ಹಲವಾರು ಕಾರ್ಮಿಕರು ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ಜಿಲ್ಲೆಯಲ್ಲಿ ಹಲವಾರು ಸಂಘಟನೆಗಳು ಬೃಹತ್ ಹೋರಾಟಕ್ಕೆ ತೀರ್ಮಾನಿಸಿದೆ.
ಇದೀಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದು, ನಿಯಮಬದ್ಧವಾಗಿ ಕಲ್ಲು ಗಣಿಗಾರಿಕೆ ಆರಂಭಿಸಲು ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.

ವಾಣಿಜ್ಯ ಉದ್ದೇಶವಲ್ಲದ ಕೆಂಪುಕಲ್ಲು ಕ್ವಾರಿಗಳಿಗೆ ಅಧಿಕೃತವಾಗಿ ಪರವಾನಿಗೆ ಕೊಡುವ ವ್ಯವಸ್ಥೆ ಜಾರಿಯಾಗಬೇಕು. ಪರವಾನಿಗೆ ಪಡೆಯಲು ಏಕಗವಾಕ್ಷಿ ಯೋಜನೆ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಸಮಯಮಿತಿಯಲ್ಲಿ ಪರವಾನಿಗೆಗಳನ್ನು ಕೊಡುವ ಕಾರ್ಯಗತಿ ಜಾರಿಗೆ ತರುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೆಂಪುಕಲ್ಲು ಉತ್ಪಾದಕರೊಂದಿಗೆ ಚರ್ಚೆ ನಡೆಸಿ ವಾರದೊಳಗೆ ಹೊಸ ನೀತಿ ಜಾರಿಗೊಳಿಸುವತ್ತ SOP ಸಿದ್ಧಪಡಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಣ್ಣ ಸಮತಟ್ಟು ಸೇರಿದಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 3 ಮೀಟರ್ ಮಾತ್ರ ಆಳಕ್ಕೆ ಡ್ರಿಲ್ ಮಾಡಲು ಅವಕಾಶವಿದ್ದು, ಇದನ್ನ 6 ಮೀಟರ್ ಗೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಕೆಲವು ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಕೆಂಪುಕಲ್ಲು ಗಣಿಗಾರಿಕೆಗೆ ಕೆಲವು ನಿರ್ಭಂಧಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಲಭ ರೀತಿಯಲ್ಲಿ ಕೆಂಪುಕಲ್ಲು ಗ್ರಾಹಕರಿಗೆ ದೊರೆಯುವಂತಾಗಬೇಕು. ರಾಯಾಲ್ಟಿಯನ್ನ ಕಡಿಮೆಗೊಳಿಸಿಗೆ ನಿಯಮ ಬದ್ಧವಾಗಿ ಕಲ್ಲು ಗಣಿಗಾರಿಗೆಕೆ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.
