ಪ್ರೀತಿಯ ನಾಟಕವಾಡಿ ಹಣ ಪಡೆದು ಮದುವೆಯೂ ಆಗದೇ ಹಣ ಕೂಡ ವಾಪಾಸ್ ನೀಡದೇ ಯುವಕ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಎದುರು ಯುವತಿಯೊಬ್ಬಳು ಧರಣಿ ಕುಳಿತ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದ ದಲ್ಲಿ ನಡೆದಿದೆ. ಯುವತಿಯ ಮನವೂಲಿಸಲು ವಿಫಲರಾದ ವಿಟ್ಲ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ.
ಉತ್ತರ ಭಾರತದ ಜಲಂಧರ್ ಮೂಲದ ಯುವತಿ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂದರ್ಭ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿವೆ ಎನ್ನಲಾಗಿದೆ. ಮಂಗಳವಾರ ಸಾಯಂಕಾಲ ಅಡ್ಯನಡ್ಕದ ಮನೆ ಬಳಿಗೆ ಬಂದ ಸಂತ್ರಸ್ತ ಯುವತಿಗೆ ಪ್ರೀತಿ ಮಾಡುವುದಾಗಿ ಹೇಳಿದ ಯುವಕ ಸಿಕ್ಕಿಲ್ಲ. ಇದರಿಂದ ಯುವಕನನ್ನು ತನಗೆ ಒಪ್ಪಿಸುವಂತೆ ಪಟ್ಟು ಹಿಡಿದು ಮನೆಯ ಮುಂದೆ ಧರಣಿ ಕುಳಿತಿದ್ದಾಳೆ. ಯುವಕ ಆಕೆಯಿಂದ ಹಣಕಾಸಿನ ನೆರವು ಪಡೆದಿದ್ದು ವಿವಾಹವಾಗುವ ಭರವಸೆ ನೀಡಿದ್ದ ಎನ್ನಲಾಗಿದೆ. ಇದೀಗ ಮದುವೆಯೂ ಆಗದೇ ಹಣವನ್ನು ಹಿಂತಿರುಗಿಸದೇ ಹಣವನ್ನು ವಂಚಿಸಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

ಸ್ಥಳೀಯರು ಸ್ಥಳದಲ್ಲಿ ಜಮಾಯಿಸುತ್ತಿದ್ದಂತೆ ವಿಟ್ಲ ಠಾಣೆಯಿಂದ ಆಗಮಿಸಿದ ಪೊಲೀಸರು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಯುವಕ ಹಾಗೂ ಯುವತಿ ಭಿನ್ನ ಸಮುದಾಯದವರು ಎನ್ನಲಾಗಿದೆ. ಸ್ಥಳದಲ್ಲಿ ಎರಡು ಸಮುದಾಯದ ಜನರು ಸೇರಿದ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.
