ರಾಮ, ಹನುಮ, ಪರಶುರಾಮ: ಬಿಜೆಪಿ ‘ಪಾಸ್’, ಕಾಂಗ್ರೆಸ್ ‘ಫೇಲ್’ ; ಅಡ್ಜೆಸ್ಟ್ ಮೆಂಟ್ ರಾಜಕಾರಣಕ್ಕೆ ಬೆಲೆ ತೆತ್ತ ಕಾಂಗ್ರೆಸ್.!

ರಾಷ್ಟ್ರೀಯ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯೊಂದನ್ನು ಈ ಹಿಂದೆ ಕೊಟ್ಟಿದ್ದರು. ಆರ್ ಎಸ್ ಎಸ್ ನೊಂದಿಗೆ ತೆರೆಮರೆಯ ಸಂಬಂಧ ಹೊಂದಿರುವ ಕಾಂಗ್ರೆಸ್ ನಾಯಕರೆಲ್ಲ ಕಾಂಗ್ರೆಸ್ ಬಿಟ್ಟು ತೆರಳಲಿ. ಮುಕ್ತ ಅವಕಾಶವಿದೆ. ನಾವು ಮತ್ತೆ ಪಕ್ಷವನ್ನು ಸದೃಢವಾಗಿ ಕಟ್ಟುತ್ತೇವೆ. ರಾಹುಲ್ ಗಾಂಧಿ ಮಾತಿನ ತಾತ್ಪರ್ಯ ದಂತೆ ಇಂದು ದೆಹಲಿ ಮಟ್ಟದಲ್ಲಿ ಮಾತ್ರವಲ್ಲ ರಾಜ್ಯ, ಜಿಲ್ಲೆ, ಗಲ್ಲಿ ಮಟ್ಟದಲ್ಲೂ ಕೆಲವೊಂದು ಕಾಂಗ್ರೆಸ್ ನಾಯಕರು ಹಗಲು ಹೊತ್ತಿನಲ್ಲಿ ಕಾಂಗ್ರೆಸ್ಸಿಗರಂತೆ ನಟಿಸಿದರೆ, ರಾತ್ರಿ ಹೊತ್ತು ಬಿಜೆಪಿಗರಾಗುತ್ತಾರೆ. ಇಂತಹ ಮನಸ್ಥಿತಿಯ ನಾಯಕರಿಂದಲೇ ಕಾಂಗ್ರೆಸ್ ಬಹುತೇಕ ಕಡೆ ಇಕ್ಕಟ್ಟಿಗೆ ಸಿಲುಕಿರುವುದುಂಟು.

ಬಿಜೆಪಿ ಪಕ್ಷ ಸಿಕ್ಕ ಅವಕಾಶವನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳುತ್ತದೆ, ಸಿಕ್ಕ ಅವಕಾಶವನ್ನು ಕಾಂಗ್ರೆಸ್ ಹೇಗೆ ಕೈ ಚೆಲ್ಲುತ್ತದೆ ಎಂಬುದಕ್ಕೆ ಇಲ್ಲಿದೆ ಕೆಲವೊಂದು ನಿದರ್ಶನ.

ದೇಶದಾದ್ಯಂತ ಬಿಜೆಪಿ ರಾಮಮಂದಿರ ಉದ್ಘಾಟನೆಯನ್ನು ರಾಷ್ಟ್ರ ಮಂದಿರ ವಾಗಿ ಪರಿವರ್ತಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಮನ ಹೆಸರಿನಲ್ಲಿ ಗೆಲ್ಲಲು ಹೊರಟಿರುವ ಬಿಜೆಪಿಯನ್ನು ಕಾಂಗ್ರೆಸ್ ಎದುರಿಸಿದ ರೀತಿ ಮಾತ್ರ ಅತ್ಯಂತ ದುರ್ಬಲವಾದುದು. ಇದೊಂದು ಭಾವನಾತ್ಮಕ ವಿಷಯವಾಗಿರುವುದರಿಂದ ಕಾಂಗ್ರೆಸ್ ಅತ್ಯಂತ ಸೂಕ್ಷ್ಮ ವಾಗಿ ಎದುರಿಸುವ ಅವಕಾಶ ಇತ್ತು. ಆದರೆ ಕಾಂಗ್ರೆಸ್ ಮಾಡಿದ್ದೇನು? ಬಿಜೆಪಿಗೆ ಟಕ್ಕರ್ ಕೊಡುವ ಬದಲು ತಾನೇ ಬಿಜೆಪಿಯಾಗಿ ಬಿಜೆಪಿಯ ಅಜೆಂಡಾವನ್ನು ಈಡೇರಿಸಿತು. ರಾಜೀವ್ ಗಾಂಧಿ ರಾಮಮಂದಿರಕ್ಕೆ ಅಡಿಗಲ್ಲು ಹಾಕಿದ್ದು, ರಾಮಮಂದಿರ ಶ್ರೇಯ ನಮಗೆ ಸಲ್ಲಬೇಕು ಅನ್ನುವ ರೀತಿಯಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರು, ಪಕ್ಷದ ಅಧಿಕೃತ ಖಾತೆಗಳು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲು ಮುಂದಾಯಿತು. ಪರೋಕ್ಷವಾಗಿ ಬಾಬ್ರಿ ಮಸೀದಿ ಧ್ವಂಸಕ್ಕೆ ತಾವೇ ಕಾರಣ ಅನ್ನುವ ಸಂದೇಶವನ್ನು ಜನಸಾಮಾನ್ಯರು ಸುಲಭವಾಗಿ ಅರಿತುಕೊಳ್ಳಲು ಕಾರಣವಾಯಿತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉದುರಿಸಿ ಬಿಜೆಪಿ ತಮ್ಮ ಕಾರ್ಯ ಯಥಾವತ್ತಾಗಿ ನಡೆಸಿತು.

ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ದೂರದರ್ಶಿತ್ವ ಪ್ರದರ್ಶಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಅವಕಾಶ ಇತ್ತು. ರಾಮಮಂದಿರ ಇಶ್ಯೂ ರಾಜಕೀಯ ರಹಿತವಾಗಿದ್ದು, ನ್ಯಾಯಾಲಯದ ಆದೇಶದಂತೆ ನಡೆದಿರುವುದು. ಕೆಲಸ ಪೂರ್ಣಗೊಳ್ಳಲು ಇನ್ನೂ ವರ್ಷ ಬಾಕಿಯಿದ್ದರೂ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ತರಾತುರಿಯ ಉದ್ಘಾಟನೆಯ ಪ್ರಹಸನ ನಡೆಸುತ್ತಿದೆ. ಕೇಂದ್ರದಲ್ಲಿ ಯಾವುದೇ ಸರಕಾರ ಅಸ್ತಿತ್ವದಲ್ಲಿದ್ದರೂ ರಾಮ ಮಂದಿರ ಕಾರ್ಯ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಇದು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಡೆಯುವಂತದ್ದು, ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ, ಹಿಂದೂ ಧರ್ಮದ ಪ್ರಮುಖ ಸ್ವಾಮೀಜಿ ಗಳ ವಿರೋಧ ಇದೆಲ್ಲ ತನ್ನ ಕಾರ್ಯಕರ್ತರ ಮೂಲಕ ಮನೆಮನೆಗೆ ತಲುಪಿಸಿ ಬಿಜೆಪಿಯ ಸುಳ್ಳಿನ ಗೋಪುರವನ್ನು ಕಳಚಿ ಬಿಡುವ ಅವಕಾಶ ಇದ್ದರೂ ಕಾಂಗ್ರೆಸ್ ಕೈ ಚೆಲ್ಲಿ ಕುಳಿತಿತು.

ಉಡುಪಿಯ ಪರಶುರಾಮ ಮೂರ್ತಿ ವಿವಾದ ಗದ್ದಲ ಎಬ್ಬಿಸಿದ್ದು ನಿಮಗೆ ತಿಳಿದೇ ಇದೆ. ಸ್ಥಳೀಯ ಬಿಜೆಪಿ ಶಾಸಕರು ಕಂಚಿನ ಪ್ರತಿಮೆ ಎಂದು ಬೂಸಿ ಬಿಟ್ಟು ಲೂಟಿ ಹೊಡೆದ ಪ್ರಕರಣವನ್ನು ಕಾಂಗ್ರೆಸ್ ದೊಡ್ಡ ಇಶ್ಯೂ ಮಾಡಿ ಬಿಜೆಪಿಯ ಧರ್ಮಾಧಾರಿತ ಮುಖವಾಡಕ್ಕೆ ಮಂಗಳಾರತಿ ಎತ್ತುವ ಅವಕಾಶ ಇತ್ತು. ಆದರೆ ರಾತ್ರೋರಾತ್ರಿ ಪ್ರತಿಮೆ ತೆರವು ಮಾಡಲಾಯಿತು. ಇದರ ಹಿಂದೆ ಕಾಂಗ್ರೆಸ್ ಕೆಲವು ನಾಯಕರ ಕೈವಾಡವಿದೆ. ಬಿಜೆಪಿ ಶಾಸಕರನ್ನು ರಕ್ಷಿಸಲು ಉಡುಪಿಯ ಕಾಂಗ್ರೆಸ್ ನಾಯಕರು ಇಂತಹ ಪ್ರಹಸನ ನಡೆಸಿದರು. ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ ಮುಖಾಂತರ ತನಿಖೆ ನಡೆಸಿದ್ದರೆ ಶಾಸಕರ ಬಣ್ಣ ಹೊರಬೀಳಬಹುದಿತ್ತು. ಆದರೆ ಇದನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸರಕಾರವೇ ಸಿಐಡಿ ಗೆ ವಹಿಸಿಕೊಟ್ಟಿತ್ತು. ಕಾಂಗ್ರೆಸ್ ನವರ ಅಡ್ಜೆಸ್ಟ್ ಮೆಂಟ್ ರಾಜಕಾರಣದ ಕಾರಣದಿಂದ ಬಿಜೆಪಿಯವರ ಧರ್ಮದ ಮುಖವಾಡ ಹೊರಬೀಳುವುದು ತಪ್ಪಿದಂತಾಯಿತು. ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಕಾಂಗ್ರೆಸ್ ನವರಿಗೆ ಸಹಕರಿಸಿದ್ದರಾ ಎಂದು ಕೊಂಡರೆ ಅದೂ ಇಲ್ಲ. ಕಾರ್ಕಳ ಬಿಜೆಪಿ ಶಾಸಕರು ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನ ವಿರುದ್ಧ ಕಾಂಗ್ರೆಸ್ ಪಕ್ಷದ ವಿರುದ್ಧವೇ ಬೀದಿಗಿಳಿದರು. ಅವರಿಗಿಲ್ಲದ ಅಡ್ಜಸ್ಟ್ ಮೆಂಟ್ ಕಾಂಗ್ರೆಸ್ಸಿಗರಿಗೇಕೆ ಎಂದು ಉಡುಪಿಯ ಕೆಲವು ಕಾಂಗ್ರೆಸ್ ನಾಯಕರು ಪಕ್ಷದ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಕೆಲವು ನಾಯಕರ ಸ್ವಾರ್ಥಕ್ಕೆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ಸಿನಿಂದ ದೂರ ಸರಿಯುವ ಮುನ್ಸೂಚನೆ ನೀಡಿದ್ದಾರೆ. ಸಮರ್ಪಕ ತನಿಖೆ ನಡೆಯುವವರೆಗೂ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಿರಲು ಕೆಲವು ಮುಖಂಡರು ನಿರ್ಧರಿಸಿದ್ದಾರೆ. ಅಡ್ಜಸ್ಟ್ ಮೆಂಟ್ ರಾಜಕಾರಣಕ್ಕೆ ಪಕ್ಷವನ್ನೇ ಬಲಿ ಕೊಡುತ್ತಿದ್ದಾರೆ.

ಪರಶುರಾಮ ಪ್ರತಿಮೆ ವಿಚಾರದಲ್ಲಿ ಬಿಜೆಪಿಯಲ್ಲಿ ರಕ್ಷಿಸಿದ ಕಾಂಗ್ರೆಸ್, ಪ್ರತಿಯಾಗಿ ಬಿಜೆಪಿ ಕೃತಜ್ಞತೆ ಏನೂ ಸಲ್ಲಿಸಿಲ್ಲ. ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಮಂಡ್ಯದಲ್ಲಿ ಹನುಮಧ್ವಜ ಹಾರಿಸಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಕಾಂಗ್ರೆಸ್ ಹಿಂದೂ ವಿರೋಧಿಯಾಗಿ ಬಿಂಬಿಸಿ ಸಕ್ಕರೆ ನಾಡಿನಲ್ಲಿ ಕಹಿ ಪಸರಿಸಿ ರಾಜಕೀಯ ಕೋಟೆ ಭದ್ರಪಡಿಸಲು ಪ್ರಯತ್ನಿಸಿತು.

ಮಂಗಳೂರಿನ ಖಾಸಗಿ ಶಾಲೆಯೊಂದರ ಶಿಕ್ಷಕಿ ಹಿಂದೂ ದೇವರ ಅವಹೇಳನದ ವಿರುದ್ಧ ಬಿಜೆಪಿ ಸಣ್ಣ ಸಣ್ಣ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಮಕ್ಕಳ ಬಾಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿಸಿ ತಮ್ಮ ರಾಜಕೀಯ ಫಸಲು ಪಡೆಯಲು ಪ್ರಯತ್ನಿಸಿತು. ಖುದ್ದು ಶಾಸಕರೇ ಮುಂದೆ ನಿಂತು ಪ್ರತಿಭಟನಾ ನಡೆಸಿದ್ದರು. ಇನ್ನೊಂದೆಡೆ ಬಿಜೆಪಿಯ ಮತ್ತೋರ್ವ ಶಾಸಕರು ಕ್ರಿಶ್ಚಿಯನ್ ವಿದ್ಯಾಸಂಸ್ಥೆ ತೊರೆಯಲು ಹಿಂದೂಗಳಿಗೆ ಕರೆ ಕೊಡುವ ಕೆಲಸ ಮಾಡುತ್ತಾರೆ. ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳು ನೀಡಿದ ಕೊಡುಗೆ ಬಗ್ಗೆ ಒಂದಿಷ್ಟೂ ಉಪಕಾರ ಸ್ಮರಣೆ ಇರದ ಬಿಜೆಪಿ ಶಾಸಕರು, ಯಾರೋ ಒಬ್ಬಾಕೆ ಮಾಡಿದ ಅಪರಾಧಕ್ಕೆ ಇಡೀ ಸಮುದಾಯವನ್ನು ಎಳೆದು ತಂದು ರಾಜಕೀಯ ತೀಟೆಗೋಸ್ಕರ ಬಳಸಿ ಯಶಸ್ವಿಯಾಗುತ್ತಾರೆ. ಸ್ಥಳೀಯ ಶಾಸಕರು ವಿದ್ಯಾಸಂಸ್ಥೆ ಮುಖ್ಯಸ್ಥರನ್ನು ಕರೆಯಿಸಿ ಆರೋಪಿ ಶಿಕ್ಷಕಿಯನ್ನು ಅಮಾನತುಗೊಳಿಸಿ ಕಳುಹಿಸಿ ಪ್ರಕರಣ ಇತ್ಯರ್ಥ ಮಾಡುವ ಅವಕಾಶ ಇದ್ದರೂ ರಾಜಕೀಯಗೋಸ್ಕರ ಬೀದಿಗೆ ಇಳಿದರು. ಆದರೆ ಕಾಂಗ್ರೆಸ್ಸಿಗರು ಅಧಿಕಾರ ಇದ್ದೂ ಅಡ್ಜಸ್ಟ್ ಮೆಂಟ್ ರಾಜಕಾರಣ ನಡೆಸಿ ಪಕ್ಷವನ್ನು ಬಲಿ ಕೊಡುತ್ತಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಯಾಕೆ ಲಕ್ಷಾಂತರ ಮತಗಳಿಂದ ಸೋಲುತ್ತದೆ ಎಂಬುದಕ್ಕೆ ಕಾರಣ ಹುಡುಕಿದರೆ ಸಿಗುವುದು ಪಕ್ಷ ಬೆಳೆಸುವ ಆಲಸ್ಯತನ, ಇಶ್ಯೂ ಇದ್ದರೂ ಅದನ್ನು ಅಡ್ಜಸ್ಟ್ ಮೆಂಟ್ ರಾಜಕಾರಣಕ್ಕೆ ಬಲಿಯಾಗಿ ಬಿಟ್ಟು ಬಿಡುವುದು, ಸಾಯೋವರೆಗೂ ತಮಗೇನೇ ಅಧಿಕಾರ, ಎರಡನೇ ಹಂತದ ನಾಯಕರನ್ನು ಬೆಳೆಸದೇ ಬಿಡುವುದು. ಇವಿಎಂ, ಹಿಂದುತ್ವದಿಂದ ಬಿಜೆಪಿ ಗೆದ್ದಿದೆ ಎಂದು ಕಾರ್ಯಕರ್ತರನ್ನು ನಂಬಿಸಿ ತಮ್ಮ ಲೋಪ ಗೊತ್ತಾಗದಂತೆ ಮರೆಮಾಚಿರುವುದು.

ಎಲ್ಲಿಯವರೆಗೂ ಬಿಜೆಪಿಗೆ ರಾಜಕೀಯವಾಗಿ ಟಕ್ಕರ್ ಕೊಡಲು ಮುಂದಾಗುವುದಿಲ್ಲವೋ ಅಲ್ಲಿಯವರೆಗೂ ಕಾಂಗ್ರೆಸ್ ಎದ್ದು ನಿಲ್ಲುವುದು ಕಷ್ಟ.