ಅಧಿಕಾರಿಗಳೇ.. ಇನ್ನೆಷ್ಟು ಜೀವಗಳು ಬಲಿಯಾಗಬೇಕು.?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿರಾಂತಕವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಎಷ್ಟೇ ದೂರು ನೀಡಿದರೂ ಲಗಾಮು ಹಾಕುತ್ತಿಲ್ಲ ಅನ್ನುವ ಆರೋಪಗಳಿವೆ. ಆಡಳಿತ ಹಾಗೂ ವಿರೋಧ ಪಕ್ಷಗಳು ಜಂಟಿಯಾಗಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದರಿಂದ ತಮ್ಮ ಆಟಾಟೋಪವನ್ನು ಸೇಫಾಗಿ ನಡೆಸುತ್ತಿದ್ದಾರೆ ಅನ್ನುವ ಮಾತುಗಳು ಇವೆ. ಅಕ್ರಮ ಮರಳುಗಾರಿಕೆಯಿಂದ ಪ್ರಾಕೃತಿಕ ಸಂಪತ್ತುಗಳಿಗೆ ವಿನಾಶದ ಜೊತೆ ಜೊತೆಗೆ, ಮರಳುಗಾರಿಕೆ ವಿರೋಧಿಸುವವರ ಮೇಲೆ ದೈಹಿಕ ಹಲ್ಲೆ ನಡೆದ ಸಾಕಷ್ಟು ಉದಾಹರಣೆಗಳು ಇದೆ. ಇದರ ಮಧ್ಯೆಯೇ ಅಕ್ರಮ ಮರಳುಗಾರಿಕೆಯಿಂದ ಹಲವು ಜೀವಗಳು ಪರೋಕ್ಷವಾಗಿ ಬಲಿಯಾದದ್ದು ಇದೆ.

ಎರಡು ದಿನಗಳ ಹಿಂದೆಯಷ್ಟೇ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ವಿದ್ಯಾರ್ಥಿಗಳಾದ ಯಶ್ವಿತ್, ರಾಘವೇಂದ್ರ, ನಿರೂಪ, ಅನ್ವಿತ್ ಎಂಬವರು ಪರೀಕ್ಷೆ ಮುಗಿಸಿ ಹಳೆಯಂಗಡಿ ಸಮೀಪದ ನಂದಿನಿ ನದಿಗೆ ಈಜಾಡಲು ತೆರಳಿದ್ದರು. ಆದರೆ ಅವರು ಕೊನೆಗೆ ಮೇಲೆ ಬಂದಿದ್ದು ಶವವಾಗಿ. ಹದಿನೈದರ ಹರೆಯದ ಪುಟ್ಟ ಪೋರರನ್ನು ಕಳೆದುಕೊಂಡ ಕುಟುಂಬ, ಊರು ಶೋಕಸಾಗರದಲ್ಲಿ ಮುಳುಗಿತ್ತು. ಇಂತಹ ಹೃದಯ ವಿದ್ರಾವಕ ಘಟನೆಗೆ ಅಕ್ರಮ ಮರಳುಗಾರಿಕೆಯೇ ಕಾರಣ ಅನ್ನುವ ಮಾತುಗಳು ಹರಿದಾಡುತ್ತಿದೆ.
ಹಳೆಯಂಗಡಿ ನಂದಿನಿ ನದಿ ಅದೇ ರೀತಿ ಮೂಲ್ಕಿ ಶಾಂಭವಿ ನದಿಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದರಿಂದ ನದಿಗಳಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗುತ್ತಿದ್ದು, ಈಜಲು ಹಾಗೂ ನದಿ ತಟಕ್ಕೆ ತೆರಳುವವರಿಗೆ ನದಿಯ ಆಳ ಅರಿವು ತಿಳಿಯದೆ ಅನಾಹುತಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಮೂಲರಪಟ್ನದಲ್ಲಿಯೂ ಅಕ್ರಮ ಮರಳುಗಾರಿಕೆ ಪರಿಣಾಮದಿಂದಾಗಿ ಈಜಲು ತೆರಳಿದ ಯುವಕರು ಸಾವಿಗೀಡಾಗಿದ್ದರು.
ಇದೀಗ ಸುರತ್ಕಲ್, ಹಳೆಯಂಗಡಿ ಭಾಗದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆಯ ಹಿಂದೆಯೂ ಅಕ್ರಮ ಮರಳುಗಾರಿಕೆ ವಾಸನೆ ಬಡಿಯುತ್ತಿದ್ದು, ನದಿಯ ಆಳ ಅಗಲ ತಿಳಿಯದೆ ಈಜಲು ತೆರಳಿದವರು ಘನಘೋರ ಅಂತ್ಯವಾಗಿದೆ. ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಘನಘೋರ ಜೀವಗಳು ಅಕ್ರಮ ಮರಳುಗಾರಿಕೆಗೆ ಬಲಿಯಾಗಬೇಕು.
