ಗ್ರಾಹಕರಿಗೆ ಪರಿಹಾರ ನೀಡುವಂತೆ ಹೊರಡಿಸಲಾಗಿದ್ದ ಆದೇಶವನ್ನು ಪಾಲಿಸಲು ವಿಫಲವಾದ ಖಾಸಗಿ ವಾಹನ ಮಳಿಗೆಯೊಂದರ ಎಂಡಿ ಬಂಧನಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ವಾರಂಟ್ ಜಾರಿ ಮಾಡಿದೆ.
ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದಲ್ಲಿರುವ ವಾಹನ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಿ ಹಾಜರು ಪಡಿಸುವಂತೆ ನಗರ ಪೊಲೀಸ್ ಆಯುಕ್ತರು ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಬೆಂಗಳೂರು ನಿವಾಸಿ ದೀಪಕ್ ಗೌಡ ಎಂಬುವವರು ತಮ್ಮ ಜಾಗ್ವಾರ್ ಕಾರ್ ಗೆ ಒಳಾಂಗಣ ವಿನ್ಯಾಸ ಮಾಡಿಸಲು ಕಂಪನಿಯೊಂದರ ವಾಹನ ಮಳಿಗೆಗೆ 6.96 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ ವಿನ್ಯಾಸ ದೋಷಪೂರಿತವಾಗಿತ್ತು. ಸರಿಪಡಿಸಿಕೊಡುವುದಾಗಿ ಕಾರ್ ವಶಕ್ಕೆ ಪಡೆದು ಸುಮ್ಮನಾಗಿದ್ದರು. ತಿಂಗಳುಗಟ್ಟಲೆ ಕಾರು ಮಳಿಗೆಯಲ್ಲೇ ಇತ್ತು. ಕೊನೆಗೆ ದೀಪಕ್ ಗೌಡ ಅವರು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋದರು. ವಿಚಾರಣೆ ನಡೆಸಿದ ವೇದಿಕೆ, ಮಳಿಗೆಗೆ 6.57 ಲಕ್ಷ ರೂಪಾಯಿ ಗಳನ್ನು ಬಡ್ಡಿ ಸಮೇತ ಪಾವತಿಸಲು ಆದೇಶಿಸಿತು. ಕಾನೂನು ಶುಲ್ಕ 10 ಸಾವಿರ ನೀಡಲು ಹೇಳಿತು. ಗ್ರಾಹಕರ ವೇದಿಕೆ ನೀಡಿದ ಆದೇಶ ಮೂರು ವರ್ಷಗಳಾದರೂ ಜಾರಿಯಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಬಂಧಿಸಿ ಹಾಜರು ಪಡಿಸಲು ಪೊಲೀಸ್ ಆಯುಕ್ತರಿಗೆ ಗ್ರಾಹಕರ ವೇದಿಕೆ ಆದೇಶ ನೀಡಿದೆ.
