✍️. ಶಿವಾನಿ
ಮಂಗಳೂರು: ರಾಜ್ಯದಲ್ಲಿ ಕೇಸರಿ ಭದ್ರಕೋಟೆ ಎಂದೇ ಗುರುತಾಗಿರುವ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಹಿಂದೂ ಕಾರ್ಯಕರ್ತರೇ ಸವಾಲು. ‘ಹಿಂದೂತ್ವ ಉಳಿದರೆ ದೇಶ ಉಳಿದೀತು’ ಎಂಬ ಘೋಷಣೆ ಒಂದೆಡೆಯಾದರೆ, ‘ಬಿಲ್ಲವರು ಉಳಿದರೆ ಮಾತ್ರ ಹಿಂದೂತ್ವ ಉಳಿದೀತು’ ಎಂಬ ಘೋಷಣೆ ಇನ್ನೊಂದೆಡೆ ಮಾರ್ಧನಿಸಿದೆ. ಹಾಗಾಗಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವರ ಮತಗಳೇ ದಕ್ಷಿಣಕನ್ನಡದಲ್ಲಿ ನಿರ್ಣಾಯಕ.
ಪ್ರಸಕ್ತ ಲೋಕಸಭಾ ಕ್ಷೇತ್ರದ ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಬಿಜೆಪಿಯಿಂದ ಮಾಜಿ ಸೈನಿಕ ಬೃಜೇಶ್ ಚೌಟ ಅವರಿಗೆ ಟಿಕೆಟ್ ಪ್ರಕಟಿಸಿದ್ದರೆ, ಕಾಂಗ್ರೆಸ್ ಪಕ್ಷವು ಆಸ್ತಿಕ ಸಮುದಾಯ ಗೌರವಿಸುವ ಸಾಮಾಜಿಕ ಕಾರ್ಯಕರ್ತ ಪದ್ಮರಾಜ್ ರಾಮಯ್ಯ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ. ಬಿಲ್ಲವ ಸಮುದಾಯದ ಮುಖಂಡರೂ ಆದ, ಮಂಗಳೂರು ದಸರಾದಲ್ಲಿ ಮುಂಚೂಣಿಯಲ್ಲಿರುವ ಕುದ್ರೋಳಿ ದೇವಾಲಯದ ಖಜಾಂಚಿಯೂ ಆದ ಖ್ಯಾತ ವಕೀಲ ಪದ್ಮರಾಜ್ ಅವರು ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಾಮಾಜಿಕ ರಂಗದಲ್ಲೂ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಸಾಮಾಜಿಕ ನ್ಯಾಯದ ವಿಚಾರ ಬಂದಾಗ ತಮ್ಮ ವಕೀಲ ವೃತ್ತಿಯನ್ನು ಪರಿಪೂರ್ಣವಾಗಿ ಬಳಕೆ ಮಾಡುವ ಪ್ರವೃತ್ತಿಯ ಪದ್ಮರಾಜ್ ಅವರು ಆರೆಸ್ಸೆಸ್ ಕಾರ್ಯಕರ್ತರ ಸಂಸ್ಕಾರವನ್ನೇ ಹೊಂದಿ ಸಂಘದ ಕಾರ್ಯಕರ್ತರನ್ನೇ ಸೆಳೆದಿರುವ ವ್ಯಕ್ತಿತ್ವ ಉಳ್ಳವರು. ಹಾಗಾಗಿ ಆರೆಸ್ಸೆಸ್ ಮಂದಿಯೂ ಪದ್ಮರಾಜ್ ಅವರ ಕ್ಲೈಂಟ್ಸ್ ಎಂಬುದು ಗಮನಾರ್ಹ.

ಹಿಂದೂತ್ವವೇ ಪ್ರಮುಖ ಉಸಿರು!
ಕರಾವಳಿಯಲ್ಲಿ ಹಿಂದೂತ್ವವೇ ಪ್ರಧಾನ ಅಸ್ತ್ರ. ಅದರಲ್ಲೂ ಬಿಜೆಪಿ ಗೆಲುವಿಗೆ ಈವರೆಗೂ ಕಾರಣವಾಗಿದ್ದುದು ಹಿಂದೂತ್ವದ ಬಲ. ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಬಗ್ಗೆ ಭರವಸೆ ಕಳೆದುಕೊಂಡಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಹೇಳಿಕೆ. ಅರುಣ್ ಪುತ್ತಿಲ ಅವರು ಬಿಜೆಪಿ ಸೇರಿದರೂ ಈ ಹಿಂದೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ಕಾರ್ಯಕರ್ತರು ಈಗಿನ್ನೂ ಕಮಲ ನಾಯಕರ ಬಗ್ಗೆ ಮುನಿಸಿಕೊಂಡೇ ಇದ್ದಾರೆ. ಬಿಜೆಪಿಯಲ್ಲಿ ಆಯ್ಕೆಯಾಗಿರುವ ಬಹುತೇಕ ಶಾಸಕರು ಪ್ರಖರ ಹಿಂದೂ ಕಾರ್ಯಕರ್ತರಲ್ಲ. ಹಿಂದೂ ಕಾರ್ಯಕರ್ತರ ಜೊತೆಗಿಲ್ಲ, ಅಂಥವರು ಹಿಂದೂ ಸಂಘಟನೆಗಳಲ್ಲಿ ಭಾಗಿಯಾದವರೂ ಅಲ್ಲ, ಚುನಾವನೆಯಲ್ಲಿ ಗೆಲ್ಲುವ ಕಾರಣಕ್ಕಾಗಿ ಬಿಜೆಪಿಗೆ ಬಂದವರು ಎಂದು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಕಾರ್ಯಕರ್ತರು ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯಕರತ್ತ ಬೊಟ್ಟು ಮಾಡುತ್ತಿದ್ದಾರೆ.

ಇನ್ನೊಂದೆಡೆ, ಪ್ರಕಾರ ಹಿಂದೂತ್ವವಾದಿ ಸತ್ಯಜಿತ್ ಸುರತ್ಕಲ್ ಅವರಿಗೆ ರಾಜಕಾರಣದ ಸಾಮರ್ಥ್ಯ ಇಲ್ಲವೇ. ಹಾಗಿದ್ದರೆ ಅವರಿಗೆ ಟಿಕೆಟ್ ಕೊಟ್ಟಿಲ್ಲವೇಕೆ? ಎಂಬ ಪ್ರಶ್ನೆಯೂ ಸಂಘದ ಕಟ್ಟಾಳುಗಳದ್ದು. ಬಿಲ್ಲವ ಸಮುದಾಯದವರು ಎಂಬ ಒಂದೇ ಕಾರಣಕ್ಕಾಗಿ ಒಂದು ಗುಂಪು ಸತ್ಯಜಿತ್ ಸುರತ್ಕಲ್ ಅವರಿಗೆ ಟಿಕೆಟ್ ತಪ್ಪಿಸಿ ತಮ್ಮ ಸಮುದಾಯದವರಿಗೆ ಅವಕಾಶ ಕೊಟ್ಟಿದೆ ಎಂಬುದು ಬಿಲ್ಲವ ಸಮುದಾಯದ ಮುಖಂಡರ ಆಕ್ರೋಶ.
ಮೋದಿಯೂ ಬೇಕು.. ಬಿಲ್ಲವರೂ ಬೇಕು..!
ಹಿಂದೂತ್ವವನ್ನೇ ಜೀವಾಳ ಎಂದುಕೊಂಡಿರುವ ಅನೇಕ ಕಾರ್ಯಕರ್ತರು ಬಿಲ್ಲವ ಸಮುದಾಯದ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದಾರೆ. ಕಳೆದ ಹಲವು ದಶಕಗಳಲ್ಲಿ ಸಮುದಾಯದ ಆಚರಣೆಗಳ ವಿಚಾರದಲ್ಲಷ್ಟೇ ಗಣ ಕೇಂದ್ರೀಕರಿಸಿದ್ದ ಬಿಲ್ಲವರು, ಇದೀಗ ರಾಜಕೀಯ ಶಕ್ತಿ ವಿಚಾರದಲ್ಲೂ ಚಿಂತನೆಯಲ್ಲಿ ತೊಡಗಿದ್ದಾರೆ. ‘ನಮಗೆ ಮೋದಿಯ ಆಡಳಿತ ಬೇಕು, ಹಾಗೆಯೇ ಬಿಲ್ಲವ ಸಮುದಾಯವೂ ಬೇಕು’ ಎಂದು ಅನೇಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಅಭಿಪ್ರಾಯವೇ ಈ ಬಾರಿಯ ಚುನಾವಣಾ ಫಲಿತಾಂಶವನ್ನು ನಿರ್ಧರಿಸಬಲ್ಲದು.
ಪದ್ಮರಾಜ್ ಎಂಬ ಕೌತುಕದ ವ್ಯಕ್ತಿತ್ವ..!
‘ಗುರು ಬೆಳದಿಂಗಳು’ ಎಂಬ ಸಾಮಾಜಿಕ ಸೇವಾ ಸಂಘಟನೆಯ ಮುಖ್ಯಸ್ಥರಾಗಿರುವ ವಕೀಲ ಪದ್ಮರಾಜ್ ಅವರು ಹಿಂದೂ ಸಂಘಟನೆಗಳ ರೀತಿಯಲ್ಲೇ ಸಾಮಾಜಿಕ ಕೈಂಕರ್ಯ ನಡೆಸುತ್ತಿರುವವರು. ಈ ‘ಗುರು ಬೆಳದಿಂಗಳು’ ಗುಂಪಿನಲ್ಲಿರುವ ಲಕ್ಷಾಂತರ ಕಾರ್ಯಕರ್ತರು ಆರೆಸ್ಸೆಸ್ ಸಂಘಟನೆಯಲ್ಲೂ ಸಕ್ರಿಯರು. ಬಿಜೆಪಿ ನಾಯಕರಿಂದ ಮಾಡಲಾಗದ ಕೆಲಸವನ್ನು ಮಾಡಿಕೊಡುವುದರಿಂದಾಗಿ ಪದ್ಮರಾಜ್ ರಾಮಯ್ಯ ಅವರು ಹಿಂದೂ ಕಾರ್ಯಕರ್ತರಿಗೂ ಪ್ರೀಯರೆನಿಸಿರುವುದು. ಅದರಲ್ಲೂ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಂತ್ರಸ್ತರಾದ ಬಿಲ್ಲವ ಸಮುದಾಯದ ಬಡಪಾಯಿ ಆಟೋ ಚಾಲಕನಿಗೆ ಸಮುದಾಯದ ಆರ್ಥಿಕ ಶಕ್ತಿ ಕ್ರೂಢೀಕರಿಸಿ ಮನೆ ನಿರ್ಮಿಸಿಕೊಟ್ಟ ವೈಖರಿ ಬಗ್ಗೆಯೂ ಹಿಂದೂ ಕಾರ್ಯಕರ್ತರು ಫಿದಾ ಆಗಿದ್ದಾರೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೆರವು ನೀಡಿರುವ ವಿಚಾರದಲ್ಲೂ ಬಿಜೆಪಿ ಕಾರ್ಯಕರ್ತರು ಪದ್ಮರಾಜ್ ಅವರನ್ನು ಪ್ರಶಂಶಿಸಿದೆ.

ಕಾಂಗ್ರೇಸ್ ಪಕ್ಷದಲ್ಲಿದ್ದರೂ ಹಿಂದೂತ್ವವಾದಿಯಂತಿರುವ ಪದ್ಮರಾಜ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಆಲಿಂಘಿಸಿಕೊಳ್ಳುತ್ತಿರುವುದು ಕರಾವಳಿ ರಣಾಂಗಣದ ವಿಶೇಷ. ಈ ಬೆಳವಣಿಗೆಯೇ ಬಿಜೆಪಿ ನಾಯಕರಿಗೆ ಸವಾಲಾಗಿದ್ದು, ಬಿಲ್ಲವರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತಿನಲ್ಲಿ ನಾಯಕರು ತೊಡಗಿದ್ದಾರೆ.
