ಮುನೀರ್ ಕಾಟಿಪಳ್ಳ ಸಂಚಾಲಕರು,ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ,
ಹೆದ್ದಾರಿ ಮದ್ಯೆ ಅಪಾಯಕಾರಿ ಸ್ಥಿತಿಯಲ್ಲಿ ಇರುವ ನಿರುಪಯೋಗಿ ಸುರತ್ಕಲ್ ಟೋಲ್ ಬೂತ್ ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳದಿರುವುದು, ಸುರತ್ಕಲ್ ಟೋಲ್ ಬೂತ್ ನಿಂದ ಬಿ ಸಿ ರೋಡ್ ವರಗೆ ಮಳೆಗಾಲದ ಆರಂಭದಲ್ಲೇ ಹೆದ್ದಾರಿ ಪೂರ್ತಿ ಬಿದ್ದಿರುವ ಮಾರಣಾಂತಿಕ ಗುಂಡಿಗಳನ್ನು ಮುಚ್ಚಲು ಮುಂದಾಗದಿರುವುದನ್ನು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ನಿರುಪಯೋಗಿ ಟೋಲ್ ಬೂತ್ ತೆರವು, ಹೆದ್ದಾರಿ ಗುಂಡಿಗಳನ್ನು ಮುಚ್ಚಿಸಲು ಮುಂದಾಗದಿದ್ದಲ್ಲಿ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಸುರತ್ಕಲ್ ಟೋಲ್ ಬೂತ್ ನಲ್ಲಿ ಟೋಲ್ ಸಂಗ್ರಹ ರದ್ದುಗೊಂಡು ಎಂಟು ತಿಂಗಳಾದರೂ ಅಲ್ಲಿರುವ ನಿರುಪಯೋಗಿ ಟೋಲ್ ಬೂತ್ ಇನ್ನೂ ತೆರವುಗೊಂಡಿಲ್ಲ. ಉಪಯೋಗವಿಲ್ಲದೆ ಪಾಳಬಿದ್ದಿರುವ ನಿರುಪಯೋಗಿ ಟೋಲ್ ಬೂತ್ ಈಗ ಜೀರ್ಣಾವಸ್ಥೆಗೆ ತಲುಪಿದ್ದು ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಬೂತ್ ನ ಛಾವಣಿ, ಬೋರ್ಡ್ ಗಳು ಕಳಚಿ ಬೀಳುವ ರೀತಿ ಅಪಾಯಕಾರಿಯಾಗಿ ನೇತಾಡುತ್ತಿವೆ. ರಾತ್ರಿ ಕಾಲದ ಪ್ರಯಾಣವಂತೂ ಟೋಲ್ ಬೂತ್ ನ ಪರಿಸರ ಅಪಘಾತಕ್ಕೆ ಆಹ್ವಾನಿಸುವಂತಿದೆ. ಟೋಲ್ ಸಂಗ್ರಹ ರದ್ದುಗೊಂಡ ತಕ್ಷಣವೇ ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸಬೇಕಿದ್ದ ಹೆದ್ದಾರಿ ಪ್ರಾಧಿಕಾರ ಈ ಕುರಿತು ಗಂಭೀರ ನಿರ್ಲಕ್ಷ್ಯ ವಹಿಸಿರುವುದು ಅಕ್ಷಮ್ಯ.

ಹೆದ್ದಾರಿಗಳನ್ನು ಮಳೆಗಾಲಕ್ಕೆ ಮುಂಚಿತವಾಗಿ ಸರಿಯಾದ ನಿರ್ವಹಣೆ ಮಾಡದಿರುವುದರಿಂದ ಮಳೆಗಾಲದ ಆರಂಭದಲ್ಲೇ ಸುರತ್ಕಲ್ ಟೋಲ್ ಬೂತ್ ಬಳಿಯಿಂದ ಬಿ ಸಿ ರೋಡ್ ಉದ್ದಕ್ಕೂ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದ ಮಾರಣಾಂತಿಕ ಗುಂಡಿಗಳು ಉಂಟಾಗಿವೆ. ಈ ಅಪಾಯಕಾರಿ ಗುಂಡಿಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ದ್ವಿಚಕ್ರ ಸವಾರರಂತೂ ಪ್ರಾಣವನ್ನು ಅಂಗೈನಲ್ಲಿ ಹಿಡಿದು ಸಾಗುವಂತಾಗಿದೆ. ಮಳೆ ಸುರಿಯುವ ಸಂದರ್ಭ ಆಳವಾದ ಈ ಗುಂಡಿಗಳು ಗೋಚರಿಸದೆ ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಒಟ್ಟಾರೆ ಈ ಹೆದ್ದಾರಿಯಲ್ಲಿ ಪ್ರಯಾಣ ಮೃತ್ಯುವಿನೊಂದಿಗೆ ಸರಸ ಎಂಬಂತಾಗಿದೆ. ಕೂಳೂರು ನೂತನ ಸೇತುವೆ ನಿರ್ಮಾಣ ಮೂರು ವರ್ಷ ದಾಟಿದರೂ ಪೂರ್ಣಗೊಳ್ಳದೆ ಕಾಮಗಾರಿ ಪೂರ್ತಿಯಾಗಿ ಕುಂಠಿತಗೊಂಡಿದೆ. ಹೋರಾಟ ನಡೆಸಿ ಸುರತ್ಕಲ್ ಟೋಲ್ ಬೂತ್ ತೆರವು ಗೊಳಿಸಿದ ಜನತೆಯೊಂದಿಗೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆದುಕೊಳ್ಳುತ್ತಿದೆ.
ಸುರತ್ಕಲ್ ನಿರುಪಯೋಗಿ ಟೋಲ್ ಬೂತ್, ಹೆದ್ದಾರಿ ಗುಂಡಿಗಳ ಸಮಸ್ಯೆ ಅತ್ಯಂತ ಗಂಭೀರ ಸ್ಥಿತಿಗೆ ತಲುಪಿದ್ದರೂ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಈ ಕುರಿತು ಚಕಾರ ಎತ್ತದಿರುವುದು ಅವರ ಬೇಜವಾಬ್ದಾರಿತನ, ಜನರ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸದ ನಿರ್ಲಕ್ಷ್ಯ ವನ್ನು ಎತ್ತಿ ತೋರಿಸುತ್ತದೆ, ಇದು ಖೇದಕರ ಎಂದು ಹೇಳಿರುವ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ತಕ್ಷಣವೇ ನಿರುಪಯೋಗಿ ಟೋಲ್ ಬೂತ್ ತೆರವು, ಹೆದ್ದಾರಿ ಗುಂಡಿಗಳನ್ನು ಮುಚ್ಚಲು ಪ್ರಾಧಿಕಾರ ಮುಂದಾಗದಿದ್ದಲ್ಲಿ ಜನಪರ ಸಂಘಟನೆಗಳನ್ನು ಜೊತೆ ಸೇರಿಸಿ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.