ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಮೂರು ಶವಗಳ ಪೈಕಿ ಒಂದು ಕಾರ್ಕಳದ ಶಿರ್ಲಾಲು ಮೂಲದ ಯುವಕ, ಬೆಳ್ತಂಗಡಿಯ ಸಾಹುಲ್(26) ಇಸಾಕ್ (25) ಹಾಗೂ ಶಿರ್ಲಾಲಿನ ಇಮ್ತಿಯಾಝ್ (34) ಕಾರಿನೊಳಗೆ ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತುಮಕೂರಿನ ಕೋರ ಹೋಬಳಿಯ ಕುಚ್ಚಂಗಿ ಕೆರೆ ಬಳಿ ಕಾರು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕಾರಿನ ಮಾಹಿತಿ ದೊರೆತು ತನಿಖೆ ನಡೆಸಿದಾಗ ಬೆಳ್ತಂಗಡಿಯ ರಫೀಕ್ ಎಂಬವರಿಗೆ ಸೇರಿದ್ದಾಗಿದ್ದು, ಕಾರಿನ ಢಿಕ್ಕಿಯಲ್ಲಿ ಎರಡು ಮೃತದೇಹಗಳು ಹಾಗೂ ಹಿಂಬದಿಯ ಸೀಟಿನಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಮೂವರನ್ನು ಕೊಲೆಗೈದು ಕಾರಿನೊಳಗೆ ಹಾಕಿ ಕಾರಿಗೆ ಬೆಂಕಿ ಕೊಟ್ಟಿರಬಹುದೆಂದು ಶಂಕಿಸಲಾಗಿದೆ.

ಮೇಲ್ನೋಟಕ್ಕೆ ಅಪಹರಿಸಿ ಕೊಲೆ ಮಾಡಿ ಕಾರು ಸಹಿತ ಸುಟ್ಟು ಹಾಕಿರುವಂತೆ ಕಂಡುಬಂದಿದೆ.ಆಟೋ ಚಾಲಕರಾಗಿರುವ ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್ ಕುಂಟಿನಿ ನಿವಾಸಿ ಸಾಹುಲ್ ಹಮೀದ್ (45), ವಿದೇಶದಿಂದ ಬಂದು ಮನೆಯಲ್ಲೇ ಇದ್ದ, ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್ ಕುಂಟಿನಿ ನಿವಾಸಿ ಇಸಾಕ್ (50), ಬೆಳ್ತಂಗಡಿಯಲ್ಲಿ ಫುಟ್ಪಾತ್ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ, ಶಿರ್ಲಾಲು ಗ್ರಾಮದ ನಿವಾಸಿ ಸಿದ್ದಿಕ್ (35) ಅವರು ಕಾರಿನಲ್ಲಿ ವ್ಯವಹಾರಕ್ಕೆಂದು ತುಮಕೂರಿಗೆ ಹೋಗಿದ್ದು, ಮೃತಪಟ್ಟವರು ಎಂಬುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಸುಮಾರು 12 ದಿನಗಳ ಹಿಂದೆ ಇಸಾಕ್ ಅವರು ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ರಫೀಕ್ ಅವರ ಕೆ.ಎ.43 N1571 ನೋಂದಣಿಯ ಕಾರನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದು ದಿನಾಂಕ 20-03-2024 ರಂದು ಇಸಾಕ್ ಅವರು ಕಾರು ಮಾಲಕ ರಫೀಕ್ ಅವರಿಗೆ ಕರೆ ಮಾಡಿ ಇನ್ನೆರಡು ದಿನಗಳಲ್ಲಿ ಬರುತ್ತೇವೆ ಎಂದು ತಿಳಿಸಿದ್ದರೆಂದು ಮಾಹಿತಿ ತಿಳಿದು ಬಂದಿದೆ. ಅನಂತರ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ಕಾರಿನಲ್ಲಿ ಒಟ್ಟು ಐವರು ತೆರಳಿದ್ದರು. ಉಳಿದ ಇಬ್ಬರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ವ್ಯವಹಾರದ ತಕರಾರಿನ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂಬ ಅನುಮಾನವಿದೆ. ಹತ್ತು ದಿನಗಳ ಹಿಂದೆಯೇ ಅವರು ಬೆಳ್ತಂಗಡಿಯಿಂದ ಹೋಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು ಯಾವ ವ್ಯವಹಾರ ನಡೆಸುತ್ತಿದ್ದರು, ಈ ಮೊದಲು ಅಪರಾಧ ಕೃತ್ಯಗಳಲ್ಲಿ ಶಾಮಿಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಅವರೊಂದಿಗಿದ್ದು ನಾಪತ್ತೆಯಾಗಿರುವ ಇಬ್ಬರು ಸಿಕ್ಕಿದರೆ ಕೊಲೆಯ ಸುಳಿವು ಸಿಗಬಹುದು ಎನ್ನಲಾಗಿದೆ.
