ಉರಿಬಿಸಿಲಲ್ಲೂ ನಡುಗುತ್ತಿರುವ ಬಿಇಓ-ಸಿಆರ್‌ಪಿಗಳು; ಕಾನೂನು ಉರುಳಿಗೆ ಸಿಲುಕುವರಾರು .?
ವರದಿ: ಎಂ.ಎ.ಸಲಾವುದ್ದೀನ್
ಮಲೆನಾಡಿನ ಮೂಡಿಗೆರೆಯಲ್ಲಿ ಬಾರಿ ಸದ್ದು ಮಾಡಿದ್ದ ಸರ್ಕಾರಿ ಶಾಲೆಗಳಲ್ಲಿ ಯೂಕೆಸಿ ಶೂ ಮತ್ತು ಸಾಕ್ಸ್ ಹಗರಣ, ಈ ಪ್ರಕರಣದ ಬಗ್ಗೆ 13 ನವೆಂಬರ್ 2023 ರಲ್ಲಿ ದೂರು ದಾಖಲಾಗಿದ್ದು. ಈಗ ರಾಜ್ಯದ ಉಪ-ಲೋಕಾಯುಕ್ತರು ಲೋಕಾಯುಕ್ತ ಎಸ್‌ಪಿ ಯಿಂದ ತನಿಖೆಗೆ ಆದೇಶ ಹೊರಡಿಸಿರುವ ಬಗ್ಗೆ ವರದಿಯಾಗಿದೆ.

ಶಾಲಾ ಬಡ ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಹಗರಣ ಲೋಕಾಯುಕ್ತದಿಂದ ತನಿಖೆಗೆ ಕ್ಷಣಗಣನೆ ಆರಂಭವಾಗಿರುವುದರಿಂದ ಉರಿಬಿಸಿಲಲ್ಲೂ ನಡುಗುತ್ತಿರುವ ಬಿಇಓ-ಸಿಆರ್‌ಪಿಗಳು. ಕಾನೂನು ಉರುಳಿಗೆ ಸಿಲುಕುವರಾರು .? ಎಂದು ಬಹಳ ಕುತೂಹಲದಿಂದ ಸಾರ್ವಜನಿಕರ ಕಣ್ಣು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯತ್ತ ದೃಷ್ಠಿಬೀರಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್, ಸೇರಿದಂತೆ 15 ಮಂದಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಭಾಗಿಯಾಗಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದು, ಪ್ರಕರಣದಲ್ಲಿ ಅವರ ಹೆಸರುಗಳು ಸಹಾ ನಮೂದಾದ ಕಾರಣ ಈ ಪ್ರಕರಣ ಬಾರಿ ತಿರುವನ್ನು ಪಡೆದುಕೊಳ್ಳಲಿದೆ.
ಶೂ ಮತ್ತು ಸಾಕ್ಸ್ ಅನ್ನು ಸ್ಥಳಿಯವಾಗಿ ಶಾಲಾಭಿವೃದ್ದಿ ಸಮಿತಿಯವರು ಖರೀದಿಸುವುದು ಸರ್ಕಾರದ ನಿಯಮದಂತೆ ಕಂಪೆನಿಯ ಶೂ ಅಂದರೇ ವಿಕೆಸಿ, ಬಾಟ, ಪ್ಯಾರಗಾನ್, ಲಿಬರ್ಟಿ ಇಂತಹ ಹೆಸರಾಂತ ಕಂಪೆನಿಯಿಂದ ಅಂದರೆ ಸರ್ಕಾರದಿಂದ ಮಾನ್ಯತೆ ಪಡೆದ ಉತ್ತಮ ಗುಣಮಟ್ಟದ ಸರ್ಕಾರದ ಬ್ರಾಂಡ್ ಇರುವಂತಹ ಶೂ ಗಳನ್ನು ಅದಕ್ಕನುಗುಣವಾಗಿ ಉತ್ತಮ ದರ್ಜೆಯ ಸಾಕ್ಸ್ ಗಳನ್ನು ನೀಡಬೇಕೆಂಬ ನಿಯಮವಿದೆ. ಆದರೇ ಕೆಲವು ಜನಪ್ರತಿನಿದಿಗಳ ಸಹಯೋಗದೊಂದಿಗೆ ಈ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಪ್ರಭಾವಿ ಸಚಿವರ ಆಪ್ತರು ಎನ್ನಲಾದ ಗದಗ ಮೂಲದ ಸುನೀಲ್ ಎಂಬ ವ್ಯಕ್ತಿ 450 ಕಿಲೋಮಿಟರ್ ದೂರದಿಂದ ಬಂದು ಶಿವ ಗಾರ್ಮೆಂಟ್ಸ್ ಲಕ್ಮೀಶ್ವರ, ಶಿವ ಗಾರ್ಮೆಂಟ್ಸ್ ಗದಗ ಎಂಬ ಬಟ್ಟೆ ಅಂಗಡಿಗಳ ನಕಲಿ ಬಿಲ್ಲುಗಳನ್ನು ಮೂಡಿಗೆರೆ ತಾಲ್ಲೂಕಿನ 200 ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ನೀಡಿ ಬಹು ದೊಡ್ಡ ಹಗರಣ ಮಾಡಿದ್ದು, ಕಂಪೆನಿಯೇ ಇಲ್ಲದ ಕಳಪೆ ಗುಣಮಟ್ಟದ ಶೂ ಅನ್ನು ತಯಾರಿಸಿ ಅದಕ್ಕೆ ವಿಕೆಸಿ ಬದಲು ಯೂಕೆಸಿ ಹೆಸರು ಬದಲಾಯಿಸಿ ನಕಲಿ ಶೂ ಮತ್ತು ಸಾಕ್ಸ್ ಗಳನ್ನು ವಿತರಿಸಲು ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಮತ್ತು ಸಿಆರ್‌ಪಿಗಳಾದ ಕಸಬಾದ ಸವಿತಾ, ಹೆಸಗಲ್ ನ ಸೋಮಶೇಖರಯ್ಯ, ಬಿಳ್ಳೂರಿನ ಗಣೇಶ, ಚಿನ್ನಿಗದ ಸುನೀಲ್ ಹೆಚ್.ಸಿ., ಗೋಣಿಬೀಡಿನ ಶ್ರೀಮತಿ ಮಧು, ಬೆಟ್ಟದ ಮನೆಯ ಪಾಲಕ್ಷಮ್ಮ, ಗೌಡಹಳ್ಳಿಯ ಸಾಹಿರಾಬಾನು, ಪಲ್ಗುಣಿಯ ಶೋಭ, ನಿಡುವಾಳೆಯ ವೆಂಕಟೇಶಮೂರ್ತಿ, ಜಾವಳಿಯ ನಾಗರಾಜ್, ಹಿರೇಬೈಲಿನ ರಂಗನಾಥ್, ಉರ್ದು ಶಾಲೆಯ ಸಮಿನಾ ತರನಂ, ಕಳಸದ ಸಾವಿತ್ರಿ ಸೇರಿದಂತೆ ಇನ್ನು ಹಲವು ಸಿಆರ್‌ಪಿಗಳ ವಿರುದ್ದ 2023 ರ ನವೆಂಬರ್ 13 ರಂದು ಸಾಮಾಜಿಕ ಕಾರ್ಯಕರ್ತ ಎಂ.ಎ.ಸಲಾವುದ್ದೀನ್ ಎಂಬವರು ಮೈಸೂರು ವಿಭಾಗದ ಉಪ-ಲೋಕಯುಕ್ತರಿಗೆ ದೂರು ಸಂಖ್ಯೆ 11711/2023 ರಂತೆ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದಡಿಯಲ್ಲಿ ದೂರು ದಾಖಲಿಸಿದ್ದರು.

ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿತ 15 ಮಂದಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ವಿರುದ್ದ ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ ರವರಿಗೆ ಸಂಪೂರ್ಣ ತನಿಖೆ ಮಾಡಿ ವರದಿ 2024 ರ ಏಪ್ರಿಲ್ 30 ರೊಳಗೆ ವರದಿ ಸಲ್ಲಿಸುವಂತೆ ಉಪ-ಲೋಕಾಯುಕ್ತರವರು ಆದೇಶ ನೀಡಿರುತ್ತಾರೆ. ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿರುವ ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸ್ ತಂಡದಿಂದ ತನಿಖೆ ಮಾಡಲು ಆದೇಶಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಡ ವಿದ್ಯಾರ್ಥಿಗಳ ಹೆಸರಿನಲ್ಲಿ ಶೂ ಮತ್ತು ಸಾಕ್ಸ್ ನಲ್ಲಿ ಹಗರಣಲ್ಲಿ ಬಾಗಿಯಾಗಿರುವವರಿಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಭ್ರಷ್ಟರಿಗೂ ಕಾನೂನು ರೀತ್ಯ ಕ್ರಮ ಜರುಗಿಸಿದಲ್ಲಿ ಮುಂದೇ ಇಂತಹ ಹಗರಣಗಳು ಮರುಕಳಿಸದಂತೆ ಮೂಗುದಾರ ಬೀಳಬಹುದು.
