ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಹಾವಳಿಯಿಂದ ಪ್ರಕೃತಿ ಜತೆಗೆ ಗಣಿಗಾರಿಕೆಯ ಅಕ್ಕಪಕ್ಕದ ಗ್ರಾಮಗಳಲ್ಲಿ ಭಾರಿ ಅನಾಹುತಗಳು ಸಂಭವಿಸುತ್ತಿರುವುದರಿಂದ ಜನ, ಜಾನುವಾರುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಮೀತಿ ಮೀರಿ ನಡೆಯುತ್ತಿರುವ ಗಣಿಗಾರಿಕೆಯಿಂದ ದಿನ ಕಳೆದಂತೆ ಪರಿಸರದಲ್ಲಿನ ಪ್ರಾಣಿ ಪಕ್ಷಿಗಳು ಮಾತ್ರವಲ್ಲದೆ ಸುಂದರವಾದ ಪ್ರಕೃತಿ ಕೂಡ ನಶಿಸಿ ಹೋಗುತ್ತಿದೆ.! ಬಲಾಢ್ಯರ ಲಾಭಿಯಿಂದ ನಡೆಯುತ್ತಿರುವ ಗಣಿಗಾರಿಕೆಗೆ ಯಾವುದೇ ತರಹದ ಪರವಾನಿಗೆ ಪಡೆದಿರುವುದಿಲ್ಲ. ತನ್ನ ಸ್ವಂತ ಜಾಗದಲ್ಲೇ ಕೃಷಿಗಾಗಿ ಗಣಿಗಾರಿಕೆ ಮಾಡುವುದು ಎಂದು ನಂಬಿಸುವ ಗಣಿಧಣಿಗಳು ಸರಕಾರಿ ಜಾಗಗಳನ್ನು ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಅವರ ಎಂಜಲಿಗೆ ಕೈ ಚಾಚಿ ಕುರುಡರಂತೆ ವರ್ತಿಸುತ್ತಿದ್ದಾರೆ.
ಈ ಅಕ್ರಮದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೌನ ಮಾತ್ರ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಪ್ರಕೃತಿ ಇದ್ದರಷ್ಟೇ ಬದುಕು ಇಲ್ಲವಾದರೆ ಪರಿಣಾಮ ವಿನಾಶ ಮಾತ್ರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ ಹೀಗೆ ಪ್ರಕೃತಿ ನಾಶ ಮಾಡುತ್ತಿರುವುದನ್ನು ಯಾರು ಏಕೆ ಪ್ರಶ್ನಿಸುತ್ತಿಲ್ಲ.!?
ಮಂಗಳೂರು ತಾಲೂಕಿನ ಮಲ್ಲೂರು, ಮಲ್ಲೂರು ಪದವು, ಕುಟಿನ್ನೊಪದವು, ಬೆಂಜನಪದವು, ಮಲ್ಲೂರು ಗ್ರಾಮದ ವ್ಯಾಪ್ತಿಯಲ್ಲಿ ಕೆಂಪುಕಲ್ಲಿನ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ, ಮಲ್ಲೂರು ಗ್ರಾಮ ಪಂಚಾಯತ್ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿ ಮಾಫಿಯಾದ ದಂಧೆಕೋರರೊಂದಿಗೆ ಕೈ ಜೋಡಿಸಿದ್ದಾರೆಯೇ ಅನ್ನುವ ಸಂಶಯವಿದೆ.
ಬೆಂಜನಪದವು, ಮಲ್ಲೂರು ಗ್ರಾಮಗಳಲ್ಲಿ ನಡೆಯುವ ಅಕ್ರಮ ಕೆಂಪು ಕಲ್ಲಿನ ಮಾಫಿಯಾದಲ್ಲಿ ಭಾರೀ ಕುಳಗಳು, ಪ್ರತಿಷ್ಠಿತರು, ರಾಜಕಾರಣಿಗಳು ಶಾಮೀಲಾಗಿದ್ದಾರೆ.ಗಣಿಗಾರಿಕೆಯಲ್ಲಿ ಬಳಸುತ್ತಿರುವ ಯಂತ್ರಗಳಿಂದ ನಿರಂತರ ಶಬ್ದ ಮಾಲಿನ್ಯ, ಧೂಳಿನಿಂದ ಪರಿಸರ ಮಾಲಿನ್ಯ, ಸಮೀಪದ ಸುತ್ತಮುತ್ತಲಿನ ನಿವಾಸಿಗಳಲ್ಲಿ, ಮುಖ್ಯವಾಗಿ ಮಕ್ಕಳಿಗೆ, ವಯೋವೃದ್ಧರಿಗೆ, ಗರ್ಭಿಣಿ ಮಹಿಳೆಯರಿಗೆ ಶ್ವಾಸಕೋಶ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಮಾಮೂಲಾಗಿದೆ. ಗ್ರಾಮಸ್ಥರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸದ್ರಿ ಗಣಿಗಾರಿಕೆಗಳನ್ನು ತಕ್ಷಣ ನಿಲ್ಲಿಸುವಂತೆ ಸಾರ್ವಜನಿಕರು ಸಂಬಂಧ ಪಟ್ಟವರಿಗೆ ಮನವಿ ಮಾಡಿರುತ್ತಾರೆ.

ಇನ್ನು ಮಳೆಗಾಲ ಆರಂಭವಾದರೆ ಈ ಅಕ್ರಮ ಕಲ್ಲಿನ ಕೊರೆಗಳಲ್ಲಿ ನೀರು ತುಂಬಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ. ಮಾತ್ರವಲ್ಲದೆ ಕೊರೆಗೆ ಯಾವುದೇ ತಡೆ ಬೇಲಿ ಇಲ್ಲದಿರುವುದರಿಂದ ಸಣ್ಣ ಪುಟ್ಟ ಮಕ್ಕಳು, ಜಾನುವಾರುಗಳು ಕಲ್ಲಿನ ಕೊರೆಗೆ ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಸದ್ರಿ ಕಲ್ಲಿನ ಕೋರೆಗೆ ಯಾವುದೇ ರೀತಿಯ ಸುರಕ್ಷತೆಯ ಕ್ರಮ ಅಳವಡಿಸದೆ, ಬೇಜಾವಾಬ್ದಾರಿಯಿಂದ ಕೂಡಿರುತ್ತದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶ ಕಲ್ಲಿನ ಕೋರೆಯೊಂದರಲ್ಲಿ ಮಳೆಗಾಲದ ಸಮಯದಲ್ಲಿ ಇದೇ ಪ್ರದೇಶದ ಮಕ್ಕಳು ಇಂತಹದ್ದೇ ಕಲ್ಲಿನ ಕೋರೆಯಲ್ಲಿ ಮುಳುಗಿ ಜೀವ ಕಳಕೊಂಡಿರುವುದನ್ನು ಇನ್ನೂ ಮರೆತಿಲ್ಲ ಇಲ್ಲಿನ ನಾಗರಿಕರು. ಗಾಢ ನಿದ್ರೆಯಲ್ಲಿರುವ ಅಧಿಕಾರಿಗಳು ಇನ್ನಾದರೂ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.
