ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಡಪದವು ತಿಪ್ಪಬೆಟ್ಟುವ ಯುವರಾಜ್ ಆಚಾರ್ಯ ಎಂಬವರ ಮನೆಯ ಬೀಗ ಮುರಿದು ಗೃಹೋಪಯೋಗಿ ವಸ್ತುಗಳನ್ನು ಕಳವುಗೈದಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಬಜ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತರನ್ನು ಬಡಗ ಎಡಪದವು ನಿವಾಸಿ ರವಿ ಶೆಟ್ಟಿ, ಮೂಡುಬಿದಿರೆ ತೋಡಾರು ಗ್ರಾಮದ ಶಿವಪ್ರಸಾದ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಕಳವುಗೈದ ಗೃಹಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇದರ ಒಟ್ಟು ಮೌಲ್ಯ ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ, ಕಾರ್ಯಾಚರಣೆ ನಡೆಸಿದ ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕರಾದ ನಂದೀಶ್ವರ ಬಿ ಕುಂಬಾರ, ಪಿಎಸ್ಐಗಳಾದ ಗುರಪ್ಪ ಕಾಂತಿ, ರೇವಣಸಿದ್ದಪ್ಪ, ರವಿ ಎನ್.ಎನ್., ಶೋಭಾ ಆರ್, ಎಎಸ್ಐ ರಾಮ ಪೂಜಾರಿ ಸಿಬ್ಬಂದಿಗಳಾದ ಸುಜನ್, ಪುರುಷೋತ್ತಮ, ರಶೀದ್, ದೇವಪ್ಪ ಹೊಸಮನಿ, ಬಸವರಾಜ ಪಾಟೀಲ್, ಪ್ರಕಾಶ್, ಚಿದಾನಂದ ಮೊದಲಾದವರು ಪತ್ತೆಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
