ಉಡುಪಿ ಲೋಕಸಭೆ: ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರೆ ನಿರ್ಣಾಯಕ.. ಬಿಜೆಪಿ ‘ಕೋಟೆ’ ಗೆ ಕನ್ನ ಹಾಕುತ್ತರಾ ಹೆಗ್ಡೆ..?

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕದನ ರಂಗೇರುತ್ತಿದೆ. ಎರಡೂ ಪಕ್ಷಕ್ಕೂ ಗೆಲ್ಲುವ ಸಮಾನ ಅವಕಾಶ ಇರುವ ಕ್ಷೇತ್ರವಿದ್ದರೆ ಅದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಈ ಕ್ಷೇತ್ರದ ವ್ಯಾಫ್ತಿಯ ಚಿಕ್ಕಮಗಳೂರಿನಲ್ಲಿ ನಾಲ್ಕರಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರಿದ್ದರೆ, ಉಡುಪಿಯ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಗೆಲ್ಲಲು ಎರಡು ಪಕ್ಷಕ್ಕೂ ಸಮಾನ ಅವಕಾಶವಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಕಾಂಗ್ರೆಸ್ ಮಧ್ಯದಲ್ಲಿ ನಡೆಯುವ ಚುನಾವಣಾ ತೀರ್ಮಾನಗಳು ಪಕ್ಕದ ಮಂಗಳೂರು ಲೋಕಸಭಾ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇರಲಿದೆ. ಇದಕ್ಕೂ ಕಾರಣವಿದೆ. ಈ ಬಾರಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಾಜಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಈ ಬಾರಿಯ ಅಭ್ಯರ್ಥಿಯಾಗಿದ್ದಾರೆ. ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನು ಕಾಂಗ್ರೆಸ್ ಬಿಜೆಪಿಯಿಂದ ಕಾಂಗ್ರೆಸ್ ಗೆ ಜಿಗಿದ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದೆ. ಇಲ್ಲಿನ ರಣಾಂಗಣ ಬಂಟ ವರ್ಸಸ್ ಬಿಲ್ಲವ ಎಂಬಂತಾದರೆ ಅದರ ನೇರ ಪರಿಣಾಮ ಬೀರುವುದು ಪಕ್ಕದ ಮಂಗಳೂರು ಕ್ಷೇತ್ರಕ್ಕೆ. ಅಲ್ಲಿ ಬಹುಸಂಖ್ಯಾತ ಬಿಲ್ಲವರು ಬಿಜೆಪಿಗೆ ಕೈ ಕೊಡುವ ಸಾಧ್ಯತೆ ಇರಲಿದೆ. ಇದೇ ಕಾರಣಕ್ಕೆ ಉಡುಪಿಯಲ್ಲಿ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಧಿಪತ್ಯದ ಕ್ಷೇತ್ರ ಅನ್ನುವ ಹೆಗ್ಗಳಿಕೆಗೆ ಪಾತ್ರವಾದ ಕ್ಷೇತ್ರ. ಎಂಭತ್ತರ ದಶಕದ ನಂತರ ಈ ಕ್ಷೇತ್ರದ ಮೇಲೋಂದು ಕಣ್ಣು ಹಾಯಿಸಿದಾಗ ಆಸ್ಕರ್ ಫೆರ್ನಾಂಡಿಸ್ ಸತತ ಐದು ಬಾರಿ ಗೆದ್ದು ಬೀಗಿದವರು. 1998 ರಲ್ಲಿ ಬಿಜೆಪಿಯ ಐಎಂ ಜಯರಾಮ ಶೆಟ್ಟಿ ಇಲ್ಲಿ ಗೆಲುವು ಪಡೆದಿದ್ದರು. ಆದಾದ ನಂತರ 1999 ರಲ್ಲಿ ಮತ್ತೆ ಈ ಕ್ಷೇತ್ರ ಕಾಂಗ್ರೆಸ್ ವಶವಾಯಿತು. ಜೂನಿಯರ್ ರಾಜೀವಗಾಂಧಿ ಇಮೇಜಿನ ವಿನಯ್ ಕುಮಾರ್ ಸೊರಕೆ ಗೆಲುವು ಪಡೆದಿದ್ದರು. 2004 ರಲ್ಲಿ ಮತ್ತೆ ಬಿಜೆಪಿ ವಶ. ಮನೋರಮಾ ಮಧ್ವರಾಜ್ ಗೆಲುವು ಕಂಡರು. 2009 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆಯಿತು. ಮಂಗಳೂರು ಸಂಸದರಾಗಿದ್ದ ಸದಾನಂದ ಗೌಡ ರನ್ನು ಉಡುಪಿಗೆ ಕರೆತರಲಾಯಿತು. ಸ್ಮೈಲ್ ಗೌಡ್ರು ಗೆಲುವು ಕಂಡರು. ಜಯಪ್ರಕಾಶ್ ಹೆಗ್ಡೆ ಸೋತರು. ಅದು ಕೂಡ 27,000 ಚಿಲ್ಲರೆ ಮತಗಳಿಂದ. ಆದರೆ 2012 ರಲ್ಲಿ ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿ ಆಗುವ ಸುಯೋಗ ಲಭಿಸಿತು. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನೀಲ್ ಕುಮಾರ್ ರನ್ನು ಮಣಿಸಿ ಜಯಪ್ರಕಾಶ್ ಹೆಗ್ಡೆ ಸಂಸದರಾದರು. 2014 ರಲ್ಲಿ ಮತ್ತೆ ಕ್ಷೇತ್ರ ಬಿಜೆಪಿ ಪಾಲು. ಯಡಿಯೂರಪ್ಪ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಬಿಜೆಪಿ ಯಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಮೋದಿ ನಾಮ ಬಲದ ಮೂಲಕ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಪಡೆದುಕೊಂಡರು. ಶೋಭಾ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು ಜಯಪ್ರಕಾಶ್ ಹೆಗ್ಡೆ. ಸೋಲು-ಗೆಲುವಿನ ರುಚಿ ಹೊಂದಿದ್ದ ಜಯಪ್ರಕಾಶ್ ಹೆಗ್ಡೆ 2019 ರ ಚುನಾವಣೆ ಸಂದರ್ಭ ಬಿಜೆಪಿ ಪಾಳಯಕ್ಕೆ ಧುಮುಕಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ 3.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ವಿಶೇಷ ಅಂದರೆ ಶೋಭಾ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯೇ ಇರಲಿಲ್ಲ. ಪ್ರಮೋದ್ ಮಧ್ವರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಶೋಭಾ ಮತ್ತೆ ಉಡುಪಿಯಿಂದ ಸ್ಪರ್ಧೆ ಮಾಡುವುದಕ್ಕೆ ಬಿಜೆಪಿ ಪಕ್ಷದಿಂದಲೇ ತೀವ್ರ ವಿರೋಧವಿತ್ತು. ಈ ಕಾರಣದಿಂದ ಶೋಭಾ ಬೆಂಗಳೂರು ಉತ್ತರಕ್ಕೆ ಶಿಫ್ಟಾದರು. ದತ್ತ ಜಯಂತಿ ಹೋರಾಟದ ಮೂಲಕ ಪ್ರವರ್ಧಮಾನಕ್ಕೆ ಬಂದಿದ್ದ ಸಿ.ಟಿ ರವಿ ಪ್ರಬಲ ಆಕಾಂಕ್ಷಿ ಆಗಿದ್ದರೂ ಬಿಜೆಪಿ ಕೋಟಾ ಶ್ರೀನಿವಾಸ ಪೂಜಾರಿ ಗೆ ಮಣೆ ಹಾಕಿತು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಆಗಿರುವುದು ನಿನ್ನೆ ಮೊನ್ನೆಯವರೆಗೂ ಬಿಜೆಪಿಯಲ್ಲಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಮತ ಸಮರದಲ್ಲಿ ಪರಿಶಿಷ್ಟ ಜಾತಿಯವರದ್ದು 2.5 ಲಕ್ಷ ಮತವಿದ್ದರೆ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರೆ ನಿರ್ಣಾಯಕ. ಇವರದ್ದೇ 4 ಲಕ್ಷ ಮತಗಳಿವೆ. ಇನ್ನು ಬಿಲ್ಲವರದ್ದು 1.5 ಲಕ್ಷ ಮತವಿದ್ದರೆ, ಬಂಟರದ್ದು ಅಷ್ಟೇ ಪ್ರಮಾಣವಿದೆ. ಮೊಗವೀರರದ್ದು 1 ಲಕ್ಷ, ಒಕ್ಕಲಿಗರ 1 ಲಕ್ಷ ಮತಗಳಿವೆ.

ಆದರೆ ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿಗೆ ಅಷ್ಟೇನೂ ಸುಲಭದ ವಾತಾವರಣವಿಲ್ಲ. ಬಿಜೆಪಿಯಲ್ಲಿದ್ದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದಾರೆ. ಬಿಜೆಪಿ ಯ ಮಾಜಿ ಶಾಸಕರಾಗಿರುವ ಸುಕುಮಾರ ಶೆಟ್ಟಿ ಕಾಂಗ್ರೆಸ್ ಪಾಳಯಕ್ಕೆ ಸೇರಿದ್ದಾರೆ. ಬಿಜೆಪಿಯಲ್ಲಿದ್ದ ಪ್ರಭಾವಿ ಬಂಟ ನಾಯಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕಾರಣದಿಂದ ನಿವೃತ್ತರಾಗಿದ್ದಾರೆ.

ಅಭಿವೃದ್ಧಿ, ಸಮಸ್ಯೆಯ ಮೇಲೆ ಚುನಾವಣೆ ನಡೆದರೆ ಬಿಜೆಪಿಗೆ ಈ ಬಾರಿ ಶಾಕಿಂಗ್ ನ್ಯೂಸ್ ಬರುವುದಂತೂ ನಿಶ್ಚಿತ. ಆದರೆ ಹಿಂದುತ್ವ ಮತ್ತೆ ಮೇಳೈಸಿದರೆ ಬಿಜೆಪಿ ಗೆಲುವಿನ ನಗೆ ಬೀರಬಹುದು. ಆದರೆ ಈ ಬಾರಿ ಕಣ ರೋಚಕವಿರುವುದಂತೂ ಸತ್ಯ.