ಮಾರಾಮಾರಿಗೆ ಸಾಕ್ಷಿಯಾಯಿತು ಜಿಲ್ಲಾ ಕಾಂಗ್ರೆಸ್ ಕಚೇರಿ
ಕರಾವಳಿಯಲ್ಲಿ ಕಾಂಗ್ರೆಸ್ ಸೀಟು ಪಡೆಯಲು ಹರಸಾಹಸ ಪಡೆಯುತ್ತಿದ್ದರೂ, ಸೋತು ಸುಣ್ಣವಾಗಿದ್ದರೂ ಕಾಂಗ್ರೆಸ್ ನಾಯಕರ ಮಧ್ಯೆ ಹೊಡೆದಾಟಕ್ಕೇನೂ ಕಮ್ಮಿಯಿಲ್ಲ. ಹಲವಾರು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ನಾಯಕರ ಮಧ್ಯೆ ಹತ್ತಾರು ಬಣಗಳಾಗಿ ಹಂಚಿಹೋಗಿದ್ದು, ಚುನಾವಣಾ ಸಮಯದಲ್ಲಿ ಕೆಲವೊಂದು ಕಾಂಗ್ರೆಸ್ ನಾಯಕರು ಬೆಳಿಗ್ಗೆ ಕಾಂಗ್ರೆಸ್, ರಾತ್ರಿ ಹೊತ್ತಿನಲ್ಲಿ ಬಿಜೆಪಿ ಆಗಿ ಪರಿವರ್ತನೆಗೊಳ್ಳುತ್ತಾರೆ. ಇದೇ ಕಾರಣದಿಂದ ಕಾಂಗ್ರೆಸ್ ಹಲವು ಚುನಾವಣೆಯಲ್ಲಿ ಸೋತು ಮೂಲೆ ಸೇರಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹರೀಶ್ ಕುಮಾರ್ ಆಯ್ಕೆಯಾದ ನಂತರ ಸೋಲೇ ಕಟ್ಟಿಟ್ಟ ಬುತ್ತಿ. ಸೋತು ಮಣ್ಣು ಮುಕ್ಕಿದರೂ ಹರೀಶ್ ಕುಮಾರ್ ಸ್ಥಾನಕ್ಕೇನೂ ಕುತ್ತು ಬಂದಿಲ್ಲ. ಭಡ್ತಿ ಹೊಂದಿ ಹಲವು ಸ್ಥಾನಮಾನಗಳನ್ನು ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಹರೀಶ್ ಕುಮಾರ್ ಹಠಾವೋ ಚಳುವಳಿಗೆ ಕಾಂಗ್ರೆಸ್ ಕಾರ್ಯಕರ್ತರು ರೂಪುರೇಷೆ ಹಾಕಿದ್ದರು. ಅದು ಕಾಂಚಣದ ಬಲದಿಂದ ಠುಸ್ಸ್ ಆಯಿತು, ಯಾವುದೇ ಪ್ರಯೋಜನ ಪಡೆದಿಲ್ಲ.

ಈ ನಡುವೆ ಜಿಲ್ಲಾ ಕಾಂಗ್ರೆಸ್ ನ ಕೆಲವು ಪ್ರಭಾವಶಾಲಿ ನಾಯಕರಿಂದ ರಮಾನಾಥ ರೈ ಮೂಲೆ ಗುಂಪು ಆದದ್ದು ಇದೆ. ರೈ ಕೆಲವರನ್ನು ಬೆಳೆಸಿದರು, ಅವರು ರೈಯನ್ನು ಬಳಸಿದರು. ಕೊನೆಗೆ ರಮನಾಥ ರೈಯವರಿಗೆ ಪಿಟ್ಟಿಂಗೂ ಇಟ್ಟರು.!ವಿಧಾನಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಎಲ್ಲವೂ ಕೈ ತಪ್ಪಿ ಹೋಗಿತ್ತು. ಜಿಲ್ಲಾ ಕಾಂಗ್ರೆಸ್ ನ ಕೆಲವು ಪ್ರಭಾವಶಾಲಿ ನಾಯಕರ ನಡೆಯ ಬಗ್ಗೆ ರೈ ಬಣ ಬುಸುಗುಟ್ಟುತ್ತಲೇ ಇತ್ತು. ಆದರೆ ಇದೀಗ ಅದು ಜಗಜ್ಜಾಹೀರಗೊಂಡಿದೆ.

ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಎಲ್ಲಾ ಬಣದ ನಾಯಕರು ಹಾಜರಿದ್ದರು. ಗೆದ್ದ ಸದಸ್ಯರಿಗೆ ವೇದಿಕೆಯ ಮೇಲೆ ಸನ್ಮಾನ ಮಾಡುವಂತೆ ರೈ ಬಣದ ತುಂಬೆ ಪ್ರಕಾಶ್ ಶೆಟ್ಟಿ ಸಲಹೆ ನೀಡಿದ್ದರು. ಆದರೆ ಇದಕ್ಕೆ ಸೊಂಬೇರಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೊಪ್ಪು ಹಾಕದಿದ್ದಾಗ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಮುಖಂಡರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದ್ದು, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ರಿಗೆ ಹಲ್ಲೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸೋತು ಸುಣ್ಣವಾದರೂ ಕಾಂಗ್ರೆಸ್ ಬಣ ರಾಜಕಾರಣ ಮೇಳೈಸುತ್ತಿದೆ.