ಬಾಲ್ಯ ವಿವಾಹದ ಪ್ರಕರಣ: ಮಲತಾಯಿಯ ದೂರು, ಕೂರ್ನಡ್ಕ ಯು.ಟಿ ಅಬ್ದುಲ್ ಅಝೀಝ್ ಸಹಿತ ಆರೋಪಿತರ ಖುಲಾಸೆ

ಕರಾವಳಿ

ಪುತ್ತೂರು : ಸಿಡಿಪಿಓ ಪುತ್ತೂರು ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಾಂತಿ. ಟಿ ಹೆಗಡೆಯವರು ನೀಡಿದ ದೂರಿನ ಆಧಾರದಲ್ಲಿ ಬಾಲ್ಯ ವಿವಾಹಕ್ಕೆ ಉತ್ತೇಜಿಸಿದ್ದಾರೆ ಎನ್ನಲಾದ ಆರೋಪದಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದ ಕೆಮ್ಮಿಂಜೆ ನಿವಾಸಿಗಳಾದ ಯು.ಟಿ. ಅಬ್ದುಲ್ ಅಜೀಜ್ ಮತ್ತು ಇತರರನ್ನು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪುತ್ತೂರು, ಸದ್ರಿ ಪ್ರಕರಣದಿಂದ ಖುಲಾಸೆಗೊಳಿಸಿರುತ್ತಾರೆ.

ದಿನಾಂಕ 14/11/2018 ರಂದು ಉಪ್ಪಿನಂಗಡಿ ನೆಕ್ಕಿಲಾಡಿ ಆದರ್ಶ ನಗರದ ಸುಲೇಮಾನ್ ರವರ ಮಗನಾದ ಮಹಮದ್ ಸಾಧಿಕ್ ಎಂಬಾತನ ಜೊತೆ ಪುತ್ತೂರು ಕೂರ್ನಡ್ಕ ಮಸೀದಿಯ ಉಸ್ತಾದ್ ರವರು ಒಂದನೇ ಆರೋಪಿಯ ಮನೆಯಲ್ಲಿ ಅಪ್ರಾಪ್ತ ಬಾಲಕಿ ಮರಿಯಂ ಶಿಫಾನ ಇವರ ನಿಖಾ ಶಾಸ್ತ್ರವನ್ನು ನೆರವೇರಿಸಿ, ಬಾಲ್ಯ ವಿವಾಹವನ್ನು ನಡೆಸಿರುತ್ತಾರೆ ಎಂದು ಬಾಲಕಿಯ ಮಲತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ಪೊಲೀಸರು ಅಂತಿಮ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ನಡುವೆ ಆರೋಪಿತರು ತಮ್ಮ ಪರ ವಕೀಲರ ಮುಖಾಂತರ ಸದ್ರಿ ಪ್ರಕರಣದಿಂದ ವಿಮೋಚನೆ (ಡಿಸ್ಚಾರ್ಜ್ ) ಮಾಡಲು ಮಾನ್ಯ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಸರಕಾರಿ ಅಭಿಯೋಜಕರ ಮತ್ತು ಆರೋಪಿತರ ಪರ ವಕೀಲರ ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯವು, ಸದ್ರಿ ಪ್ರಕರಣದಲ್ಲಿ ಆರೋಪಿಸಲಾದ ಆರೋಪವು ಆಧಾರ ರಹಿತವಾದದ್ದು ಮತ್ತು ಆ ದಿನ ದೂರಿನಂತೆ
ಕೇವಲ ನಿಶ್ಚಿತಾರ್ಥ ಮಾತ್ರ ನೆರವೇರಿದ್ದು, ಯಾವುದೇ ಕಾನೂನುಬಾಹಿರ ಬಾಲ್ಯ ವಿವಾಹ ನೇರವೇರಿರುವುದಿಲ್ಲ. ಮದುವೆ ನಡೆದಿದೆ ಎನ್ನುವುದಕ್ಕೆ ಮದುವೆ ಸಭಾಂಗಣದಲ್ಲೂ ದಾಖಲೆ ಇರುವುದಿಲ್ಲ. ಹಾಗೂ ಅಭಿಯೋಜನೆಯು ಸದರಿ ಪ್ರಕರಣವನ್ನು ಸಂಶಯಾತೀತವಾದದ್ದು ಎಂದು ನಿರೂಪಿಸಲು ವಿಫಲವಾಗಿರುತ್ತದೆ. ಆದ್ದರಿಂದ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಅರ್ಚನಾ.ಕೆ ಉನ್ನಿತ್ತನ್ ರವರು ಆರೋಪಿತರಾದ ಹಾಜಿ॥ ಯು.ಟಿ ಅಬ್ದುಲ್ ಅಜೀಜ್, ಹಾಜಿರ, ಇಬ್ರಾಹಿಂ ಚಾಪಳ್ಳ, ಸುಲೇಮಾನ್, ಅಪ್ಸಾ, ಮೊಹಮ್ಮದ್ ಸಾಧಿಕ್ ರವರನ್ನು ಸದ್ರಿ ಪ್ರಕರಣದಿಂದ (ಡಿಸ್ಚಾರ್ಜ್) ವಿಮೋಚನೆಗೊಳಿಸಿ ಆದೇಶ ನೀಡಿರುತ್ತದೆ. ಆರೋಪಿಗಳ ಪರವಾಗಿ ‘ಕಜೆ ಲಾ ಜೆಂಬರ್ಸ್’ ಇದರ ಮುಖ್ಯಸ್ಥರು, ಖ್ಯಾತ ನ್ಯಾಯವಾದಿಗಳಾದ ಶ್ರೀ. ಮಹೇಶ್ ಕಜೆರವರು ವಾದಿಸಿದ್ದರು.