ಜೂನ್ ಮೊದಲ ವಾರದಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳುತ್ತಿದ್ದು, ರಸ್ತೆಯಲ್ಲಿ ಶಾಲಾ ವಾಹನಗಳನ್ನು ನಿಲ್ಲಿಸಿ ಶಾಲಾ ಮಕ್ಕಳನ್ನು ಇಳಿಸುವುದು, ಹತ್ತಿಸುವುದು ಮಾಡಬಾರದು. ಶಾಲಾ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸಬಾರದು ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಹೇಳಿದರು. ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ನಗರದ ಶಾಲಾ-ಕಾಲೇಜುಗಳ ಆಡಳಿತ ವರ್ಗ ಹಾಗೂ ಶಾಲಾ ವಾಹನಗಳ ಚಾಲಕರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಶಾಲಾ ವಾಹನಗಳನ್ನು ಚಾಲಕರು ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನಿಲುಗಡೆ ಮಾಡಿ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ತೊಂದರೆ ಮಾಡಬಾರದು. ವಾಹನಗಳಲ್ಲಿ ಕರ್ಕಶ ಹಾರ್ನ್ ಗಳನ್ನು ಬಳಸಲು ಅವಕಾಶವಿಲ್ಲ. ನಿಗದಿತ ಎಲ್ಲ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನಗಳ ಕಾಯಿದೆಯಂತೆ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಸ್ಥಿತಿ ಗತಿ ಸೇರಿದಂತೆ 2012 ರಲ್ಲಿ ಸೂಚಿಸಿರುವ ನಿಬಂಧನೆಗಳನ್ನು ಪಾಲಿಸಿ, ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ತಿಳಿಸಿ, ಪಾಲನಾ ವರದಿ ನೀಡುವಂತೆ ಸೂಚಿಸಿದರು.
