ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸೇತುವೆ ನಿರ್ಮಾಣಕ್ಕೆ ಮತ್ತೆ ವಿಘ್ನ; ಸದ್ಯಕಿಲ್ಲ ಕಾಮಗಾರಿ ಭಾಗ್ಯ

ಕರಾವಳಿ

ಒಟ್ಟಾರೆ ಕಾನೂನು, ಸರ್ಕಾರ, ಇಲಾಖೆಗಳ ನಡುವೆ ಅಮಾಯಕ ಆದಿವಾಸಿ ಕಾಡಿನ ಮಕ್ಕಳು ಹೈರಾಣು

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಕಾಡಬಾಗಿಲು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡು, ಶಂಕುಸ್ಥಾಪನೆಯಾದರೂ, ಕಾಮಗಾರಿಗೆ ಬ್ರೇಕ್ ಬಿದ್ದಿದ್ದು, ಸದ್ಯ ಕಾಮಗಾರಿ ನಿಲ್ಲಿಸಲಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಶತಮಾನಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಭಿವೃದ್ಧಿಗಾಗಿ ಜನರ ನಿರಂತರ ಮೂರು ದಶಕಗಳ ಹೋರಾಟ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 79 ವರ್ಷ ಕಳೆದರೂ ಇಂದಿಗೂ ಇಲ್ಲಿ ವಿದ್ಯುತ್, ಸರಿಯಾದ ರಸ್ತೆ ಇಲ್ಲದಿರುವುದು ವ್ಯವಸ್ಥೆಯ ಜಡ್ಡುತನಕ್ಕೆ, ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದ ಸುಮಾರು 45 ಕ್ಕೂ ಹೆಚ್ಚು ಕುಟುಂಬಗಳು ಎರಡು ಶತಮಾನಗಳಿಂದ ಕೃಷಿಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದೆ. ಆದರೆ ಈಗಲೂ ಅದೇ ಚಿಮಿಣಿ ದೀಪದ ಜೀವನ, ಅದೇ ಪಕ್ಕಾ ಮಣ್ಣಿನ ರಸ್ತೆ. ಇದೇ ಅವರ ಜೀವನ ಎಂಬಂತಾಗಿದೆ.

ಇಲ್ಲಿ 80 ದಶಕದಲ್ಲಿ ಕಾಡಬಾಗಿಲು ಎಂಬಲ್ಲಿ ಸೇತುವೆಯೊಂದನ್ನು ಮಾಜಿ ಶಾಸಕ ಗಂಗಾಧರ ಗೌಡ ರವರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಗಾಳಿ, ಮಳೆ, ಚಳಿ, ಬಿಸಿಲಿಗೆ ಮೈಯೊಡ್ಡಿಕೊಂಡಿದ್ದ ಈ ಸೇತುವೆ 40 ವರ್ಷಗಳ ನಂತರ ತನ್ನ ಸೇವೆಯನ್ನು ಕೊನೆಗೊಳಿಸಿ ಬಿದ್ದು ಮಲಗಿದಲ್ಲೇ ಆಯಿತು. ಕಾಡಿನ ಮಕ್ಕಳ ಸಂಪರ್ಕ ಸೇತುವೆ ಏಕಾಏಕಿ ಮುರಿದು ಬಿತ್ತು. ಕಾಡಿನ ಸಂಪರ್ಕ ಶಾಶ್ವತವಾಗಿ ಕಸಿದುಕೊಂಡಿತು.

4 ವರ್ಷದ ನಂತರ, ಕಾಡಿನ ಮಕ್ಕಳ ಸಂಪರ್ಕ ಕೊಂಡಿಯಾಗಿದ್ದ ಏಕೈಕ ಸೇತುವೆ ನಿರ್ಮಾಣಕ್ಕಾಗಿ ಜನರು ಮತ್ತೆ ಬೀದಿಗಿಳಿದು, ನಿರಂತರ ಹೋರಾಟ ಮಾಡಿದ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಸೇತುವೆ ಸೇರಿದಂತೆ ರಸ್ತೆ ಅಭಿವೃದ್ಧಿಗಾಗಿ 1.90 ಲಕ್ಷಕ್ಕೆ ಆರ್ಥಿಕ ಅನುಮೋದನೆ ನೀಡಿತು. ಮೊದಲ ಹಂತವಾಗಿ ಸೇತುವೆ ನಿರ್ಮಾಣಕ್ಕಾಗಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿತು. ಇದಾದ ನಂತರ ಮಾಮೂಲಿ ಎಂಬಂತೆ ಸ್ಥಳೀಯ ಶಾಸಕ ಹರೀಶ್ ಪೂಂಜಾರವರು ತರಾತುರಿಯಲ್ಲಿ ರಸ್ತೆ, ಸೇತುವೆ ನಿರ್ಮಾಣಕ್ಕೆ 1.90 ಕೋಟಿ ಬಿಡುಗಡೆ ಹೆಸರಿನಲ್ಲಿ ಶಂಕುಸ್ಥಾಪನೆ ಮಾಡಿದರು. ಆದರೆ ಇಲಾಖೆಗಳ ಮಾಹಿತಿ ಪ್ರಕಾರ 1.90 ಕೋಟಿಯಲ್ಲಿ ಪ್ರಥಮ ಹಂತದಲ್ಲಿ ಬಿಡುಗಡೆಗೊಂಡಿದ್ದು ಮಾತ್ರ ಕೇವಲ 50 ಲಕ್ಷ ರೂಪಾಯಿ ಮಾತ್ರ.

ಶಂಕುಸ್ಥಾಪನೆ ನಂತರ ಕಾಮಗಾರಿಗೆ ಬ್ರೇಕ್:
ಮಾರ್ಚ್ 7 ರಂದು ಇಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ, ಕಾಮಗಾರಿಗೆ ಮುಂದಡಿ ಹಾಕಿದರೆ, ಇತ್ತ ಕಾಮಗಾರಿಗೆ ಕಾನೂನಿನ ಉರುಳು ಬಿತ್ತು. ಹೌದು ಕಾಡಬಾಗಿಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕಾಗಿದೆ. ಇದಾದ ಬಳಿಕ ಅರಣ್ಯ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಅನುಮತಿ ಪಡೆಯಬೇಕು. ಇದಾದ ನಂತರ ಯಾವುದೇ ಕಾಮಗಾರಿ ನಡೆಯಬೇಕಾಗಿದೆ. ಆದರೆ ಇಲ್ಲಿ ಅದ್ಯಾವುದೂ ಅನುಮತಿ ಪಡೆಯದೆ ಕಾಮಗಾರಿ ನಡೆಸಲು ವನ್ಯಜೀವಿ ಅರಣ್ಯ ಇಲಾಖೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದೆ. ಅಲ್ಲಿಗೆ ಕಾಮಗಾರಿಗೆ ನಿಂತಿದೆ. ಕಾಮಗಾರಿ ಉಸ್ತುವಾರಿ ವಹಿಸಿದ್ದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗಕ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಯಾವುದೇ ಕಾನೂನಿನ ಪರಿಜ್ಞಾನ ಇಲ್ಲದಂತೆ ಮೌನವಾಗಿದೆ. ಇನ್ನೂ ದಾಖಲೆಗಳನ್ನು ಕ್ರೋಡೀಕರಿಸಿ ಅರ್ಜಿ ಸಲ್ಲಿಸುವ ಗೋಜಿಗೆ ಹೋಗಲಿಲ್ಲ. ಅಂತೂ ಹಲವು ವರ್ಷಗಳ ಸೇತುವೆ ನಿರ್ಮಾಣದ ಕನಸು ನನಸಾಗುವುದು ಅನುಮಾನವಾಗಿದೆ. ಒಟ್ಟಾರೆ ಕಾನೂನು, ಸರ್ಕಾರ, ಇಲಾಖೆಗಳ ನಡುವೆ ಅಮಾಯಕ ಆದಿವಾಸಿ ಕಾಡಿನ ಮಕ್ಕಳು ಹೈರಾಣಾಗಿರುವುದು ದುರಂತವೇ ಸರಿ.