ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ರವರ ಅಂತಿಮ ತೀರ್ಮಾನದಿಂದ ಎನ್​ಡಿಎ ಭವಿಷ್ಯ ನಿರ್ಧಾರ.!

ರಾಷ್ಟ್ರೀಯ

ನಿತೀಶ್ ಮತ್ತು ನಾಯ್ಡು ಕೈಯಲ್ಲಿ ಮುಂದಿನ ಸರ್ಕಾರ ಕೀಲಿಕೈ

18ನೇ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬಂದರೂ, ಕೇಂದ್ರದಲ್ಲಿ ಅಧಿಕಾರ ನಡೆಸಲು ಸದ್ಯದ ಮಟ್ಟಿಗೆ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ ಮತ್ತು ಬಿಹಾರದ ಜೆಡಿಯು ಪಕ್ಷಗಳು ಎನ್​ಡಿಎ ಜತೆಗಿದ್ದರೂ, ಎದುರಾಳಿ ಇಂಡಿಯಾ ಮೈತ್ರಿಕೂಟದ ವಿವಿಧ ನಾಯಕರು ಈಗಾಗಲೇ ಎನ್​ಡಿಎ ಮಿತ್ರಪಕ್ಷಗಳನ್ನು ಸೆಳೆಯುವ ಯತ್ನ ಮಾಡಿದ್ದಾರೆ. ಮೋದಿ ಅವರೇ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಕರೆ ಮಾಡಿ, ಎನ್​ಡಿಎ ಮೈತ್ರಿಕೂಟದಲ್ಲಿ ಉಳಿದುಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ. ಫಲಿತಾಂಶದ ಹಿಂದಿನ ದಿನವಷ್ಟೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಫಲಿತಾಂಶದ ನಂತರ ಯಾವ ಧೋರಣೆ ಹೊಂದಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಟ್ಟಲೇಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪಕ್ಷಗಳು, ಚಂದ್ರಬಾಬು ನಾಯ್ಡು ಮತ್ತು ನಿತೀಶ್​ ಕುಮಾರ್ ಗೆ ಉಪ ಪ್ರಧಾನಿ ಹುದ್ದೆಗಳ ಆಫರ್ ನೀಡಿರುವ ಜತೆಗೆ ಬಿಹಾರ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿವೆ. ಆಂಧ್ರ ಮತ್ತು ಬಿಹಾರ ಎರಡೂ ರಾಜ್ಯಗಳು ಅನೇಕ ವರ್ಷಗಳಿಂದ ಕೇಂದ್ರದ ವಿಶೇಷ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿವೆ. ಹೀಗಾಗಿ, ಅಕ್ಷರಶಃ ನಿತೀಶ್ ಮತ್ತು ಚಂದ್ರಬಾಬು ಕೈಯಲ್ಲಿ ಮುಂದಿನ ಸರ್ಕಾರ ಕೀಲಿಕೈ ಇದೆ ಎನ್ನುವುದು ಸ್ಪಷ್ಟ.

ಆರಂಭದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿದ್ದ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಅವರು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಪ್ರಸ್ತಾವನೆ ಮುಂದಿಟ್ಟ ಬಳಿಕ ಮೈತ್ರಿಕೂಟದಿಂದ ಹೊರ ನಡೆದಿದ್ದರು. ಬಳಿಕ, ಎನ್​ಡಿಎ ಮರು ಸೇರ್ಪಡೆಯಾದ ನಿತೀಶ್, ಪ್ರಧಾನಿ ಜತೆಗಿನ ಕಾರ್ಯಕ್ರಮವೊಂದರಲ್ಲಿ, ಮುಂದೆಂದೂ ನಾವು ಅಲ್ಲೊಮ್ಮೆ-ಇಲ್ಲೊಮ್ಮೆ ಎಂದು ನಿಲುವು ಬದಲಿಸುವುದಿಲ್ಲ. ಸದಾ ನಿಮ್ಮೊಂದಿಗಿರುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ನಿತೀಶ್ ವಿಶ್ವಾಸಾರ್ಹ ವ್ಯಕ್ತಿಯಲ್ಲ ಎನ್ನುವುದು ಬಿಜೆಪಿಗೂ ಗೊತ್ತಿದೆ. ಇಂಡಿಯಾ ಮೈತ್ರಿಕೂಟದಿಂದ ಉಪ ಪ್ರಧಾನಿ ಹುದ್ದೆ ಮತ್ತು ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಭರವಸೆ ಸಿಕ್ಕಲ್ಲಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುಗೆ ಅದು ಸಾಕಷ್ಟು ಲಾಭ ತಂದುಕೊಡುವ ಸಾಧ್ಯತೆ ಇದೆ. ಹೀಗಾಗಿ, ನಿತೀಶ್ ಅಂತಿಮ ತೀರ್ಮಾನ ಎನ್​ಡಿಎ ಭವಿಷ್ಯ ನಿರ್ಧರಿಸಬಹುದು.