ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣ; ತೆಲಂಗಾಣದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಬಂಧನ

ರಾಷ್ಟ್ರೀಯ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣ
ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣದ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ,
ಹೈದರಾಬಾದ್ ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯ ಸತ್ಯನಾರಾಯಣ ಇಟಕಾರಿ ಬಂಧಿತ ಆರೋಪಿ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಸಹಕಾರ ಬ್ಯಾಂಕ್‌ ಅಧ್ಯಕ್ಷರನ್ನು ಸಿಐಡಿ ಎಸ್‌ಐಟಿ ಮಂಗಳವಾರ ಬಂಧಿಸಿದೆ.

ವಾಲ್ಮೀಕಿ ನಿಗಮದ 94.73 ಕೋಟಿ ರೂ. ದೋಚುವಲ್ಲಿ ಸತ್ಯನಾರಾಯಣ ಪ್ರಧಾನ ಸೂತ್ರಧಾರ. ಯೂನಿಯನ್‌ ಬ್ಯಾಂಕ್‌ನಲ್ಲಿರುವ ನಿಗಮದ ಖಾತೆಯಿಂದ 18 ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಆಗಿತ್ತು. ಈ ವಂಚನೆಯ ಜಾಡು ಬೆನ್ನತ್ತಿದಾಗ ಫೈನಾನ್ಸ್‌ ಕಂಪನಿ ಸತ್ಯನಾರಾಯಣ ಅವರೇ 18 ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ತನಿಖಾ ತಂಡ ಹೈದರಾಬಾದ್‌ಗೆ ತೆರಳಿ ಸತ್ಯನಾರಾಯಣ ಅವರನ್ನು ಸಿಐಡಿ ಕಚೇರಿಗೆ ಕರೆತಂದಿತ್ತು. ಬಳಿಕ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯದಿಂದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಜೂನ್ 12ರವರೆಗೆ ಕಸ್ಟಡಿಗೆ ಪಡೆಯಲಾಗಿದೆ ಎಂದು ಎಸ್‌ಐಟಿ ಮೂಲಗಳು ಖಚಿತಪಡಿಸಿವೆ. 18 ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಆಗಿದ್ದ ನಿಗಮದ 94 ಕೋಟಿ ರೂ.ಗಳನ್ನು ಸತ್ಯನಾರಾಯಣ ಪಡೆದುಕೊಂಡಿದ್ದಾರೆ. ಈ ಹಣ ಯಾರ ಪಾಲಾಗಿದೆ, ಎಲ್ಲೆಲ್ಲಿ ತಲುಪಿದೆ ಎಂಬುದರ ಬಗ್ಗೆ ಸುದೀರ್ಘ ನಡೆಯುತ್ತಿದೆ. ಆರೋಪಿ ಅಕ್ರಮಕ್ಕೆ ಕೈ ಜೋಡಿಸಿದವರ ಪತ್ತೆಗೂ ಕ್ರಮ ವಹಿಸಲಾಗಿದೆ ಎಂದು ಮೂಲಗಳು ಹೇಳಿವೆ. ವಾಲ್ಮೀಕಿ ನಿಗಮದ ಅಕ್ರಮದ ಕುರಿತು ನಿಗಮದ ಅಧಿಕಾರಿ ಚಂದ್ರಶೇಖರ್‌ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಹಾಗೂ ಹೈಗ್ರೌಂಡ್ಸ್‌ ಠಾಣೆಯಲ್ಲಿ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಗಮದ ಮಾಜಿ ಎಂ.ಡಿ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್‌ ಜಿ.ದುರುಗಣ್ಣವರ್‌ ಅವರನ್ನು ಬಂಧಿಸಿ ಕಸ್ಟಡಿ ವಿಚಾರಣೆ ನಡೆಸುತ್ತಿದೆ. ಈ ಬಹುಕೋಟಿ ಹಗರಣದಲ್ಲಿ ಮತ್ತಷ್ಟು ಮಂದಿಗಳು ಭಾಗಿಯಾಗಿರುವ ಶಂಕೆಯಿದ್ದು, ಎಸ್‌ಐಟಿ ಆರೋಪಿಗಳ ಬಂಧನಕ್ಕೆ ತಂತ್ರಹೆಣೆಯುತ್ತಿದೆ.