ಸ್ವಂತ ಊರಿಗೆ ತೆರಳಲು ಬಡ್ತಿಯನ್ನೇ ತ್ಯಾಗ ಮಾಡಲು ಕಾನ್ಸ್ಟೇಬಲ್ ಗಳು ಸಿದ್ದರಿದ್ದಾರೆ.
ಅಂತರ ಜಿಲ್ಲಾ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿ ವರ್ಷಗಳ ಕಾಲ ಕಳೆದಿದ್ದರೂ ಪೊಲೀಸ್ ಕಾನ್‌ಸ್ಟೆಬಲ್ ಗಳಿಗೆ ವರ್ಗಾವಣೆ ಭಾಗ್ಯ ದೊರೆತಿಲ್ಲ.
ಪೊಲೀಸ್ ಇಲಾಖೆ ಆರಂಭಿಸಿದ ಆನ್‌ಲೈನ್ ಪೋರ್ಟಲ್‌ನಲ್ಲಿ ರಾಜ್ಯದ 3,286 ಮಂದಿ ಪರಸ್ಪರ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾರಿಗೂ ವರ್ಗಾವಣೆ ಪತ್ರ ಕೈಸೇರಿಲ್ಲ. ಅರ್ಜಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಳೆದ ಮೇ 31ರಂದು ಪೊಲೀಸ್ ಮಹಾನಿರ್ದೇಶಕರಿಗೆ ಗೃಹ ಸಚಿವರು ಪತ್ರ ಬರೆದಿದ್ದರು. ಆದರೂ, ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ತಿಳಿದು ಬಂದಿದೆ.

ಗಂಡ-ಹೆಂಡತಿ ಪ್ರಕರಣದಲ್ಲಿ ಮೂರು ತಿಂಗಳ ಹಿಂದೆಯೇ ರಾಜ್ಯದ 87 ಮಂದಿ ಪರಸ್ಪರ ವರ್ಗಾವಣೆ ಆಗಿದ್ದಾರೆ. ಸಾಮಾನ್ಯ ಕಾನ್‌ಸ್ಟೆಬಲ್ ಗಳು ಮಾತ್ರ ವೇದನೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಂತರ ಜಿಲ್ಲಾ ವರ್ಗಾವಣೆಗೆ 2022ರಲ್ಲಿ ಮತ್ತೆ ಸರ್ಕಾರ ಅವಕಾಶ ನೀಡಿತ್ತು. ಹಿಂದಿನ ಪೊಲೀಸ್ ಮಹಾನಿರ್ದೇಶಕರು ಕೆಎಸ್‌ಪಿ ಪೋರ್ಟಲ್ ತೆರೆದು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದರು. 7 ವರ್ಷ ಪೂರೈಸಿದ ಸಾಮಾನ್ಯ ವರ್ಗದ ಸಿಬ್ಬಂದಿ ಹಾಗೂ 3 ವರ್ಷ ಪೂರೈಸಿದ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳಿಗೊಮ್ಮೆ, ಮೊದಲು ಅರ್ಜಿ
ಸಲ್ಲಿಸಿದವರಿಗೆ ಅವಕಾಶ ನೀಡಲಾಗುವುದು ಎಂದು ಷರತ್ತು ವಿಧಿಸಲಾಗಿತ್ತು. ಆದರೆ, ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಒಂದು ಪೊಲೀಸ್ ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆಯಾದರೆ ಅಂತಹ ಸಿಬ್ಬಂದಿ, ತಮ್ಮ ಸೇವಾ ಜ್ಯೇಷ್ಠತೆ ಬಿಟ್ಟುಕೊಡಬೇಕು. ಆ ಘಟಕದ ಸೇವಾ ಹಿರಿತನಕ್ಕೆ ಅನುಗುಣವಾಗಿ ಸೇವಾ ಜ್ಯೇಷ್ಠತೆ ಹೊಂದಲು ಬದ್ಧರಾಗಿರಬೇಕು ಎಂಬ ಷರತ್ತು ಸಹ ವಿಧಿಸಲಾಗಿತ್ತು. ಅದಕ್ಕೂ ಒಪ್ಪಿ ಅರ್ಜಿ ಸಲ್ಲಿಸಿದ್ದಾರೆ. ಸ್ವಂತ ಊರಿಗೆ ತೆರಳಲು ಬಡ್ತಿಯನ್ನೇ ತ್ಯಾಗ ಮಾಡಲು ಸಿದ್ದರಿದ್ದಾರೆ. ಆದರೂ, ಇಲಾಖೆ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಅಳಲು ತೋಡಿಕೊಂಡಿರುತ್ತಾರೆ.
