ಆರ್ ಟಿ ಐ ಕಾಯಿದೆಯಿಂದ ದೇಗುಲ ಹೊರಗಿಡಲು ಸಾಧ್ಯವಿಲ್ಲ: ಹೈಕೋರ್ಟ್

ರಾಜ್ಯ

ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವುದು ಅರ್ಚಕರಿಗೆ ತೊಂದರೆ ನೀಡಿದಂತಾಗುವುದಿಲ್ಲ

ಬೆಂಗಳೂರು: ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಅನಗತ್ಯ ಅರ್ಜಿಗಳನ್ನು ಸಲ್ಲಿಸಿ ಅರ್ಚಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಹಿಂದೂ ದೇವಸ್ಥಾನಗಳ ಪುರೋಹಿತರು, ಆಗಮಿಕರು ಹಾಗೂ ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಾದ ಆಲಿಸಿದ ಬಳಿಕ ನ್ಯಾಯಾಲಯ, “ಅರ್ಜಿದಾರರು ಅರ್ಚಕರಾಗಿರುವ ದೇವಾಲಯಗಳು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದ್ದು, ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳಾಗಿವೆ. ಅಲ್ಲದೆ ಸರ್ಕಾರದ ಸುತ್ತೋಲೆ ಪ್ರಸ್ತಾಪಿಸಿರುವುದು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಬರುವುದಿಲ್ಲ, ಆದ್ದರಿಂದ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವುದು ಅರ್ಚಕರಿಗೆ ತೊಂದರೆ ನೀಡಿದಂತಾಗುವುದಿಲ್ಲ” ಎಂದು ಅಭಿಪ್ರಾಯ ಪಟ್ಟು ಅರ್ಜಿ ವಜಾಗೊಳಿಸಿತು. ಸಿಬ್ಬಂದಿ ನೇಮಿಸಿ ದತ್ತಿ ಇಲಾಖೆ ಅಧೀನದ ದೇವಾಲಯಗಳಿಗೆ ಆದೇಶಿಸಿರುವ ಸುತ್ತೋಲೆ ರದ್ದುಪಡಿಸಲಾಗದು” ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರ ಪರ ವಕೀಲರು, “ಪ್ರಸಾದ ಸಿದ್ಧಪಡಿಸುವ ಸಂದರ್ಭದಲ್ಲಿ ಎಷ್ಟು ಪ್ರಮಾಣದ ಸಕ್ಕರೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಷ್ಟು ಅಕ್ಕಿ ಬಳಸಲಾಗುತ್ತಿದೆ ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಆ ಮೂಲಕ ಅರ್ಚಕರಿಗೆ ಹಿಂಸೆ ನೀಡುತ್ತಿದ್ದಾರೆ” ಎಂದು ಪೀಠಕ್ಕೆ ವಿವರಿಸಿದರು. ಆದ್ದರಿಂದ ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಬೇಕು” ಎಂದು ಅರ್ಜಿಯಲ್ಲಿ ಕೋರಿದ್ದರು.