ಈ ಸಲ ಚುನಾವಣೆಯಲ್ಲಿ ಸ್ಪರ್ಧಿಸದೆ, ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಜಾತ್ಯಾತೀತ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ ಎಡಪಕ್ಷಗಳು

ರಾಜ್ಯ

ರಾಜ್ಯದಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ.ಈ ಬಾರಿ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಎಡಪಕ್ಷಗಳು ತೀರ್ಮಾನಿಸಿವೆ. ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಡೆಯಲು ಕರಾವಳಿ ಜಿಲ್ಲೆಗಳಲ್ಲಿನ ಯಾವ ಕ್ಷೇತ್ರದಲ್ಲೂ ಸ್ಪರ್ಧಿಸದಿರಲು ಸಿಪಿಐ(ಎಂ) ಮತ್ತು ಸಿಪಿಐ ಪಕ್ಷಗಳು ನಿರ್ಧರಿಸಿವೆ.ಈಗಾಗಲೇ ಬಿಜೆಪಿ 212 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ಪ್ರದೇಶದಲ್ಲಿ ಜಾತ್ಯತೀತ ಮತಗಳನ್ನು ಕ್ರೋಢೀಕರಿಸಬೇಕು ಎಂದು ಉಭಯ ಪಕ್ಷಗಳು ತೀರ್ಮಾನಿಸಿವೆ.

ಸಾಕಷ್ಟು ಪ್ರಭಾವ ಹೊಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಸಲು ಪಣ ತೊಟ್ಟಿರುವ ಎಡಪಕ್ಷಗಳು ಚುನಾವಣಾ ಕಣದಿಂದ ದೂರ ಉಳಿದು ಜಾತ್ಯಾತೀತ ಸಿದ್ದಾಂತ ಹೊಂದಿರುವ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಮುಂದಾಗಿವೆ.ಈ ಬಗ್ಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ, ಜಾತ್ಯತೀತ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಸಕ್ರಿಯರಾಗಿದ್ದೇವೆ. ಎರಡು ಪಕ್ಷಗಳು ತಮ್ಮ ಚುನಾವಣಾ ಕಾರ್ಯತಂತ್ರವನ್ನು ರೂಪಿಸಲು ಏಪ್ರಿಲ್ 18ರಂದು ಸಭೆ ಕರೆದಿದ್ದೇವೆ. ಈ ಸಂದರ್ಭದಲ್ಲಿ ಜಾತ್ಯಾತೀತ ಪಕ್ಷಗಳಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಮತ್ತು ಅದರ ಜನವಿರೋಧಿ ನೀತಿಗಳನ್ನು ಸೋಲಿಸುವುದೇ ಎಡಪಕ್ಷಗಳ ಗುರಿಯಾಗಿದೆ” ಎಂದು ಹೇಳಿದರು.