ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ 15 ಮಂದಿ ಅಧಿಕಾರಿಗಳ ವರ್ಗಾವಣೆ

ರಾಜ್ಯ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ 15ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಿಡಿಸಿದ್ದಾರೆ. KSRTC ಕೇಂದ್ರ ಕಚೇರಿಯಲ್ಲಿ ಮುಖ್ಯ ಕಾನೂನು ಅಧಿಕಾರಿಯವರನ್ನು NWKRTC ಕೇಂದ್ರ ಕಚೇರಿಗೆ ಮುಖ್ಯ ಕಾನೂನು ಅಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ. ಮಾಲೂರಿನಲ್ಲಿರುವ ಕೇಂದ್ರೀಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿದ್ದ ವಿಶ್ವನಾಥ ಅವರನ್ನು ನಿಗಮ ಶಿವಮೊಗ್ಗ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.

ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ದಾವಣಗೆರೆ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ, ನಿಗಮ ಶಿವಮೊಗ್ಗ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು NWKRTCಗೆ ನಿ 17/1 ರಡಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.

ಪುತ್ತೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಬಿ. ಅವರನ್ನು ಬಿಎಂಟಿಸಿ ಪಶ್ಚಿಮ ವಲಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ನಿಗಮದ ಪ್ರಾದೇಶಿಕ ತರಬೇತಿ ಕೇಂದ್ರ ಹೊಳಲ್ಕೆರೆಯಲ್ಲಿ ಪ್ರಾಂಶುಪಾಲರಾಗಿದ್ದ ನವೀನ್ ಅವರನ್ನು ನಿಗಮ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.

ಕೋಲಾರ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಮತ್ತು ನಿಗಮದ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ಬಿಎಂಟಿಸಿ ಕೇಂದ್ರೀಯ ವಿಭಾಗ (ವೋಲ್ಲೊ)ದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಬಿಎಂಟಿಸಿಯಲ್ಲಿ ಉಪ ಮುಖ್ಯ ಯಾಂತ್ರಿಕ ಅಭಿಯಂತರ ಅವರನ್ನು ನಿಗಮ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಲಾಗಿದೆ. ಹಾಗೆಯೇ ಮಂಗಳೂರಿನ ಸಾರಿಗೆ ಇಲಾಖೆ ನಿಯಂತ್ರಣದಲ್ಲಿರುವ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಕೆ.ಸತ್ಯ ಸುಂದರಂ ಅವರನ್ನು ಬಿಎಂಟಿಸಿ ಪೂರ್ವ ವಲಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜನೆಗೊಳಿಸಿ ಆದೇಶಿಸಿದ್ದಾರೆ.

ಬಿಎಂಟಿಸಿ ಪೂರ್ವ ವಲಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ಕೆಎಸ್‌ಆರ್‌ಟಿಸಿ ನಿ 17/1 ರಡಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ನಿಯೋಜಿಸಿದ್ದರೆ, ಬಿಎಂಟಿಸಿ ಕೇಂದ್ರೀಯ ವಿಭಾಗದ (ವೋಲ್ಲೊ) ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ಕೆಎಸ್‌ಆರ್‌ಟಿಸಿ ಉಪ ಮುಖ್ಯ ತಾಂತ್ರಿಕ ಅಭಿಯಂತರರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬಿಎಂಟಿಸಿ ಪಶ್ಚಿಮ ವಲಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು, NWKRTC ಹುಬ್ಬಳ್ಳಿ -ಧಾರವಾಡ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿಯೂ, ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಕಾನೂನು ಅಧಿಕಾರಿಯವರನ್ನು ಬಿಎಂಟಿಸಿಗೆ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾಗಿ ನೇಮಿಸಲಾಗಿದೆ.

ನಿಗಮದ ದಾವಣಗೆರೆ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ಚಿತ್ರದುರ್ಗ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.