ಕರ್ನಾಟಕ ರಾಜ್ಯ ಸರಕಾರದ ನಗರಾಭಿವೃದ್ದಿ ಸಚಿವರಾದ ಗೌರವಾನ್ವಿತ ಬೈರತಿ ಸುರೇಶ್ ಅವರಿಗೆ ಪ್ರೀತಿ ಪೂರ್ವಕ ನಮಸ್ಕಾರ. ತಾವು ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇವೆ. ಕರ್ನಾಟಕದ ಸಿದ್ದರಾಮಯ್ಯ ಸರಕಾರದಲ್ಲಿ ಪ್ರಥಮ ಹಂತದಲ್ಲೇ ಸಂಪುಟ ದರ್ಜೆಯ ಸಚಿವರಾಗಿ ನಗರಾಭಿವೃದ್ದಿ ಇಲಾಖೆಯ ಜವಾಬ್ದಾರಿಯನ್ನು ತಾವು ಹೊತ್ತಾಗ ಮಂಗಳೂರಿನಲ್ಲೂ ಸಂತಸ ವ್ಯಕ್ತವಾಗಿತ್ತು. ಬಿಜೆಪಿ ಆಡಳಿತದಲ್ಲಿ ಹಳಿತಪ್ಪಿರುವ, ಭ್ರಷ್ಟಾಚಾರದಲ್ಲಿ ಮುಳುಗಿರುವ ಮಂಗಳೂರು ನಗರ ಪಾಲಿಕೆಯ ಆಡಳಿತವನ್ನು ಸಂಪುಟದಲ್ಲಿ ಅತ್ಯಂತ ಪ್ರಭಾವಿಗಳು, ಮುಖ್ಯಮಂತ್ರಿಗಳ ಆಪ್ತರು, ಉತ್ಸಾಹಿಗಳು ಎಂದು ಭಾವಿಸಲಾದ ತಾವು ಹಳಿಗೆ ತರಬಲ್ಲಿರಿ ಎಂಬ ನಿರೀಕ್ಷೆ ಗರಿಗೆದರಿತ್ತು.
ತಾವು ಸಚಿವರಾದ ತರುವಾಯ ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಬಹುಷ ಒಮ್ಮೆ ಮಾತ್ರ ಮಂಗಳೂರಿಗೆ ಭೇಟಿ ನೀಡಿದ್ದು ನೆನಪು. ಆ ಸಂದರ್ಭ ನಗರ ಪಾಲಿಕೆಗೆ, ನಗರಾಭಿವೃದ್ದಿಗೆ ಸಂಬಂಧ ಪಟ್ಟ ಇಲಾಖೆಯ, ಜನಪ್ರತಿನಿಧಿಗಳ ಸಭೆ ನಡೆಸಿ ಮುಖ್ಯ ಸಮಸ್ಯೆ, ವಿಚಾರಗಳ ಕುರಿತು ಮಾಹಿತಿ ಸಂಗ್ರಹ ಮಾಡಿದ್ದೀರಿ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿರುತ್ತೀರಿ. ಆದರೆ, ಬಿಜೆಪಿ ಆಡಳಿತದ ಮಂಗಳೂರು ನಗರ ಪಾಲಿಕೆಯ ಆಡಳಿತದಲ್ಲಿ ಯಾವುದೇ ಬದಲಾವಣೆಗಳು ಸಂಭವಿಸಲಿಲ್ಲ. ಅದು “ಆನೆ ನಡೆದದ್ದೇ ದಾರಿ” ಎಂಬಂತೆ ಅದೇ ನಿರ್ಲಜ್ಜ ಭ್ರಷ್ಟ ದಾರಿಯಲ್ಲಿ ಜನವಿರೋಧಿಯಾಗಿ ಮುನ್ನಡೆದಿದೆ.
ಇರಲಿ, ತಾವು ಬಿಡುವು ಮಾಡಿಕೊಂಡು ಮಂಗಳೂರಿಗೆ ಬಂದಾಗ ಈ ಕುರಿತು ಮುಂದೆಯೂ ತಮ್ಮೊಂದಿಗೆ ಚರ್ಚಿಸಬಹುದು. ಈಗ ಪತ್ರ ಬರೆದಿರುವ ವಿಚಾರ ಬೇರೆಯೆ ಇದೆ. ಮಂಗಳೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ತರುವಾಯ ರಿಯಲ್ ಎಸ್ಟೇಟ್, ಬಿಲ್ಡರ್ ಲಾಭಿಗಳು ಆಡಿದ್ದೇ ಆಟ ಎಂಬಂತಾಗಿದೆ. ಅದರಲ್ಲೂ ತೀರಾ ಅಗತ್ಯಕ್ಕೆ ಬಳಕೆಯಾಗುವ ಟಿಡಿಆರ್ ನಿಯಮದ ಅಡಿ ಪ್ರಭಾವಿಗಳಿಗೆ ಲಾಭ ಆಗುವಂತೆ ಜಮೀನು ಖರೀದಿಸುವುದು ಒಂದು ದಂಧೆಯಾಗಿ, ಮಾಫಿಯಾ ಆಟವಾಗಿ ಇಲ್ಲಿ ಬದಲಾಗಿದೆ. ರಸ್ತೆ ನಿರ್ಮಾಣ, ಅಗಲೀಕರಣ, ಚರಂಡಿ, ಫುಟ್ ಪಾತ್ ಗಳಿಗೆ ಜಮೀನು ಸ್ವಾಧೀನಕ್ಕೆ ಬಳಕೆಯಾಗುತ್ತಿದ್ದ ಟಿಡಿಆರ್ ಯೋಜನೆ ಈ ಅವಧಿಯಲ್ಲಿ ಬಿಲ್ಡರ್, ರಿಯಲ್ ಎಸ್ಟೇಟ್ ಲಾಭಿಗಳ ಅನುಕೂಲಕ್ಕೆ ತಕ್ಕ ಹಾಗೆ ಬೇಕಾಬಿಟ್ಟಿ ಬಳಕೆಯಾಗುತ್ತಿದೆ. ರಿಯಲ್ ಎಸ್ಟೇಟ್ ಲಾಭಿಗಳ ಹತ್ತಾರು ಎಕರೆ ನಿರುಪಯೋಗಿ ಜಮೀನುಗಳನ್ನು ಹಲವು ನೆಪಗಳನ್ನು ಮುಂದಿಟ್ಟು ನಿಯಮಗಳನ್ನು ಕಡೆಗಣಿಸಿ ಟಿಡಿಆರ್ ಅಡಿ ಖರೀದಿಸಲಾಗುತ್ತಿದೆ. ಇದರಿಂದ ನಗರ ಮಧ್ಯದಲ್ಲಿ ಬಿಲ್ಡರ್ ಗಳ ಬಹು ಮಹಡಿ ವಸತಿ ಸಂಕೀರ್ಣಗಳು ಟಿಡಿಆರ್ ಸಲ್ಲಿಸಿ ನಿಯಮಗಳ ಪರಿವೆಯೇ ಇಲ್ಲದೆ ಆಕಾಶದೆತ್ತರಕ್ಕೆ ಏರುತ್ತಿದ್ದರೆ, ನಗರ ಪಾಲಿಕೆಯ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ನಷ್ಟ
ವಾಗುತ್ತಿದೆ. ಪಾಲಿಕೆ ಪಾಪರ್ ಆಗುತ್ತಿದೆ. ಇತ್ತೀಚೆಗೆ ಬಿಜೆಪಿ ಮುಖಂಡರಾಗಿರುವ ಬಿಲ್ಡರ್ ಓರ್ವರ ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ತಾಗಿಕೊಂಡ ಹತ್ತು ಎಕರೆ ತೀರಾ ನಿರುಪಯೋಗಿ ಜಮೀನು ಟಿಡಿಆರ್ ಅಡಿ ಖರೀದಿಗೆ ನಗರ ಪಾಲಿಕೆ (ನಿಯಮಗಳಲ್ಲಿ ಆ ರೀತಿ ಖರೀದಿಗೆ ಅವಕಾಶ ಇಲ್ಲ) ಒಪ್ಪಿಗೆ ಸೂಚಿಸಿದ್ದು, ನಿಯಮ ಬದ್ದವಾಗಿರದ ಅದೇ ಕಡತ ವಿಲೇವಾರಿಗೆ ಸಹಿ ಹಾಕುವ ವಿಚಾರದಲ್ಲಿ ಪಿತೂರಿ ನಡೆದು ಮೂಡಾ ಕಮೀಷನರ್ ಮೇಲೆ ಲೋಕಾಯುಕ್ತ ಧಾಳಿನಡೆದದ್ದು ದೊಡ್ಡ ಸುದ್ದಿಯಾಗಿತ್ತು. ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಮಂಗಳೂರು ನಗರ ಪಾಲಿಕೆಯ ಮಾನ ಇದರಿಂದ ಹರಾಜಾಗಿತ್ತು. ಟಿಡಿಆರ್ ದಂಧೆ ಪಡೆದುಕೊಂಡಿರುವ ಕರಾಳ ಸ್ವರೂಪವೂ ಬಯಲಿಗೆ ಬಂದಿತ್ತು. ಇದೆಲ್ಲಾ ತಮ್ಮ ಗಮನಕ್ಕೆ ಖಂಡಿತಾ ಬಂದಿರುತ್ತದೆ.

ಇದರ ಬೆನ್ನಿಗೆ ಮತ್ತೊಂದು ಮೆಗಾ ಟಿಡಿಆರ್ ಡೀಲ್ ಗೆ ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತ ಕೈ ಹಾಕಿದೆ. ನಗರದ ಹೊರ ವಲಯದಲ್ಲಿರುವ ಮರಕಡ ಗ್ರಾಮದ 9. 15 ಎಕರೆ, ಪದವು ಗ್ರಾಮದ 3. 45 ಎಕರೆ ಜಮೀನುಗಳನ್ನು ಟಿಡಿಆರ್ ಅಡಿ ಖರೀದಿಸಲು ನಗರ ಪಾಲಿಕೆ ಏಕಪಕ್ಷೀಯವಾಗಿ ತೀರ್ಮಾನಿಸಿದೆ. ಈ ಎರಡೂ ಜಮೀನು ನಗರದ ಅತಿ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸೇರಿರುವಂತದ್ದು. ವಸತಿ ಸಂಕೀರ್ಣ, ಅಪಾರ್ಟ್ ಮೆಂಟ್ ಮುಂತಾದ ಬಳಕೆಗೆ ತೀರಾ ನಿರುಪಯೋಗಿ ಜಮೀನು ಎಂದು ಗುರುತಿಸಲ್ಪಟ್ಟಂತಹದ್ದು. ಈ ಜಮೀನನ್ನು ಟಿಡಿಆರ್ ಅಡಿ ನಗರ ಪಾಲಿಕೆಯ ತಲೆಗೆ ಹಾಕಿ ಅಮೂಲ್ಯ ಮೌಲ್ಯದ ಟಿಡಿಆರ್ ಪಡೆಯಲು ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಲಾಭಿ ಪ್ರಯತ್ನಿಸುತ್ತಲೇ ಬಂದಿದೆ.(ಒಂದು ವೇಳೆ ಈ ಜಮೀನು ವಸತಿ ಸಂಕೀರ್ಣ, ಲೇ ಔಟ್ ಗಳಿಗೆ ಅನುಕೂಲಕರ ಆಗಿದ್ದಲ್ಲಿ ವರ್ಷಗಳ ಕಾಲ ಕಾದು ಬಡವರ ವಸತಿ ಯೋಜನೆಗಾಗಿ ಟಿಡಿಆರ್ ಅಡಿ ಬಿಟ್ಟುಕೊಡುವಂತಹ ಕರುಣಾಮಯಿ ಬಿಲ್ಡರ್ ಗಳು ಮಂಗಳೂರಿನಲ್ಲಂತೂ ನಾವು ಕಂಡಿಲ್ಲ) ಮೂರ್ನಾಲ್ಕು ವರ್ಷಗಳ ಹಿಂದೆ ಐಟಿ ಪಾರ್ಕ್ ನಿರ್ಮಾಣದ ಹೆಸರಿನಲ್ಲಿ ಇದೇ ನಿರುಪಯೋಗಿ ಜಮೀನು ಟಿಡಿಆರ್ ಅಡಿ ಖರೀದಿಸಲು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮೂಲಕ ಪ್ರಸ್ತಾಪ ನಗರ ಪಾಲಿಕೆ ಮುಂದೆ ತರಲಾಗಿತ್ತು. ಆಗ ನಗರದ ಜನಪರ ಸಂಘಟನೆಗಳು ಪ್ರಬಲ ವಿರೋಧ ವ್ಯಕ್ತ ಪಡಿಸಿದ್ದವು. ನಿಯಮಗಳ ಉಲ್ಲಂಘನೆಯನ್ನು ಎತ್ತಿತೋರಿಸಲಾಗಿತ್ತು. ವ್ಯಾಪಕ ಜನ ವಿರೋಧದಿಂದಾಗಿ ಸರಕಾರ ಆಗ ಈ ಜಮೀನು ಟಿಡಿಆರ್ ಅಡಿ ಖರೀದಿಸಲು ಒಪ್ಪಿಗೆ ಸೂಚಿಸಲಿಲ್ಲ.
ಈಗ ಬಡವರಿಗೆ ವಸತಿ ಯೋಜನೆ ರೂಪಿಸಲು ಎಂಬ ಗುರಾಣಿಯನ್ನು ಮುಂದಿಟ್ಟು ಮತ್ತೆ ಅದೇ ಪಾಳು ಬಿದ್ದಿರುವ ನಿರುಪಯೋಗಿ ಜಮೀನನ್ನು ಟಿಡಿಆರ್ ಅಡಿ ಖರೀದಿಸಲು ನಗರ ಪಾಲಿಕೆ ತೀರ್ಮಾನಿಸಿದೆ. ನಗರದ ಮೇಯರ್ ಸುಧೀರ್ ಶೆಟ್ಟಿ ತೀರಾ ತುರ್ತಿನ ವಿಚಾರ ಎಂಬಂತೆ ಪೂರ್ವಾನ್ವಯ ಅನುಮತಿಯನ್ನು ನೀಡಿ ತರುವಾಯ ನಗರ ಪಾಲಿಕೆಯ ತಿಂಗಳ ಹಿಂದಿನ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೆ ಮಂಡಿಸಿದ್ದರು. ಆ ಸಂದರ್ಭ ನಾಗರಿಕ ಸಂಘಟನೆಗಳು ಪ್ರಬಲ ವಿರೋಧ ವ್ಯಕ್ತಪಡಿಸಿದವು, ವಿರೋಧ ಪಕ್ಷವಾದ ಕಾಂಗ್ರೆಸ್ ನ ಹಲವು ಕಾರ್ಪೊರೇಟರ್ ಗಳು ಆಕ್ಷೇಪ ವ್ಯಕ್ತ ಪಡಿಸಲು ಸಿದ್ದರಾಗಿದ್ದರು. ಇದರಿಂದ ಇರುಸುಮುರಿಸಿಗೆ ಒಳಗಾದ ಆಡಳಿತ ಪಕ್ಷ ಬಿಜೆಪಿ ಅಜೆಂಡಾದಲ್ಲಿ ಇದ್ದ ಟಿಡಿಆರ್ ಕಡತದ ವಿಚಾರವನ್ನು ಮಂಡಿಸದೆ ಮುಂದೂಡಿತು. ಆ ಮೂಲಕ ಜನರ ವ್ಯಾಪಕ ವಿರೋಧ ವ್ಯಕ್ತವಾಗಿದ್ದ ಟಿಡಿಆರ್ ದಂಧೆಗೆ ಸಣ್ಣ ಬ್ರೇಕ್ ಬಿದ್ದಿತ್ತು.
ಆದರೆ, ಈ ಭಾರಿಯ ಸಾಮಾನ್ಯ ಸಭೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಈ ಎರಡು ನಿರುಪಯೋಗಿ ಜಮೀನಿನ ಟಿಡಿಆರ್ ಕಡತಕ್ಕೆ ಬಿಜೆಪಿ ಆಡಳಿತ ತರಾತುರಿಯಲ್ಲಿ ಅನುಮತಿ ಪಡೆದುಕೊಂಡಿದೆ. ಖೇದದ ಸಂಗತಿ ಏನೆಂದರೆ, ವಿರೋಧ ಪಕ್ಷವಾದ ಕಾಂಗ್ರೆಸ್ ನ ಪಾಲಿಕೆಯ ಸದಸ್ಯರಲ್ಲಿ ಅಬ್ದುಲ್ ರವೂಫ್ ಹಾಗೂ ಅಬ್ದುಲ್ ಲತೀಫ್ ಹೊರತು ಪಡಿಸಿ ಇನ್ನು ಯಾವೊಬ್ಬ ಸದಸ್ಯರೂ ಜನರ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದ, ಬಹು ದೊಡ್ಡ ಹಗರಣವಾದ ಈ ಟಿಡಿಆರ್ ಅನುಮೋದನೆಗೆ ಸಣ್ಣ ಪ್ರತಿರೋಧವನ್ನೂ ವ್ಯಕ್ತ ಪಡಿಸದೆ ಮೌನ ಸಮ್ಮತಿ ಸೂಚಿಸಿದ್ದು. ಆಕ್ಷೇಪ ದಾಖಲಿಸುವಾಗ ಕಾಂಗ್ರೆಸ್ ಕಾರ್ಪೊರೇಟರ್ ಅಬ್ದುಲ್ ರವೂಫ್ ಅವರು ಈ ಜಮೀನು ನಾಲಕ್ಕು ದಿಕ್ಕಿನಲ್ಲೂ ಇಳಿಜಾರು ಆಗಿರುವುದು, ವಸತಿ ಯೋಜನೆಗೆ ಇದು ಯೋಗ್ಯವಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿರುವುದನ್ನು ಪ್ರಸ್ತಾಪಿಸಿದರು. ಈ ಸಂದರ್ಭ ಅಬ್ದುಲ್ ಲತೀಫ್ ಹೊರತು ಪಡಿಸಿ ಯಾವ ಪಾಲಿಕೆ ಸದಸ್ಯರೂ ರವೂಫ್ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬುದನ್ನು ವಿಷಾದದಿಂದಲೇ ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಇದೆಲ್ಲಕ್ಕಿಂತಲೂ ಪ್ರಮುಖವಾಗಿ ನಿಮಗೆ ಪತ್ರ ಬರೆಯಲು ಕಾರಣವಾಗಿದ್ದು, ಬಿಜೆಪಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, ಈ ವಿವಾದಿತ ಮರಕಡ ಜಮೀನನ್ನು ಟಿಡಿಆರ್ ಅಡಿ ಖರೀದಿಸುತ್ತಿರುವುದು “ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಸೂಚನೆ ಮೇರೆಗೆ” ಎಂದು ಅಬ್ದುಲ್ ರವೂಫ್ ಆಕ್ಷೇಪಕ್ಕೆ ಉತ್ತರಿಸುತ್ತಾ ಸಾಮಾನ್ಯ ಸಭೆಯಲ್ಲಿಯೇ ಇಡೀ ಟಿಡಿಆರ್ ಹಗರಣವನ್ನು ಸಚಿವರಾದ ತಮ್ಮ ತಲೆಗೆ ಕಟ್ಟಿ ಆಕ್ಷೇಪ ಎತ್ತಿದ ಕಾಂಗ್ರೆಸ್ ಸದಸ್ಯರ ಬಾಯಿ ಮುಚ್ಚಿಸಲು ನೋಡಿದ್ದಾರೆ. “ಬಡವರಿಗೆ ವಸತಿ ಯೋಜನೆಗೆ ಟಿಡಿಆರ್ ಅಡಿ ಖಾಸಗಿ ಜಮೀನು ಖರೀದಿಸುವಂತೆ ನಗರಾಭಿವೃದ್ದಿ ಸಚಿವರು ಸೂಚಿಸಿದ್ದಾರೆ” ಎಂದು ತಮ್ಮನ್ನು ಉಲ್ಲೇಖಿಸಿ ನಗರ ಪಾಲಿಕೆಯ ಆದಾಯಕ್ಕೆ ನೂರು ಕೋಟಿ ಕನ್ನ ಕೊರೆಯುವ ಹಗರಣವನ್ನು ನ್ಯಾಯೀಕರಿಸಲು ಯತ್ನಿಸಿದ್ದಾರೆ. ಇದೇ ಪಾಲಿಕೆಯ ಬಿಜೆಪಿ ಆಡಳಿತವು ಈ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಂಜೂರಾದ, ಇಡ್ಯಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಆರು ನೂರು ಮನೆಗಳಿರುವ ವಸತಿ ಯೋಜನೆಯನ್ನು ಈ ನಾಲ್ಕೂವರೆ ವರ್ಷಗಳ ದೀರ್ಘ ಅವಧಿಯಲ್ಲಿ ಪೂರ್ಣಗೊಳಿಸದೆ ಕಾಮಗಾರಿಯನ್ನು ಅರ್ಧದಲ್ಲೇ ಕೈಬಿಟ್ಟು ಬಡವರ ವಸತಿ ಯೋಜನೆಯ ಕುರಿತು ತನಗಿರುವ ತಾತ್ಸಾರ ನೀತಿಯನ್ನು ಅನಾವರಣಗೊಳಿಸಿದೆ. ಇಲ್ಲಿ ಬಲಾಢ್ಯ ರಿಯಲ್ ಎಸ್ಟೇಟ್ ಲಾಭಿಗಳಿಗೆ ಹತ್ತಾರು ಕೋಟಿ ಲಾಭ ಕೊಡಿಸುವ ಟಿಡಿಆರ್ “ಡೀಲ್” ಕುದುರಿಸಲು ಬಡವರ ವಸತಿ ಯೋಜನೆ ಹಾಗೂ ನಗರಾಭಿವೃದ್ದಿ ಸಚಿವರಾದ ತಮ್ಮ ಹೆಸರನ್ನು ಗುರಾಣಿಯಾಗಿ ಬಳಸುತ್ತಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ತಮ್ಮ ಗಮನಕ್ಕೆ ತರಲು ಮಂಗಳೂರಿನ ಜನ ಸಾಮಾನ್ಯರ ಹಾಗೂ ಜಾಗೃತ ನಾಗರಿಕರ ಪರವಾಗಿ ಈ ಬಹಿರಂಗ ಪತ್ರವನ್ನು ತಮಗೆ ಬರೆದಿದ್ದೇವೆ. ತಾವು ವಿವಾದಿತ ಮರಕಡ ಟಿಡಿಆರ್ ಕಡತಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರಕಾರದಿಂದ ಅನುಮೋದನೆ ನೀಡಬಾರದು. ಸಚಿವರಾದ ತಮ್ಮ ಹೆಸರನ್ನೇ ಗುರಾಣಿಯಾಗಿಸಿ ಹಗರಣವನ್ನು ನ್ಯಾಯೀಕರಿಸುವ ಬಿಜೆಪಿ ನಗರ ಪಾಲಿಕೆಯ ಈ ಯತ್ನವನ್ನು ತಾವು ವಿಫಲಗೊಳಿಸಬೇಕು ಹಾಗೂ ತನಿಖೆಗೆ ಒಳಪಡಿಸಬೇಕು. ಮಂಗಳೂರು ಪಾಲಿಕೆಯಲ್ಲಿ ಟಿಡಿಆರ್ ಎಂಬುದು ದಂಧೆಯಾಗಿ ಪರಿವರ್ತನೆಗೊಂಡಿದೆ. ಮರಕಡ ಟಿಡಿಆರ್ ಫೈಲ್ ಮಾತ್ರ ಅಲ್ಲದೆ, ಪಚ್ಚನಾಡಿ ಟಿಡಿಆರ್ ಫೈಲ್ ಸಹ ನಿಯಮಗಳನ್ನು ಉಲ್ಲಂಘಿಸಿರುವುದು ಈಗಿನ ಮೂಡಾ ಆಯುಕ್ತರೇ ಗುರುತಿಸಿದ್ದಾರೆ. ಪಚ್ಚನಾಡಿ ಟಿಡಿಆರ್ ಫೈಲ್ ಈಗ ಬೆಂಗಳೂರಿನ ನಿಮ್ಮ ಕಚೇರಿಯಲ್ಲಿ ಪರಿಶೀಲನೆಯ ಹಂತದಲ್ಲಿದೆ ಎಂಬ ಮಾಹಿತಿ ಇದೆ. ಈ ಫೈಲ್ ಅನ್ನೂ ಸಚಿವರಾದ ತಾವು ತಿರಸ್ಕರಿಸಬೇಕು. ಒಟ್ಟಾರೆ ಬಿಜೆಪಿ ನಗರ ಪಾಲಿಕೆಯ ಬಿಜೆಪಿ ಆಡಳಿತದ ಅವಧಿಯ ಎಲ್ಲಾ ಟಿಡಿಆರ್ ಡೀಲ್ ಗಳನ್ನೂ ತಾವು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ತಮ್ಮಲ್ಲಿ ಒತ್ತಾಯಿಸುತ್ತಿದ್ದೇವೆ. ಈ ಎಲ್ಲಾ ಹಗರಣ, ಡೀಲ್ ಗಳ ವಿರುದ್ದ ಈಗಾಗಲೆ ಜನಪರ ಸಂಘಟನೆಗಳು ಪರಸ್ಪರ ಸಮಾಲೋಚನೆಯುಲ್ಲಿ ತೊಡಗಿದ್ದು, ಬೃಹತ್ ಪಾದಯಾತ್ರೆ, ಹೋರಾಟ ಸಂಘಟಿಸುವ ಕುರಿತು ಚರ್ಚಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಉತ್ಸಾಹಿ ಸಚಿವರಾದ ತಾವು ಮಂಗಳೂರಿನ ನಾಗರಿಕರೊಂದಿಗೆ, ನಾಗರಿಕ ಸಂಘಟನೆಗಳ ಜೊತೆ ನಿಲ್ಲುತ್ತೀರಿ, ಆ ಮೂಲಕ ಬಿಜೆಪಿ ಮೇಯರ್ ನಿಮ್ಮ ಹೆಸರಿಗೆ ಅಂಟಿಸಿರುವ ಕಳಂಕದಿಂದ ಕಳಚಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ.
ಶುಭಾಶಯಗಳೊಂದಿಗೆ
ಮುನೀರ್ ಕಾಟಿಪಳ್ಳ
ಸಂಚಾಲಕರು, ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಮಂಗಳೂರು
