ಒಪ್ಪಿತ ಸಂಬಂಧವು ಮಹಿಳೆಯ ಮೇಲೆ ಹಲ್ಲೆ ನಡೆಸಲು ಲೈಸೆನ್ಸ್ ಅಲ್ಲ ಎಂದು ಹೇಳಿರುವ ಹೈಕೋರ್ಟ್, ಹಲವು ವರ್ಷಗಳ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯ ಮೇಲೆ ಮಹಿಳೆ ಹೂಡಿದ್ದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ.
ಆದರೆ, ಆರೋಪಿ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಮತ್ತು ವಂಚಿಸಿದ್ದಾನೆಂಬ ಆರೋಪಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಪ್ರಕರಣ ರದ್ದುಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, “ಆರೋಪಿ ವ್ಯಕ್ತಿ ಮತ್ತು ದೂರುದಾರ ಮಹಿಳೆ ನಡುವೆ ಎಷ್ಟು ವರ್ಷದ ಒಪ್ಪಿತ ಸಂಬಂಧವಿರಬಹುದು. ಆದರೆ, ಅದೇ ಆತನಿಗೆ ಆಕೆಯ ಮೇಲೆ ಹಲ್ಲೆ ನಡೆಸಲು ಲೈಸೆನ್ಸ್ ಆಗುವುದಿಲ್ಲ” ಎಂದು ಹೇಳಿದೆ.
“ಅರ್ಜಿದಾರ ಆರೋಪಿ ಮತ್ತು ಮಹಿಳೆ ನಡುವೆ ಎಷ್ಟು ವರ್ಷದ ಒಪ್ಪಿತ ಸಂಬಂಧವಿದೆ. ಮದುವೆಯಾಗುವುದಾಗಿ ನಂಬಿಸಿ ತನ್ನ ಜತೆ ಲೈಂಗಿಕ ಸಂಪರ್ಕ ಹೊಂದಿದ್ದರು ಎಂದು ದೂರುದಾರರ ಮಹಿಳೆ ಹೇಳಿದ್ದಾರೆ. ಅದರಂತೆ ಐಪಿಎಸ್ ಸೆಕ್ಷನ್ 376, 417, 504 ಮತ್ತು 506 ರಡಿ ಆರೋಪ ಎಸಗಿದ್ದಾರೆಂದು ತಿಳಿಸಿದ್ದಾರೆ. ಆದರೆ ಆರೋಪಿ ಆ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಗಾಯಗೊಂಡಿರುವುದು ಪ್ರಮಾಣಪತ್ರದಲ್ಲಿ ದಾಖಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಮಹಿಳೆ ದೂರಿನಲ್ಲಿ ಮಾಡಿರುವ ಆರೋಪಗಳನ್ನು ಒಪ್ಪಲಾಗದು. ಅರ್ಜಿದಾರ ಆರೋಪಿ ಹೇಳಿರುವಂತೆ ಮಹಿಳೆ ಮತ್ತೊಬ್ಬ ವ್ಯಕ್ತಿಯ ಜತೆಯೂ ಸಂಬಂಧ ಹೊಂದಿದ್ದಾರೆಂದು ತಿಳಿಸಿದ್ದಾರೆ. ಹಾಗಾಗಿ, ದೂರುದಾರ ಮಹಿಳೆ ಎರಡು ದೋಣಿಯಲ್ಲಿ ಏಕಕಾಲದಲ್ಲಿ ತೇಲುತ್ತಿದ್ದಾರೆನಿಸುತ್ತದೆ. ಆದ್ದರಿಂದ ಐಪಿಸಿ ಸೆಕ್ಷನ್ 376 ರಡಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾರೆ ಎಂಬ ವಾದವನ್ನು ಒಪ್ಪಲಾಗದು. ಅದೆಲ್ಲಾ ಸುಳ್ಳು” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
