ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಕಲಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳು ಒಂದು ಶನಿವಾರ ‘ಬ್ಯಾಗ್ ರಹಿತ ದಿನ’ ಆಚರಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇ ಆರ್ ಟಿ) ನಿರ್ದೇಶನ ನೀಡಿದೆ.
ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆ ಬೆಳೆಸಲು ವಿವಿಧ ಥೀಮ್ ಗಳನ್ನು ಆಧರಿಸಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್ ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿ ಸಿದ್ಧಪಡಿಸಲಾಗಿದೆ. ಈ ಮಾಡ್ಯೂಲ್ ಗಳು ಅರಿವು, ಅನುಭವ ಮತ್ತು ಅವಲೋಕನ ಎಂಬ 3 ಹಂತಗಳಿದ್ದು ವಿದ್ಯಾರ್ಥಿಗಳೇ ಸ್ವತಃ ಕೈಗೊಳ್ಳಬಹುದಾದ ಚಟುವಟಿಕೆ ನೀಡಲಾಗಿದೆ.

‘ಸಂಭ್ರಮ ಶನಿವಾರ’ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಸಿದ್ಧಪಡಿಸುವ ವಿದ್ಯಾರ್ಥಿ ಚಟುವಟಿಕೆ ಹಾಗೂ ಶಿಕ್ಷಕರ ಕೈಪಿಡಿಯನ್ನು https://dsert.karnataka.gov.in ಆಫ್ ಲೋಡ್ ಮಾಡಲಾಗಿದೆ.
2022-23 ನೇ ಸಾಲಿನಿಂದ ನಿರಂತರವಾಗಿ ಪ್ರತಿ ತಿಂಗಳ ಮೂರನೇ ಶನಿವಾರ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ ಉರ್ದು ಶಾಲೆಗಳಲ್ಲಿ ಶನಿವಾರ ಪೂರ್ಣ ದಿನವಾಗಿದ್ದು, ಶುಕ್ರವಾರ ಅರ್ಧ ದಿನ ಶಾಲೆ ನಡೆಯುವುದರಿಂದ ಪ್ರತಿ ತಿಂಗಳ ಮೂರನೇ ಶುಕ್ರವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ಸೂಚಿಸಲಾಗಿದೆ.