ಸಾಲಕ್ಕೆ ಭದ್ರತೆಯಾಗಿ ನೀಡಿದ ಮೂಲ ದಾಖಲೆ ಹಿಂದಿರುಗಿಸದ ಪ್ರಕರಣದಲ್ಲಿ ಬ್ಯಾಂಕ್ 53.14 ಲಕ್ಷ ರೂಪಾಯಿ ಪಾವತಿಸಬೇಕು ಎಂದು ದ.ಕ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ನೀಡಿದೆ. ಮಂಗಳೂರು ತಾಲೂಕು ಕೆಂಜಾರಿನ ಸುನೀತಾ ಲಕ್ಷ್ಮಣ್ ಪೂಜಾರಿ ಅವರು ಕಂಕನಾಡಿಯಲ್ಲಿರುವ ಐಡಿಬಿಐ ಬ್ಯಾಂಕ್ ನಿಂದ 12 ಲಕ್ಷ ರೂಪಾಯಿ ಗೃಹಸಾಲ ಪಡೆದಿದ್ದರು. ಸಾಲದ ಬಾಬ್ತು ತಮ್ಮ ಮನೆಯ ಎಲ್ಲ ಮೂಲ ದಾಖಲೆಗಳನ್ನು ಬ್ಯಾಂಕ್ ನಲ್ಲಿ ಜಮೆ ಮಾಡಿದ್ದರು.
ಸಾಲದ ಮರುಪಾವತಿಯನ್ನು ನಿಗದಿತ ಅವಧಿಯ ಮುಂಚಿತವಾಗಿಯೇ ಮರುಪಾವತಿ ಮಾಡಿದ ನೆಲೆಯಲ್ಲಿ ತನ್ನ ಮಗಳಿಗೆ ಶಿಕ್ಷಣದ ಸಲುವಾಗಿ 9.90 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದಕ್ಕೆ ಬ್ಯಾಂಕ್ ನವರು ಭದ್ರತೆಯಾಗಿ ಮನೆಯ ಮೂಲ ದಾಖಲೆಗಳನ್ನು ವಶದಲ್ಲಿರಿಸಿಕೊಂಡಿದ್ದರು. ಸುನೀತಾ ಅವರು ಅವಧಿಯ ಮುಂಚೆಯೇ ಶಿಕ್ಷಣದ ಸಾಲವನ್ನು ಮರುಪಾವತಿ ಮಾಡಿದ್ದರು. ಆದರೆ ಮೂಲ ದಾಖಲೆಗಳನ್ನು ಬ್ಯಾಂಕ್ ನವರು ಹಿಂದಿರುಗಿಸಲಿಲ್ಲ. ಅದಕ್ಕಾಗಿ ಸುನೀತಾ ಅವರು ಪದೇ ಪದೇ ಬ್ಯಾಂಕ್ ಗೆ ಅಲೆದಾಡಿದರೂ ಸುಳ್ಳು ಕಾರಣಗಳನ್ನು ನೀಡುತ್ತಿದ್ದರು. ಕೊನೆಗೆ ಅವರ ಮೂಲ ದಾಖಲೆಗಳು ಬ್ಯಾಂಕ್ ನಲ್ಲಿ ಬೆಂಕಿಗಾಹುತಿಯಾಗಿದೆ ಎಂದು ಹೇಳಿದ್ದರು.

ನೊಂದ ಸುನೀತಾ ಮಂಗಳೂರಿನ ದ.ಕ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ನ್ಯಾಯಾಲಯ ಪ್ರಕರಣವನ್ನು ಪರಿಶೀಲಿಸಿ ಐಡಿಬಿಐ ಬ್ಯಾಂಕ್ ನವರು ಆಸ್ತಿಯ ಮೂಲ ದಾಖಲೆಗಳನ್ನು ಹಿಂತಿರುಗಿಸದೆ ಇರುವುದಕ್ಕೆ ಸುನೀತಾ ಅವರಿಗೆ 48,14, 980 ರೂಪಾಯಿ ಪಾವತಿಸಬೇಕು. ಅಲ್ಲದೆ ಪರಿಹಾರ ಧನವಾಗಿ 5 ಲಕ್ಷ ರೂಪಾಯಿ ನೀಡಬೇಕು ಎಂದು ಆದೇಶಿಸಿದೆ. ದೂರುದಾರರ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಚಂದ್ರಹಾಸ್ ಕದ್ರಿ ಮತ್ತು ದೀನನಾಥ ಶೆಟ್ಟಿ ವಾದಿಸಿದ್ದರು.
