ಬಡ್ಡಿ ಸಹಿತ ಮರುಪಾವತಿಸಲು ಗ್ರಾಹಕ ವೇದಿಕೆ ಆದೇಶ
ರೆಸಾರ್ಟ್ ನಲ್ಲಿ ನಡೆದ ಮದುವೆ ಕಾರ್ಯಕ್ರಮದ ವೆಚ್ಚಕ್ಕಿಂತ ಹೆಚ್ಚುವರಿ ಹಣ ಪಡೆದ ಆರೋಪದಲ್ಲಿ ರೆಸಾರ್ಟ್ ಆಡಳಿತ ಮಂಡಳಿ ಆ ಮೊತ್ತವನ್ನು ಬಡ್ಡಿ ಸಮೇತ ಮರು ಪಾವತಿ ಮಾಡಬೇಕೆಂದು ಮಂಗಳೂರಿನ ಗ್ರಾಹಕ ವೇದಿಕೆ ಆದೇಶ ನೀಡಿದೆ.
ಮಂಗಳೂರು ಕುಲಶೇಖರ ಕಲ್ಪನೆ ನಿವಾಸಿಗಳಾದ ಗಣೇಶ ಕೃಷ್ಣ ಮತ್ತು ಶೃಂಗ ಅವರ ವಿವಾಹ 2013 ರ ನವೆಂಬರ್ 27 ರಿಂದ 30 ರವರೆಗೆ ಚಿಕ್ಕಮಗಳೂರಿನ ಕರ್ಕ್ ನಳ್ಳಿ ಬಿಂದಿಗೆ ಗ್ರಾಮದ ಬಿಂದಿಗೆ ಪೀಕ್ ರೆಸಾರ್ಟ್ ನಲ್ಲಿ ಆಯೋಜಿಸಲಾಗಿತ್ತು. ಮದುವೆ ಕಾರ್ಯಕ್ರಮದ ಮುಂಚಿತವಾಗಿ ವಿವಾಹದ ಖರ್ಚಿನ ಬಗ್ಗೆ 14,21,345 ರೂಪಾಯಿಗಳಿಗೆ ಕರಾರು ಒಪ್ಪಂದ ನಡೆದಿದ್ದು, ಕರಾರಿನ ಷರತ್ತುಗಳಂತೆ ಹಣ ಪಾವತಿಸಿದ್ದರು. ಆದರೆ 18,55,038 ರೂಪಾಯಿಗಳನ್ನು ಪಾವತಿಸದಿದ್ದರೆ ರೆಸಾರ್ಟ್ ನಿಂದ ಕದಲುವಂತ್ತಿಲ್ಲ ಎಂದು ರೆಸಾರ್ಟ್ ನವರು ತಾಕೀತು ಮಾಡಿದ್ದರು. ಆ ಪರಿಸ್ಥಿತಿಯಲ್ಲಿ ಆಯೋಜಕರು ಹಣ ಪಾವತಿಸಿದ್ದರು.
ದಾಖಲೆಯಿಲ್ಲದೆ ರೆಸಾರ್ಟ್ ನವರು ವಿನಾಕಾರಣ 4,33,693 ರೂಪಾಯಿಗಳನ್ನು ಹೆಚ್ಚುವರಿ ಪಡೆದ ಹಿನ್ನಲೆಯಲ್ಲಿ ಮಂಗಳೂರಿನ ಜಿಲ್ಲಾ ಗ್ರಾಹಕರ ವೇದಿಕೆಗೆ ರೆಸಾರ್ಟ್ ಆಡಳಿತ ಮಂಡಳಿ ವಿರುದ್ಧ ದೂರು ಸಲ್ಲಿಸಿದ್ದರು. ನ್ಯಾಯಾಲಯ ದೂರನ್ನು ಪರಿಶೀಲಿಸಿ ಹೆಚ್ಚುವರಿಯಾಗಿ ಪಡೆದ ಹಣ 4,33,693 ರೂಪಾಯಿಗಳನ್ನು ವಾಪಾಸ್ ನೀಡುವಂತೆ ಹಾಗೂ ಆ ಹಣದ ಮೇಲೆ ಶೇಕಡಾ 8 ರಷ್ಟು ಬಡ್ಡಿಯನ್ನು 2024 ರ ಏಪ್ರಿಲ್ 18 ರಿಂದ ಅನ್ವಯವಾಗುವಂತೆ ನೀಡಬೇಕು. ಅಲ್ಲದೆ 35 ಸಾವಿರ ರೂಪಾಯಿಗಳನ್ನು ಪರಿಹಾರ ಧನವಾಗಿ ಕೊಡಬೇಕು ಎಂದು ಆದೇಶ ನೀಡಿದೆ. ದೂರುದಾರರ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಚಂದ್ರಹಾಸ್ ಕದ್ರಿ ಮತ್ತು ದೀನನಾಥ ಶೆಟ್ಟಿ ವಾದಿಸಿದ್ದರು.
