ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಪತ್ನಿ, ಮಕ್ಕಳು ತವರಿಗೆ ಹೋಗಿದ್ದಾಗ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿಗಳನ್ನು ಕಳ್ಳತನ ಮಾಡಿರುವ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಬಳಿ ನಡೆದಿದೆ.
ಮನೆ ಮಾಲಿಕ ಜಗನ್ನಾಥ್ ಅವರು ವಿದೇಶದಲ್ಲಿದ್ದು ಪತ್ನಿ ವಿಜಯ ಮತ್ತು ಮಕ್ಕಳಿಬ್ಬರು ಈಶ್ವರಮಂಗಲ ಸಮೀಪದ ತವರು ಮನೆಗೆ ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ 34ಗ್ರಾಂ ಚಿನ್ನಾಭರಣ, ವಿದೇಶದ ಕರೆನ್ಸಿ ನೋಟುಗಳನ್ನು ಕಳ್ಳತನ ನಡೆಸಿದ್ದಾರೆ.

ಮನೆಯಲ್ಲಿ ಎರಡು ನಾಯಿಗಳಿದ್ದು ಇದೀಗ ಒಂದು ನಾಯಿ ಕೂಡಾ ನಾಪತ್ತೆಯಾಗಿದೆ. ನಾಯಿಯನ್ನೂ ಕಳ್ಳರು ಕೊಂದಿರಬೇಕೆಂದು ಅಂದಾಜಿಸಲಾಗಿದೆ. ತವರು ಮನೆಯಿಂದ ವಿಜಯ ತನ್ನ ಮಕ್ಕಳೊಂದಿಗೆ ಬಂದಾಗ ಕಳ್ಳತನ ನಡೆದಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
