ಮುಸ್ಲಿಂ ವ್ಯಕ್ತಿಯ ಮೊದಲ ಮದುವೆ ರದ್ದಾಗದಿದ್ದರೆ, ಎರಡನೇ ಮದುವೆ ಊರ್ಜಿತವಲ್ಲ: ಹೈಕೋರ್ಟ್

ರಾಜ್ಯ

ಮುಸ್ಲಿಂ ವೈಯಕ್ತಿಕ ಕಾನೂನು ಆ ಸಮುದಾಯದ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ವಿವಾಹ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಮುಸ್ಲಿಂ ವ್ಯಕ್ತಿಯ ಎರಡನೇ ಪತ್ನಿ ಬಳ್ಳಾರಿಯ ಮೀನಾಕುಮಾರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಧಾರವಾಡ ಪೀಠದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ಪೀಠ ಮುಸ್ಲಿಮರ ಮದುವೆ ಸಂಬಂಧ ಈ ಆದೇಶ ನೀಡಿದೆ.

ಹೈಕೋರ್ಟ್​ನಲ್ಲಿ ನಡೆದ ಅರ್ಜಿ ವಿಚಾರಣೆ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ‘ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರು ಬಹು ವಿವಾಹ ಮಾಡಿಕೊಳ್ಳಲು ಅವಕಾಶ ನೀಡಿದೆ, ಆದರೂ ವೈಯಕ್ತಿಕ ಕಾನೂನಿನಡಿ ವಿವಾಹಗಳು ಶಾಸ್ತ್ರೋಕ್ತವಾಗಿ ನಡೆದರೆ ಮಾತ್ರ ಈ ಕಾನೂನು ಸ್ಥಾನವು ಚಾಲ್ತಿಯಲ್ಲಿರುತ್ತದೆ. ವಿಶೇಷ ವಿವಾಹ ಕಾಯಿದೆಯಡಿ ವಿವಾಹವಾಗಲು ಕಕ್ಷಿದಾರರು ಆಯ್ಕೆ ಮಾಡಿಕೊಂಡರೆ ಕಾನೂನುಬದ್ಧವಾಗುತ್ತದೆ. ಆಗ ಈಗಾಗಲೇ ವಿವಾಹವಾದ ವ್ಯಕ್ತಿಯ ಹಿಂದಿನ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರೆ ಈ ಕಾಯಿದೆಯಡಿ ಮತ್ತೊಂದು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ವಿವಾಹದಿಂದ ಬರುವ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ವೈಯಕ್ತಿಕ ಕಾನೂನಿನಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಕಾಯಿದೆಯ ನಿಬಂಧನೆಗಳಿಂದ ಮಾತ್ರ ನಿರ್ಧರಿಸಲಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ವಿಶೇಷ ವಿವಾಹ ಕಾಯಿದೆಯಡಿ 2008ರಲ್ಲಿ ಮುಸ್ಲಿಂ ಪುರುಷನನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು ತನ್ನನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ರು. ಈ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ವಿಶೇಷ ವಿವಾಹ ಕಾಯಿದೆಯಡಿ ಎರಡನೇ ವಿವಾಹವಾದಾಗ ಅರ್ಜಿದಾರರ ಮೊದಲ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರಿಂದ ಅರ್ಜಿದಾರರು ಮತ್ತು ಮೃತ ವ್ಯಕ್ತಿಯ ನಡುವಿನ ವಿವಾಹವು ಅನೂರ್ಜಿತವಾಗಿದೆ ಎಂದು ನ್ಯಾಯಾಲಯವು ಹೇಳಿದೆ. ಮೊದಲ ಮದುವೆ ರದ್ದಾಗದೇ ಇದ್ದಾಗ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಹಿಂದಿನ ವಿವಾಹ ಚಾಲ್ತಿಯಲ್ಲಿರುವುದರಿಂದ ಕಾಯಿದೆಯಡಿ ನಡೆದ ವಿವಾಹವು ಅನೂರ್ಜಿತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.