ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತ ಸಾಕಾರಗೊಂಡ ಬೆನ್ನಲ್ಲೇ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತಕರಾರು ಎತ್ತಿದೆ.
ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿಗಳಿದ್ದು, ಈ ಬಗ್ಗೆ ವಾಸ್ತವಾಂಶದ ಹಾಗೂ ಇಡೀ ಯೋಜನೆ ಕಾರ್ಯಸಾಧ್ಯತೆಯ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.
ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ದೇವನಹಳ್ಳಿ ಕೈಗಾರಿಕಾ ಪ್ರದೇಶದ ಕುಡಿಯುವ ನೀರು ಒದಗಿರುವ ಉದ್ದೇಶದ ಈ ಯೋಜನೆಗೆ ಈವರೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗಿದೆ.

ಪಶ್ಚಿಮ ಘಟ್ಟದ ಸೂಕ್ಷ್ಮ ಜೀವವೈವಿದ್ಯದ ಮೇಲೆ ಹಾನಿಯಾಗಿದೆ. ಇದಲ್ಲದೇ ಭೂಕುಸಿತದಿಂದ ಅನೇಕ ದುರಂತಗಳು ಸಂಭವಿಸಿವೆ. ಆದರೆ ಕುಡಿಯುವ ನೀರು ಒದಗಿಸುವ ಉದ್ದೇಶವೇ ಈಡೇರಿಲ್ಲ. ಬರಪೀಡಿತ ಪ್ರದೇಶಕ್ಕೆ ಹನಿ ನೀರು ಕೂಡ ಹರಿದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿರುವ ಸಚಿವಾಲಯ, ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದೆ.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಪಶ್ವಿಮಾಭಿಮುಖವಾಗಿ ಹರಿಯುವ ನದಿಗಳಿಂದ ವಾರ್ಷಿಕ 24.01 ಟಿ.ಎಂ.ಸಿ ಪ್ರವಾಹದ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸಿ, ಕುಡಿಯುವ ನೀರಿನ ತೀವ್ರ ಆಭಾವ ಎದುರಿಸುತ್ತಿರುವ ರಾಜ್ಯದ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಹಾಗೂ ಅಂತರ್ಜಲ ಮರುಪೂರಣಕ್ಕಾಗಿ ಈ ಭಾಗಗಳಲ್ಲಿನ ಸುಮಾರು 527 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ 5೦% ರಷ್ಟು ನೀರು ತುಂಬಿಸುವ ಉದ್ದೇಶಿತ ಎತ್ತಿನಹೊಳೆ ಯೋಜನೆಗೆ ಸರ್ಕಾರವು ದಿನಾಂಕ: 17/02/2014 ರಲ್ಲಿ ಪರಿಷ್ಕೃತ ಯೋಜನಾ ವರದಿಗೆ ರೂ.12,912.36 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.