ವಿವಾಹವೇ ದಂಧೆ.! ಚಾಲಾಕಿ ಮಹಿಳೆ ಬಗ್ಗೆ ಜಾಗ್ರತೆ ವಹಿಸಲು ಕೋರ್ಟ್ ಸೂಚನೆ

ರಾಜ್ಯ

ಹತ್ತು ಪ್ರಕರಣ ದಾಖಲು, ಹನ್ನೊಂದನೇ ಪ್ರಕರಣ ದಾಖಲಾಗುವುದನ್ನು ತಡೆಯಬೇಕಿದೆ: ಹೈಕೋರ್ಟ್

ಹಲವಾರು ಪುರುಷರ ವಿರುದ್ಧ ಕ್ರಿಮಿನಲ್‌ ಪ್ರಕರಣ ಹೂಡಿರುವ ಮಹಿಳೆಯ ಕುರಿತಾದ ಮಾಹಿತಿ ಒಳಗೊಂಡ ದತ್ತಾಂಶವನ್ನು ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳು ರವಾನಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿರುವ ಕರ್ನಾಟಕ ಹೈಕೋರ್ಟ್‌, ಮತ್ತೊಬ್ಬ ಪುರುಷನ ವಿರುದ್ಧ ಆಕೆ ದೂರು ನೀಡಲು ಬಂದಾಗ ಠಾಣೆಯ ಅಧಿಕಾರಿ ಎಚ್ಚರವಹಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ದೂರುದಾರೆಯಾಗಿರುವ ಕೊಡಗಿನ ಕುಶಾಲನಗರದ ದೀಪಿಕಾಳಿಂದ ನೊಂದ ಹತ್ತನೇ ಪತಿ ಹಾಸನ ಜಿಲ್ಲೆಯ ಸಕಲೇಶಪುರದ ಪಿ.ಕೆ ವಿವೇಕ ತನ್ನ ಹಾಗೂ ತನ್ನ ಕುಟುಂಬದವರ ವಿರುದ್ಧ ಕುಶಾಲನಗರದ ಮುಳ್ಳುಸೋಗೆಯಲ್ಲಿ ದೀಪಿಕಾ ಹೂಡಿರುವ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಹಲವಾರು ಪುರುಷರ ವಿರುದ್ಧ ಈಗಾಗಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪರಾಧಿಕ ಪಿತೂರಿ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿ ಹಲವು ಆರೋಪ ಮಾಡಿ ರಾಜ್ಯದ ವಿವಿಧೆಡೆ 10 ಪ್ರಕರಣಗಳನ್ನು ದಾಖಲಿಸಿರುವ ದೀಪಿಕಾ 11ನೇ ಪ್ರಕರಣ ದಾಖಲಿಸುವುದನ್ನು ತಡೆಯಬೇಕಾದರೆ ಆಕೆಯ ಬಗ್ಗೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಮಾಹಿತಿ ರವಾನಿಸುವುದು ಅಗತ್ಯ ಎಂದು ನ್ಯಾಯಾಲಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.

ಹತ್ತಕ್ಕೂ ಹೆಚ್ಚು ಪುರುಷರು ದೀಪಿಕಾಳ ಸಂಚು ಮತ್ತು ಕುತಂತ್ರಕ್ಕೆ ಸಿಲುಕಿ ನರಳಿದ್ದು, ತನ್ನ ಕಾರ್ಯವಿಧಾನದ ಮೂಲಕ ಆಕೆಯು ಹನಿಟ್ರ್ಯಾಪ್‌ ಚೌಕಟ್ಟನ್ನು ವಿಸ್ತರಿಸಿದ್ದಾರೆ. ಕಳೆದೊಂದು ದಶಕದಲ್ಲಿ ಆಕೆ 10 ಕ್ಕೂ ಪ್ರಕರಣ ದಾಖಲಿಸಿದ್ದಾರೆ. 11ನೇ ಪ್ರಕರಣ ದಾಖಲಾಗುವುದನ್ನು ತಡೆಯಬೇಕಿದೆ ಎಂದಿರುವ ನ್ಯಾಯಾಲಯವು ಆಕೆ ದಾಖಲಿಸಿರುವ 9 ಪ್ರಕರಣಗಳ ವಿವರಗಳನ್ನೂ ಆದೇಶದಲ್ಲಿ ಉಲ್ಲೇಖಿಸಿದೆ.

ದೀಪಿಕಾಗೆ ಸಂಬಂಧಿಸಿದ ವಿವರಗಳು ಈಗಾಗಲೇ ಹಲವು ಪೊಲೀಸ್‌ ಠಾಣೆಗಳಲ್ಲಿ ಲಭ್ಯವಿದೆ. ಆಕೆ ಮತ್ತೆ ಯಾವುದೇ ಪುರುಷನ ವಿರುದ್ಧ ಪ್ರಕರಣ ದಾಖಲಿಸಲು ಬಂದರೆ, ಅಂತಹ ಸಮಯದಲ್ಲಿ ಪೊಲೀಸರು ಸುಮ್ಮನೆ ಪ್ರಕರಣ ದಾಖಲಿಸದೆ ಆಕೆಯ ದೂರಿನ ವಿಚಾರದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ನಂತರವೇ ಮುಂದಿನ ಕ್ರಮ ಜರುಗಿಸಬೇಕು ಎಂದು ಪೀಠ ಹೇಳಿದೆ.

ಹಲವು ಪುರುಷರು ಮತ್ತು ಅವರ ಕುಟುಂಬದವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದೀಪಿಕಾ ದಾಖಲಿಸಿದ್ದಾರೆ. ಆಕೆಯ ಉದ್ದೇಶ ಕಿರುಕುಳ ನೀಡುವುದು. ಆದರೆ ಎಲ್ಲಾ ಪ್ರಕರಣಗಳಲ್ಲಿಆರೋಪಿಗಳು ಬಂಧನಕ್ಕೆ ಒಳಗಾಗಿ ನಂತರ ಜಾಮೀನಿನ ಮೇಲೆ ಹೊರಬಂದು ವಿಚಾರಣೆ ಎದುರಿಸಿ ಖುಲಾಸೆಯಾಗಿದ್ದಾರೆ. ದೀಪಿಕಾ ಹೆಣೆದಿರುವ ಜಾಲಕ್ಕೆ 10ಕ್ಕೂ ಅಧಿಕ ಪುರುಷರು ಬಿದ್ದಿದ್ದಾರೆ, ಕೆಲವರ ಮದುವೆ ಆಗಿದೆ, ಕೆಲವರು ಮದುವೆ ಆಗಿಲ್ಲ, ಆದರೂ ಪ್ರಕರಣ ಎದುರಿಸುವಂತಾಗಿದೆ. ಆಕೆಯ ದೂರಿನಲ್ಲಿ ಸತ್ಯಾಂಶವಿಲ್ಲ. ಪೊಲೀಸರು ನಕಲಿ ಪ್ರಕರಣಗಳ ತನಿಖೆ ನಡೆಸುವುದರಿಂದ ನ್ಯಾಯಾಲಯ ಅವುಗಳ ವಿಚಾರಣೆ ನಡೆಸಬೇಕಿರುವುದರಿಂದ ಅಮೂಲ್ಯ ಸಮಯವೂ ವ್ಯರ್ಥವಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.