ಲೋಕಸಭೆ ವಿರೋಧ ಪಕ್ಷದ ನಾಯಕರಾದ ನಂತರ ಇದೇ ಮೊದಲ ಬಾರಿಗೆ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ ರಾಹುಲ್ ಗಾಂಧಿ. ರಾಹುಲ್ ಅಮೆರಿಕಾ ಭೇಟಿ ರಾಜಕೀಯ ವಲಯಗಳಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಅಮೆರಿಕಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ರವರನ್ನು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮೇರಿಕಾದಲ್ಲಿ ರಾಹುಲ್ ಗಾಂಧಿ ಅನೇಕ ವಿಶ್ವವಿದ್ಯಾಲಯಗಳು, ಅನಿವಾಸಿ ಭಾರತೀಯರ ಸಭೆಯಲ್ಲಿ ಭಾಗವಹಿಸಿ ಸಂವಾದದಲ್ಲಿ ಮೋದಿಯನ್ನು, ಬಿಜೆಪಿಯನ್ನು, ಆರ್ ಎಸ್ ಎಸ್ ಅನ್ನು ಕೆಣಕುತ್ತಿದ್ದಾರೆ. ರಾಹುಲ್ ಗಾಂಧಿ ಭಾಷಣ ಭಾರೀ ವೈರಲ್ ಆಗುತ್ತಿದೆ. ಈ ಮಧ್ಯೆ ರಾಹುಲ್ ಭಾಷಣದ ಬಗ್ಗೆ ಕೆಲವೊಂದು ಭಾರತೀಯ ಮಾಧ್ಯಮಗಳು ಹಾಗೂ ಬಿಜೆಪಿ ತಿರುಚಿರುವ ರೀತಿಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದು, ರಾಹುಲ್ ಗಾಂಧಿ ಯನ್ನು ವಿಲನ್ ರೀತಿ ಚಿತ್ರಿಸಲು ಪೈಪೋಟಿಗೆ ಇಳಿದಿದೆ.

ಸಂವಾದ ವೊಂದರಲ್ಲಿ ರಾಹುಲ್ ಗಾಂಧಿ ಯವರು ಮೀಸಲಾತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ “ಭಾರತದಲ್ಲಿ ಯಾವತ್ತು ಸಮಾನತೆ ಬರುತ್ತದೋ ಅಂದು ಮೀಸಲಾತಿ ತೆಗೆಯುವ ಕುರಿತು ಯೋಚಿಸುತ್ತೇವೆ” ಎಂದಿದ್ದರು. ಇದರ ಒಟ್ಟಾರೆ ಅರ್ಥ ಭಾರತದಲ್ಲಿ ಸಮಾನತೆಯೆನ್ನುವುದು ಕನಸಿನ ಮಾತು. ಹಾಗೆಯೇ ಮೀಸಲಾತಿ ತೆಗೆದು ಹಾಕುವುದು ಕೂಡಾ ಕನಸಿನ ಮಾತು. ದೇಶದಲ್ಲಿ ದಿನದಿಂದ ದಿನಕ್ಕೆ ಮೇಲ್ಜಾತಿಯೆಂದು ತಮ್ಮನ್ನು ತಾವೇ ಕರೆದುಕೊಳ್ಳುವ ಜನರು ಸೃಷ್ಟಿಸುತ್ತಿರುವ ಜಾತಿ ಶ್ರೇಷ್ಠತೆಯ ಅಮಲನ್ನು ಗಮನಿಸಿದರೆ ಈ ದೇಶದಲ್ಲಿ ಸಮಾನತೆ ಯೆನ್ನುವುದು ಎಂದಿಗೂ ಕನಸು ಎನ್ನುವುದು ಎಂತಹವರಿಗೂ ಅರ್ಥವಾಗುತ್ತದೆ.
ರಾಹುಲ್ ಅಮೆರಿಕಾ ದಲ್ಲಿ ಮಾಡಿರುವ ಭಾಷಣದ ಒಟ್ಟಾರೆ ತಾತ್ಪರ್ಯ ಎಂದರೆ ಭಾಷೆ, ಧಾರ್ಮಿಕ ನೆಲೆಗಳ ಅಡಿ ಬೇದಭಾವ ಮಾಡುವುದೆಂದರೆ ನಮ್ಮ ಸಾಂಸ್ಕೃತಿಕ ಬದುಕು, ಬದುಕಿನ ವಿಧಾನ ಮತ್ತು ಆ ನೆಲೆಯಲ್ಲಿ ಬದುಕಿದ ನಮ್ಮ ಹಿರಿಯರನ್ನು ಅವಮಾನಗೊಳಿಸಿದಂತೆ. ಸಹಬಾಳ್ವೆ, ಸಂವಿಧಾನದ ಮಹತ್ವ, ದೇಶದಲ್ಲಿ ಹಣದುಬ್ಬರ, ಅತ್ಯಾಚಾರ, ಕೋಮುವಾದ, ಭ್ರಷ್ಟಾಚಾರ, ನಿರುದ್ಯೋಗ ಈ ವಿಚಾರದ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡಿದ್ದಾರೆ. ಆದರೆ ಬಿಜೆಪಿ ಈ ಹೇಳಿಕೆಯನ್ನೇ ತಿರುಚಿ ಭಾರತ ವಿರೋಧಿ ಹೇಳಿಕೆ ಎಂದು ಪ್ರಚುರಪಡಿಸಿತ್ತು. ಕೆಲವು ಮಾಧ್ಯಮಗಳು ಕೂಡ ಬಿಜೆಪಿ ಕಚೇರಿಯಲ್ಲಿ ಕೊಟ್ಟ ವರದಿಯಂತೆ ಪ್ರಕಟಿಸುತ್ತಿದೆ.

ಎನ್ ಡಿಎ ಭಾಗವಾಗಿರುವ ಚಿರಾಗ್ ಪಾಸ್ವಾನ್, ಹಲವು ಬಿಜೆಪಿ ನಾಯಕರು, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಹಲವರು ರಾಹುಲ್ ಗಾಂಧಿ ಹೇಳಿಕೆಯನ್ನು ವಿವಾದ ಮಾಡಲು ಹೆಣಗಾಡುತ್ತಿದ್ದಾರೆ. ಆದರೆ ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಸತ್ಯವನ್ನು ಸುಳ್ಳೆಂದು ಸಾಬೀತು ಪಡಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಭಾಷಣವನ್ನು ಜನರು ಕೇಳಿಯಾಗಿದೆ. ಇವರೆಲ್ಲರೂ ಏನೇ ತಿಪ್ಪರಲಾಗ ಹಾಕಿದರೂ ಸುಳ್ಳನ್ನು ಸತ್ಯ ಎಂದು ನಂಬಲ್ಲ.
