ಬಿ.ಎ.ಮೊಯಿದಿನ್ ಅವರ ಆತ್ಮಕಥೆ “ನನ್ನೊಳಗಿನ ನಾನು” ಎಂಬ ಪುಸ್ತಕದಿಂದ
ನನಗೆ ಪ್ರಥಮ ಬಾರಿಗೆ ಸಣ್ಣ ಕೈಗಾರಿಕಾ ಸಚಿವ ಹುದ್ದೆ ನೀಡುವಾಗ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೆಚ್ಚುವರಿಯಾಗಿ ವಕ್ಫ್ ಖಾತೆಯನ್ನೂ ನೀಡಿದ್ದರು. ಆ ಸಂದರ್ಭದಲ್ಲಿ ರೋಶನ್ ಬೇಗ್ ಅವರು ನನ್ನ ಬಳಿ ಕಾಡಿ-ಬೇಡಿಕೊಂಡಾಗ ಅವರ ಒತ್ತಾಯಕ್ಕೆ ಮಣಿದು ನಾನು ವಕ್ಫ್ ಖಾತೆಯನ್ನು ರೋಶನ್ ಬೇಗ್ ಅವರಿಗೆ ಬಿಟ್ಟುಕೊಟ್ಟಿದ್ದೆ. ಇದು ನಾನು ಮಾಡಿದ ಬಹಳ ದೊಡ್ಡ ತಪ್ಪು ಎಂದು ಅನಂತರ ಹಾಗೂ ಈಗಲೂ ನನಗೆ ಅನಿಸುತ್ತಿದೆ.
ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತಿ ಹೆಚ್ಚು ವಕ್ಫ್ ಆಸ್ತಿ ಹೊಂದಿರುವ ಮೂರನೇ ರಾಜ್ಯವಾಗಿದೆ. ಅಂದಾಜು 50 ಸಾವಿರ ಎಕರೆಗೂ ಹೆಚ್ಚು ಆಸ್ತಿ ಕರ್ನಾಟಕ ವಕ್ಫ್ ಮಂಡಳಿಯ ವಶದಲ್ಲಿದ್ದು ಇದರ ಮೌಲ್ಯ ಅಂದಾಜು ನಾಲ್ಕು ಲಕ್ಷ ಕೋಟಿ ರೂಪಾಯಿಗಳಾಗಬಹುದು.

ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಅತ್ಯಂತ ಸುವ್ಯವಸ್ಥಿತವಾಗಿ ಕಬಳಿಸಲಾಗುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಗಳ ದುರುಪಯೋಗವಾಗಿದೆ ಮತ್ತು ಈ ಆಸ್ತಿ ಲೂಟಿಯ ಮುಂಚೂಣಿಯಲ್ಲಿರುವವರು ಸಮದಾಯದ ನಾಯಕತ್ವದ ಮುಂಚೂಣಿಯಲ್ಲಿರುವ ಮುಸ್ಲಿಮರೇ ಆಗಿದ್ದಾರೆ ಎಂಬುದು ಬಹಳ ನೋವಿನ ಸಂಗತಿ. ದೊಡ್ಡ ದೊಡ್ಡ ಆಸ್ತಿಗಳನ್ನು ಲೀಸ್ (ಭೋಗ್ಯ)ಗೆ ಕೊಡುವಲ್ಲಿ, ಕಾಂಪ್ಲೆಕ್ಸ್ ಗಳನ್ನು ಕಟ್ಟಿ ಬಾಡಿಗೆಗೆ ನೀಡುವಲ್ಲಿ ವ್ಯವಸ್ಥಿತ ಮೋಸ ನಡೆದಿದ್ದು, ಸಾವಿರಾರು ಕೋಟಿ ರೂಪಾಯಿ ಆಸ್ತಿಗಳು ಯಾರ ಯಾರ ಪಾಲಾಗಿವೆ. ಕರ್ನಾಟಕದ ವಕ್ಫ್ ಆಸ್ತಿ ಹಗರಣ ಬಹಳ ದೊಡ್ಡ ಒಂದು ವ್ಯವಸ್ಥಿತ ಹಗರಣವಾಗಿದೆ. ನಾನು ಅಂದು ವಕ್ಫ್ ಖಾತೆಯನ್ನು ರೋಶನ್ ಬೇಗ್ ಅವರಿಗೆ ಬಿಟ್ಟುಕೊಡದೇ ಇದ್ದಿದ್ದರೆ ಖಂಡಿತಾ ವಕ್ಫ್ ಆಸ್ತಿಯನ್ನು ನುಂಗಿ ನೀರು ಕುಡಿದವರನ್ನು ಜಾಲಾಡಿಸಿಬಿಡುತ್ತಿದ್ದೆ. ಆ ವ್ಯಕ್ತಿಗಳು ಯಾರೇ ಆಗಿರಲಿ, ಎಷ್ಟೇ ದೊಡ್ಡ ಪ್ರಭಾವಿ ವ್ಯಕ್ತಿಗಳಾಗಿರಲಿ ಅವರು ಮುಸ್ಲಿಂ ಸಮಾಜದ ಶತ್ರುಗಳು. ಮುಖಕ್ಕೆ ಉಗಿಸಿಕೊಳ್ಳುವಷ್ಟೂ ಅರ್ಹತೆ ಇಲ್ಲದವರು.
ಈಗಲೂ ಸರಕಾರ ಹಿಂಜರಿಯದೇ, ವಕ್ಫ್ ಆಸ್ತಿಗಳ ದುರುಪಯೋಗದ ಸಮಗ್ರ ತನಿಖೆ ನಡೆಸಬೇಕು. ಕೈತಪ್ಪಿರುವ ಆಸ್ತಿ ಮರಳಿ ವಕ್ಫ್ ಮಂಡಳಿಗೆ ಸಿಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ನಾನು ಸರಕಾರವನ್ನು ಒತ್ತಾಯಿಸುತ್ತೇನೆ.
{ರಾಜಕೀಯ ಮುತ್ಸದ್ದಿ ಮರ್ಹೂಮ್ ಬಿ.ಎ.ಮೊಯಿದಿನ್ ಅವರ ಆತ್ಮಕಥೆ
“ನನ್ನೊಳಗಿನ ನಾನು”
ಎಂಬ ಪುಸ್ತಕದ ಆಯ್ದ ಭಾಗ.}
