ಮಂಗಳೂರು ಮೂಡಕ್ಕೆ ಹೋದವರು ‘ಮೂಢರು’

ಕರಾವಳಿ

ಮುಡಾ.. ಡೀಲ್.. ದರ್ಬಾರ್!

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಲಂಚ ಮುಕ್ತ ಪ್ರಾಧಿಕಾರ ಅನ್ನುವುದು ಕನಸಿನ ಮಾತು. ಮಂಗಳೂರು ಮೂಡಕ್ಕೆ ಹೋದವರು ‘ಮೂಢರು’ ಅನ್ನುವ ಪರಿಸ್ಥಿತಿ ಇದೆ. ಮಂಗಳೂರು ಮೂಡಕ್ಕೆ ಯಾವುದೇ ಒಂದು ಫೈಲ್ ಹೋದ್ರೆ ಸಾಕು, ಆ ಫೈಲ್ ಕ್ಲಿಯರ್ ಆಗಬೇಕಾದರೆ ಅದಕ್ಕೆ ಸಂಬಂಧಪಟ್ಟವರಿಗೆ ಇಂತಿಷ್ಟು ಕಾಣಿಕೆ ಕೊಟ್ಟ ಮೇಲೆಯೇ, ಆ ಫೈಲ್ ಕ್ಲಿಯರ್ ಆಗುವುದು ಅನ್ನುವುದು ಸತ್ಯವಾದ ಮಾತು. ದಲ್ಲಾಳಿಗಳು ಇಲ್ಲದೆ ಮೂಡಾದಲ್ಲಿ ಯಾವುದೇ ಫೈಲ್ ಕ್ಲಿಯರ್ ಆಗುವುದಿಲ್ಲ. ಮೂಡಾದ ಆಯುಕ್ತರಿಂದ ಹಿಡಿದು ಅವರ ಕೈ ಕೆಳಗಿನ ಅಧಿಕಾರಿಗಳು ಫೈಲಿಗೆ ಇಂತಿಷ್ಟು ರೇಟ್ ಅಂತ ಫಿಕ್ಸ್ ಮಾಡಿಕೊಂಡೇ ಕುಂತು ಬಿಟ್ಟಿದ್ದಾರೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಚಿನ್ನದ ಮೊಟ್ಟೆ ಇಡುವ ಕೇಂದ್ರ ಅಂದರೂ ತಪ್ಪಲ್ಲ. ಇಲ್ಲಿನ ಒಬ್ಬೊಬ್ಬ ಅಧಿಕಾರಿ ಕೋಟಿಗಟ್ಟಲೆ ತೂಗುವ ತಿಮಿಂಗಿಲಗಳು. ಲಕ್ಷ, ಕೋಟಿಯಲ್ಲೇ ವ್ಯವಹಾರ. ಸಿಬ್ಬಂದಿಗಳಂತೂ ಲಕ್ಷ ಲಕ್ಷ ಎಣಿಸುವವರು. ಸರಕಾರಿ ಉದ್ಯೋಗಿಗಳು ನನಗೆ ಮಂಗಳೂರು ಮೂಡ ಕರುಣಿಸಿಯಪ್ಪ ಅಂತ ಬೇಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಬೇರೆ ಕಚೇರಿಯಲ್ಲಿ ವರ್ಷಕ್ಕೆ ಮಾಡುವ ಗಿಂಬಳ ಮೂಡಾದಲ್ಲಿ ತಿಂಗಳಿಗೆ ಬಂದು ತಲುಪುತ್ತದೆ. ವೈಟ್ ಕಾಲರ್ ಗಳ ಹಿಂದೆ ಬಿದ್ದು ಮೂಡಕ್ಕೆ ಜಂಪ್ ಮಾಡುವವರ ಸಂಖ್ಯೆಗೇನೂ ಕೊರತೆಯಿಲ್ಲ.

ಯಾವುದೇ ಕಟ್ಟಡ ಕಟ್ಟುವುದಿದ್ದರೂ ಮೂಡ ಅಫ್ರೂವಲ್ ಬೇಕೇ ಬೇಕು. ಎಲ್ಲಾ ರೀತಿಯ ಕಾಮಗಾರಿಗಳಿಗೆ ನಿರಾಕ್ಷೇಪಣಾ ಪತ್ರ ನೀಡುವುದು ಮೂಡ. ಸಿಂಗಲ್ ಸೈಟ್ ಮಾಡುವುದಿದ್ದರೂ ಮೂಡಾದ ಅನುಮತಿ ಬೇಕೇ ಬೇಕು. ಸಿಂಗಲ್ ಲೇ ಔಟ್ ಗೆ ಆಂತೂ ಮೂಡದ ಕ್ಲಾರ್ಕ್ ನಿಂದ ಹಿಡಿದು ಮೇಲಿನವರೆಗೂ ಪರ್ಸಂಟೇಜ್ ಕೊಟ್ಟ ಮೇಲೇನೇ ನಿಮ್ಮ ಕೆಲಸ ಆದೀತು. ಮಾತ್ರವಲ್ಲ ಜನಸಾಮಾನ್ಯರು ನೇರವಾಗಿ ದಾಖಲೆ ಹಿಡಿದುಕೊಂಡು ಕೆಲಸ ಮಾಡಿಕೊಡಿ ಅಂತ ಮೂಡಕ್ಕೆ ಬಂದರೆ ನಿಮ್ಮ ಮೂಡ್ ಅಂತೂ ಖರಾಬ್ ಆಗುವುದು ಖಂಡಿತ. ದಾಖಲೆಗಳು ಸರಿ ಇದ್ದರೂ ಒಂದು ಟೇಬಲ್ಲಿನಿಂದ ಇನ್ನೊಂದು ಟೇಬಲ್ ಗೆ ಹೋಗಲು ಕನಿಷ್ಠ ವರ್ಷವಾದರೂ ಬೇಕು. ನೀವು ದುಡ್ಡು ಕೊಡದಿದ್ದರೆ ಕೆಲಸವೇ ಆಗಲ್ಲ. ಅದರ ಬದಲು ಬ್ರೋಕರ್ ಮುಖಾಂತರ ನಿಮ್ಮ ಫೈಲ್ ಹೋದರೇನೇ ನಿಮ್ಮ ಫೈಲ್ ಕ್ಲಿಯರ್ ಆಗುವುದು. ಮೂಡ ಅಧಿಕಾರಿಗಳು ಹಾಗೂ ದಲ್ಲಾಳಿಗಳ ಮಧ್ಯೆ ಅಷ್ಟೊಂದು ಅವಿನಾಭಾವ ಸಂಬಂಧವಿದೆ. ಮೂಡದ ಗೋಡೆಗಳಲ್ಲಿ ‘ಮಧ್ಯವರ್ತಿಗಳಿಗೆ ಅವಕಾಶವಿಲ್ಲ’ ಅನ್ನುವ ಬೋರ್ಡ್ ತೋರಿಕೆಗಷ್ಟೇ. ಮಧ್ಯವರ್ತಿಗಳು ಇಲ್ಲದಿದ್ದರೆ ಮೂಡದಲ್ಲಿ ಕೆಲಸವೇ ಆಗಲ್ಲ.

ಮೂಡಾದ ಕರ್ಮಕಥೆ ಬದಲಾಗಿಲ್ಲ!

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಈ ಹಿಂದಿನ ಆಯುಕ್ತರು ಲೋಕಾಯುಕ್ತ ದಾಳಿಗೆ ಸಿಲುಕಿ ಜೈಲುಪಾಲಾದರು. ಅವರ ನಂತರ ಬಂದ ಆಯುಕ್ತರಾದರೂ ಮೂಡಾದ ಕರ್ಮಕಥೆ ಬದಲಾಯಿಸುತ್ತಾರೆ ಅಂದುಕೊಂಡಿದ್ದರು. ಆದರೆ ಆ ಕುರ್ಚಿಯಲ್ಲಿ ಕುಂತರೆ ಎಲ್ಲ ಸರಿ ಇರಲ್ಲ. ಮೊದಮೊದಲಿಗೆ ಸ್ಟ್ರಿಕ್ ಅಂತ ಹೇಳುತ್ತಿದ್ದರು. ಇಲ್ಲಿ ಗಾಂಧಿತಾತನ ದರ್ಶನವಾಗದೆ ಕಚೇರಿಯಿಂದ ಫೈಲ್ ಕ್ಲಿಯರೆನ್ಸ್ ಆಗುತ್ತಿಲ್ಲವಂತೆ! ಹೊಸಬರು ಬಂದಾಗ ಎಲ್ಲಾ ಫೈಲ್ ಗಳನ್ನು ಬಾಕಿ ಇಡುತ್ತಾರೆ. ಬಾರಿ ಸ್ಟ್ರಿಕ್ ಅಂತ ಹರಿದಾಡುತ್ತದೆ. ಆದರೆ ಫೈಲ್ ಬಾಕಿ ಇಟ್ಟ ಕಾರಣ ಬರಬರುತ್ತಾ ಅರಿವಾಗುತ್ತದೆ. ಜನರ ಕೈಗೆ ಈಗಿನ ಅಧಿಕಾರಿ ಸಿಗುವುದೇ ಇಲ್ಲ ಅನ್ನುವ ಮಾತಿದೆ. ಸರ್ವೇ ಅಂತ, ಫೀಲ್ಡ್ ವರ್ಕ್ ಅಂತ ಕಚೇರಿಗಿಂತ ಹೆಚ್ಚಾಗಿ ಹೊರಗಡೆ ಇರುವುದಂತೆ. ಸರ್ವೇ ಮಾಡಲು ಸರ್ವೇಯರ್, ಆರ್ ಐ ಇರುವಾಗ ಮುಖ್ಯ ಅಧಿಕಾರಿಣಿಗೆ ಏನು ಕೆಲಸ?

ಮೂಡಾದಲ್ಲಿ 50 ಸೆಂಟ್ಸ್ ಜಮೀನನ್ನು ತುಂಡು ಮಾಡಿ ಭೂ ಪರಿವರ್ತನೆ ಮಾಡಲು ಅವಕಾಶ ಇದೆ. ಅದನ್ನು ಮಾಡಲು ಪ್ರತೀ ಸೆಂಟ್ಸ್ ಗೆ 15 ರಿಂದ 20 ಸಾವಿರ ರೂಪಾಯಿ ಟೇಬಲ್ ಗಿಡಬೇಕಂತೆ. ಇನ್ನು ಲೈಸೆನ್ಸ್ ಫೈಲ್, ಸಿಸಿ ಫೈಲ್, ಆ ಫೈಲ್, ಈ ಫೈಲಿಗಂತ ಇಲ್ಲಿಗೆ ತನ್ನ ಖಾಸಾ ಡ್ರೈವರ್ ಗಳ ಮೂಲಕವೇ ವ್ಯವಹಾರ! ಇನ್ನು ಕಚೇರಿಯಲ್ಲಿ ಕರುಣಾಕರ ಎಂಬವ ಫೈಲಿಗೆ ಇಂತಿಷ್ಟು ಅಂತ ಹಣ ಕಲೆಕ್ಟ್ ಮಾಡಿ ಅಧಿಕಾರಿಗಳಿಗೆ ಕೊಡುತ್ತಿದ್ದಾನೆ ಅನ್ನುವ ಆರೋಪ ಜೋರಾಗಿದೆ. ಮಾತ್ರವಲ್ಲ ಕೆಳಹಂತದ ಅಧಿಕಾರಿಗಳು ಹಣ ಕಲೆಕ್ಟ್ ಮಾಡಿದುವ ಕಸುಬು ಇಟ್ಟುಕೊಂಡಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ (ಈ ಬಗ್ಗೆ ಸಂಪೂರ್ಣ ವಿವರಗಳನ್ನು ದಾಖಲೆ ಸಮೇತ ಮುಂದೆ ವಿವರವಾಗಿ ತಿಳಿಸಲಾಗುವುದು).

ತುಳುವಿನಲ್ಲಿ ಒಂದು ಗಾದೆ ಮಾತಿದೆ. ‘ಉಮೆ ಮುಕ್ಕುನಯೆ ಪೋನಾಗ ತೌಡು ಮುಕ್ಕುನಾಯೆ ಬರ್ಪೆ’. ಮೂಡಕ್ಕೆ ಯಾವ ಅಧಿಕಾರಿಯೂ ಬಂದರೂ ಇದರ ಹಣೆಬರಹ ಅಷ್ಟೇ. ಅಭಿವೃದ್ಧಿ ಪ್ರಾಧಿಕಾರ ಅಂತ ಹೆಸರಿದ್ದರೂ ಅಭಿವೃದ್ಧಿಯಾಗಿರುವುದು ಮೂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ.

ಚೇಂಬರಿಗೆ ಬರುವ ಎಲ್ಲಾ ಫೈಲ್ ಗಳಿಗೆ ಸಹಿ ಹಾಕಿ ಇಡುತ್ತಾರಂತೆ. ಯಾಕೆಂದರೆ ಮೂಡಕ್ಕೆ ಈ ಹಿಂದೆ ಅನೇಕ ಬಾರಿ ಲೋಕಾಯುಕ್ತ ರೈಡ್ ಗಳು ನಡೆದಿದೆ. ಮೊದಲಿದ್ದ ಆಯುಕ್ತರು ದುಡ್ಡು ಕೊಡದಂತಹ ನೂರಾರು ಫೈಲ್ ಗಳನ್ನು ಹಾಗೆಯೇ ಇಟ್ಟಿದ್ದರು. ಜೈಲು ಕೂಡಾ ಸೇರಿದ್ದರು. ಹೊಸ ಅಧಿಕಾರಿಗೂ ಸ್ಥಳೀಯ ಬಿಲ್ಡರ್ ವೊಬ್ಬರಿಗೆ ಸಂಬಂಧಿಸಿದ ತಕರಾರು ಈಗಲೂ ನಡೆಯುತ್ತಿದೆ.

ಇತ್ತೀಚೆಗೆ ಪುತ್ತೂರು ಶಾಸಕರು ತಮ್ಮ ಫೈಲೇ ಮೂರು ತಿಂಗಳಿನಿಂದ ಕ್ಲಿಯರ್ ಆಗಿಲ್ಲ ಎಂದು ನೇರವಾಗಿ ಕಚೇರಿಗೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ದೊಡ್ಡ ಸುದ್ಧಿಯಾಗಿತ್ತು. ಓರ್ವ ಪ್ರಭಾವೀ ಜನಪ್ರತಿನಿಧಿಯ ಫೈಲೇ ಕ್ಲಿಯರ್ ಆಗದಿದ್ದರೆ ಇನ್ನು ಜನಸಾಮಾನ್ಯರ ಕಥೆಯೇನು?

ಇದೀಗ ಮೂಡಕ್ಕೆ ಬಂದ ಅಧಿಕಾರಿ ಪ್ರಭಾವೀ ಹಿನ್ನಲೆಯವರು ಅಂತ ಮಾತು ಕೇಳಿ ಬರುತ್ತಿದೆ. ಇನ್ನು ಮೂಡಾದ ಅಧ್ಯಕ್ಷರು ಆಗಲಿ, ಸದಸ್ಯರಾಗಲಿ ನಾಮ್ ಕಾವಸ್ತೆಗೆ. ಇಲ್ಲಿ ಎಲ್ಲವೂ ಹಿರಿಯ ಅಧಿಕಾರಿಗಳದ್ದೇ ಕಾರುಬಾರು!

ಮೂಡದ ಬೈಲಾ ಪ್ರಕಾರ ಬೋರ್ಡ್ ಮೀಟಿಂಗ್ ನಲ್ಲಿ ನಿರ್ಣಯ ಅಂಗೀಕಾರ ಆದರೆ ಮಾತ್ರ ಅದನ್ನು ಪಾಸ್ ಮಾಡುವ ಜವಾಬ್ದಾರಿ ಆಯುಕ್ತರದ್ದು. ಇಲ್ಲಿ ಅಧ್ಯಕ್ಷ, ಸದಸ್ಯರದ್ದು ಒಂದು ತೀರವಾದರೆ, ಆಯುಕ್ತರದ್ದು ಇನ್ನೊಂದು ತೀರಾ. ಬೋರ್ಡ್ ಮೀಟಿಂಗ್ ತೀರ್ಮಾನಕ್ಕೆ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ ಅನ್ನುವ ಆರೋಪ ಇದೆ. ರಾಜ್ಯಭಾರ ಮಾತ್ರ ಅಧಿಕಾರಿಯದ್ದು ಎಂಬ ದೂರುಗಳು ಕೇಳಿ ಬರುತ್ತಿದೆ. ಮೂಡಾ ಆಯುಕ್ತರಾದವರು ಯೋಜನಾ ಪ್ರಾಧಿಕಾರದ ಖಾಯಂ ಸದಸ್ಯರಲ್ಲ.

ಏಕ ವಿನ್ಯಾಸ, ಬಹು ವಿನ್ಯಾಸ, ಮೂಡಾ ಲೇ ಔಟ್ ಅಭಿವೃದ್ಧಿ ಯೋಜನೆ, ಶಿಕ್ಷಣ ಇಲಾಖೆಯ ಪ್ರಾರಂಭಿಕ, ತಾಂತ್ರಿಕ ಅನುಮೋದನೆ, ನಗರ ಅಭಿವೃದ್ಧಿ ಯೋಜನೆ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕಾದ ರೂಪುರೇಷೆ ಸಿದ್ಧಪಡಿಸಬೇಕು. ಆದರೆ ಇವರು ದುಡ್ಡು ಸಿಗುವಂತಹ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡುತ್ತಾರೆ.

ಮೂಡಾದ ಗೋಲ್ಮಾಲ್ ಪುರಾಣವನ್ನು ಬಿಚ್ಚಿಡುತ್ತಾ ಹೋದರೆ ಅದು ಕಾದಂಬರಿಯಾದೀತು. ಮೂಡಾದಲ್ಲಿ ನಡೆಯುತ್ತಿರುವ ಗೋಲ್ಮಾಲ್ ಒಂದೆರಡಲ್ಲ. ಮೈಸೂರು ಮೂಡಾ ಹಗರಣವನ್ನು ಮೀರಿಸುವಂತಹ ಹಗರಣಗಳ ರಾಶಿ ಮಂಗಳೂರು ಮೂಡಾದಲ್ಲಿ ಇದೆ. ಇದರ ಹಿಂದೆ ಇರುವವರು ಯಾರು? ಸವಿಸ್ತಾರವಾದ ವರದಿ ಮೂಡಿ ಬರಲಿದೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಏಕ ನೀವೇಶನ ಅನುಮೋದನೆಯ ನೆಪದಲ್ಲಿ ಅಧಿಕೃತ ಬಡಾವಣೆಗಳಿಗೆ ಅನುಮೋದನೆ ನೀಡಲು ಪ್ರಾಧಿಕಾರದ ಸಭೆಯು ದಿನಾಂಕ 31-7-2024ರಂದು ತೀರ್ಮಾನಿಸಿರುತ್ತದೆ ಕೃಷಿ ಜಮೀನುಗಳಿಗೆ ತುಂಡು ತುಂಡಾಗಿ ಭೂ ಪರಿವರ್ತನೆಯನ್ನು ಮಾಡಿ ಏಕ ನಿವೇಶನವೆಂದು ಅನುಮೋದನೆ ಪಡೆಯಲಾಗುತ್ತದೆ, ಈ ತರಹದ ನಿವೇಶನಗಳಿಗೆ ಯಾವುದೇ ಸರಕಾರಿ ರಸ್ತೆ ಸಂಪರ್ಕ ಇರುವುದಿಲ್ಲ. ಇದೊಂದು ಅನಾಧಿಕೃತ ಬಡಾವಣೆಯಾಗಿದ್ದು, ರಸ್ತೆ, ಚರಂಡಿ, ನಾಗರಿಕ ಸೌಲಭ್ಯ ನಿವೇಶನ ಅಥವಾ ಉದ್ಯಾನವನ ಯಾವುದೇ ಬೇರೆ ಮೂಲಭೂತ ಸೌಕರ್ಯ ಇರುವುದಿಲ್ಲ. ಇಂತಹ ಏಕ ನಿವೇಶನವೆಂದು ಅನುಮತಿ ನೀಡಲು ಆಯುಕ್ತರ ಅಭಿಪ್ರಾಯವನ್ನು ತಳ್ಳಿ ಹಾಕಿ ಪ್ರಾಧಿಕಾರದ ಸಭೆಯು ತೀರ್ಮಾನಿಸಿರುತ್ತದೆ, ಕೆಟಿಸಿಪಿ ಕಾಯ್ದೆ ಅಥವಾ ವಲಯ ನಿಯಮಳಿಗಳಲ್ಲಿ ಏಕ ನಿವೇಶನ ಏನೆಂದು ಸರಿಯಾದ ಮಾಹಿತಿ ಇಲ್ಲದಿರುವ ಕಾರಣ ಕೆಲವರು ಬಡಾವಣೆ ರಚಿಸಿ ಅನುಮೋದನೆ ಪಡೆಯುವ ಬದಲಿಗೆ ಅಡ್ಡದಾರಿ ಹಿಡಿದು ಈ ತರಹ ಬಡಾವಣೆಗಳಿಗೆ ಏಕ ನಿವೇಶನವೆಂದು ಅನುಮೋದನೆ ಪಡೆಯುತ್ತಿದ್ದಾರೆ. ಇಂತಹ ಭ್ರಷ್ಟರಿಗೆ ಸಹಾಯ ಮಾಡುವ ಸಲುವಾಗಿ ಪ್ರಾಧಿಕಾರದ ಸಭೆಯಲ್ಲಿ ನಿಯಮಬಾಹಿರವಾಗಿ ತುಂಡು ತುಂಡಾಗಿ ಭೂ ಪರಿವರ್ತನೆಯಾಗುವ ಜಾಗಕ್ಕೆ ಏಕ ನಿವೇಶನವೆಂದು ಅನುಮೋದನೆ ನೀಡಲು ತೀರ್ಮಾನಿಸಲಾಗುತ್ತದೆ. ತುಂಡು ತುಂಡಾಗಿ ಭೂ ಪರಿವರ್ತನೆಯಾದ ಜಮೀನುಗಳಿಗೆ ಏಕನಿವೇಶನವೆಂದು ಪರಿಗಣಿಸಿ, ಅನುಮೋದನೆ ನೀಡುವ ಪದ್ದತಿಯು ಪ್ರಾಧಿಕಾರದಲ್ಲಿ ಸುಮಾರು ವರ್ಷಗಳಿಂದ ನಡೆದು ಬಂದಿರುತ್ತದೆ, ಇದಕ್ಕೆ ಕಡಿವಾಣ ಹಾಕಲು ದಿನಾಂಕ 10-06-2024ರ ಪ್ರಾಧಿಕಾರದ ಸಭೆಯಲ್ಲಿ ವಿಷಯವನ್ನು ಮಂಡಿಸಲಾಯಿತು, ಈ ಸಭೆಯಲ್ಲಿ ಕೇವಲ 50 ಸೆಂಟ್ಸ್ ಜಮೀನನ್ನು ಹೊಂದಿರುವ ಸಣ್ಣ ಭೂ ಮಾಲೀಕರಿಗೆ ತಮ್ಮ ಸ್ವಂತ ಉಪಯೋಗಕ್ಕೆ ಜಮೀನಿಗೆ ಏಕ ನವೇಶನವೆಂದು ಅನುಮೋದನೆ ನೀಡಲು ತೀರ್ಮಾನಿಸಲಾಯಿತು, ಆದರೆ ಕೆಲವು ಪ್ರಬಾವಿ ವ್ಯಕ್ತಿಗಳ ಒತ್ತಡದಿಂದ 50 ಸೆಂಟ್ಸ್ ಬದಲಿಗೆ ಎರಡು ಎಕರೆಯವರೆಗೆ ತುಂಡು ತುಂಡು ಜಮೀನಿಗೆ ಏಕ ನಿವೇಶನವನ್ನಾಗಿ ಅನುಮೋದನೆ ನೀಡಲು ಪ್ರಾಧಿಕಾರದ ಸಭೆಯು ತೀರ್ಮಾನಿಸಿರುತ್ತದೆ. ಕೂಡಲೇ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ವರದಿ ಪಡೆದು ಆಗುತ್ತಿರುವ ಅಕ್ರಮವನ್ನು ತಡೆಗಟ್ಟಲು ಕ್ರಮವಹಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. ಹೀಗೆಯೇ ಮುಂದುವರಿದರೆ ಮಂಗಳೂರು ನಗರಾಭಿವೃದ್ದಿ ಪ್ರಧಿಕಾರದಲ್ಲಿ ಭ್ರಷ್ಟಾಚಾರ ಆಗುವುದಂತು ನಿಶ್ಚಿತ.

ಲೋಕಾಯುಕ್ತರಿಂದ ಮತ್ತೊಮ್ಮೆ ದಾಳಿಯಾಗಲಿ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಮನ್ಸೂರ್ ಅಲಿ ಯವರನ್ನು ಲೋಕಾಯುಕ್ತರು ರೆಡ್ ಹ್ಯಾಂಡಾಗಿ ಹಿಡಿದು ಜೈಲಿಗೆ ತಳ್ಳಿದ್ದರು. ತಕ್ಕಮಟ್ಟಿಗೆ ಸುಧಾರಿಸಿದ್ದ ಮೂಡದಲ್ಲಿ ಇದೀಗ ಮತ್ತೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೂಡ ಪಕ್ಕದಲ್ಲೇ ಇರುವ ಲೋಕಾಯುಕ್ತ ಕಚೇರಿಗೆ ವಾಸನೆ ಬಡಿಲಿಲ್ಲವೋ ಏನೋ? ಮತ್ತೊಮ್ಮೆ ಇಲ್ಲಿಗೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಸದೆ ಬಡಿಯಲಿ. ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದು ಜೈಲಿಗೆ ತಳ್ಳಿ. ಆ ಮೂಲಕವಾದರೂ ಇಲ್ಲಿನ ಜನಸಾಮಾನ್ಯರಿಗೆ ನೆಮ್ಮದಿ ಸಿಗಬಹುದು. ನೀವು ಇಲಿ ಹುಡುಕುವ ಮುನ್ನ ಇಲ್ಲಿನ ತಿಮಿಂಗಿಲಗಳಿಗೆ ಮತ್ತೊಮ್ಮೆ ಜೈಲಿನ ದಾರಿ ತೋರಿಸಿದರೆ ಜನರು ನಿಮಗೆ ಶಹಬ್ಬಾಸ್ ಗಿರಿ ಖಂಡಿತ ಕೊಡುತ್ತಾರೆ.