ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರಿಂದ ಕಿರುಕುಳ; ಗೃಹಿಣಿ ಮಹಾಲಕ್ಷ್ಮೀ ನೇಣು ಬಿಗಿದು ಆತ್ಮಹತ್ಯೆ, ದೂರು ದಾಖಲು

ಕರಾವಳಿ

ಮಳವಳ್ಳಿ ಮಲಿಯೂರಿನ ಗೃಹಿಣಿ ಮಹಾಲಕ್ಷ್ಮಿ ಎಂಬವರು ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲದ ಕಂತಿನ ಹಣ ತುಂಬುವಂತೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನೀಡಿದ ಕಿರುಕುಳವೇ ಕಾರಣ ಎಂದು ಅವರ ಗಂಡ ಮಲ್ಲು ಕಿರುಗಾವಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತ್ನಿಯು ಐದು ತಿಂಗಳ ಹಿಂದೆ ಧರ್ಮಸ್ಥಳ ಸಂಘದಲ್ಲಿ ರೂಪಾಯಿ ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಪ್ರತಿ ಬುಧವಾರ ರೂಪಾಯಿ 1,700 ರಂತೆ ಕಂತು ತುಂಬಬೇಕಿತ್ತು. ಸಂಸ್ಥೆಯ ಪ್ರತಿನಿಧಿಯೊಬ್ಬರು ಮನೆಯ ಬಳಿ ಬಂದು ಕೂಡಲೇ ಕಂತಿನ ಹಣ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದರಿಂದ ಮನನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡರು ಎಂದು ಆರೋಪಿಸಿದ್ದಾರೆ.

ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಆಶ್ರಯದದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ಕಾರ್ಯ ವಹಿವಾಟಿನ ಬಗ್ಗೆ ಮಳವಳ್ಳಿಯ ಕಾಂಗ್ರೆಸ್ ಶಾಸಕ ಪಿ. ಎಂ. ನರೇಂದ್ರಸ್ವಾಮಿ ಗಂಭೀರ ಆರೋಪವನ್ನು ಮಾಡಿದ್ದಾರೆ.

ಮಳವಳ್ಳಿ ತಾಲೂಕಿನ ಹಾಡ್ಲಿಯಲ್ಲಿ ಮಾತನಾಡುತ್ತಿದ್ದ ನರೇಂದ್ರಸ್ವಾಮಿ, “ಧರ್ಮಸ್ಥಳ ಸಂಘ ಇದೆಯಲ್ಲಾ, ಅದಕ್ಕೆ ನೀವು ಕಟ್ಟುತ್ತಿರುವ ಬಡ್ಡಿ ಎಷ್ಟು.? ನೀವೆಲ್ಲಾ ಮಂಜುನಾಥಸ್ವಾಮಿಯನ್ನು ನಂಬಿಕೊಂಡು ಬಿಟ್ಟಿದ್ದೀರಾ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಹೆಸರು ಮಾತ್ರ ಧರ್ಮಸ್ಥಳ, ಆದರೆ ಅಲ್ಲಿ ಧರ್ಮದ ಕೆಲಸವೇ ನಡೆಯುತ್ತಿಲ್ಲ. ವಾರಕ್ಕೆ, ತಿಂಗಳಿಗೆ ಬಡ್ಡಿ ಕಟ್ಟಿ, ಕೂಲಿನಾಲಿ ಮಾಡಿ ಕಷ್ಟಪಟ್ಟು ನೀವು ಯಾರನ್ನು ಶ್ರೀಮಂತರನ್ನಾಗಿ ಮಾಡುತ್ತಿದ್ದೀರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ವಿರುದ್ದ ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧಿಕ ಬಡ್ಡಿ, ಬಡ್ಡಿಗೆ ಚಕ್ರ ಬಡ್ಡಿ ಪಡೆಯುತ್ತಿದೆ. ಜನ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಈ ಆರೋಪದ ಬೆನ್ನಲ್ಲೇ ಗೃಹಿಣಿಯ ಆತ್ಮಹತ್ಯೆ ‌ಘಟನೆ ನಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ.